ಕಾಂಗ್ರೆಸ್ ಗೆದ್ದರೆ ಪಾಕ್‌ನಲ್ಲಿ ದೀಪಾವಳಿ: ಗುಜರಾತ್ ಸಿಎಂ

Update: 2019-03-25 04:10 GMT

ಅಹ್ಮದಾಬಾದ್, ಮಾ.25: ಲೋಕಸಭಾ ಚುನಾವಣೆಯಲ್ಲಿ ಒಂದು ವೇಳೆ ಕಾಂಗ್ರೆಸ್ ಪಕ್ಷ ಗೆದ್ದರೆ ಪಾಕಿಸ್ತಾನ ದೀಪಾವಳಿ ಆಚರಿಸಲಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

"ಇದು ಅಸಂಭವ; ಆದರೆ ಮೇ 23ರಂದು ಫಲಿತಾಂಶ ಪ್ರಕಟವಾದಾಗ ಒಂದು ವೇಳೆ ಕಾಂಗ್ರೆಸ್ ಗೆದ್ದರೆ ಪಾಕಿಸ್ತಾನ ದೀಪಾವಳಿ ಆಚರಿಸುತ್ತದೆ; ಏಕೆಂದರೆ ಅವರೆಲ್ಲರೂ ಪಾಕಿಸ್ತಾನದ ಜತೆ ಗುರುತಿಸಿಕೊಂಡಿದ್ದಾರೆ" ಎಂದು ಮೆಹಸಾನದಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ರ್ಯಾಲಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಆಪಾದಿಸಿದರು.

"ಮೇ 23ರಂದು ಮೋದಿ ಗೆಲುವನ್ನು ದೇಶದ ಜನ ಖಾತರಿಪಡಿಸುತ್ತಾರೆ. ಆ ಬಳಿಕ ಪಾಕಿಸ್ತಾನದಲ್ಲಿ ಶೋಕದ ವಾತಾವರಣ ಇರುತ್ತದೆ" ಎಂದು ಅವರು ಹೇಳಿದರು.

ಬಾಲಾಕೋಟ್ ವಾಯುದಾಳಿಯ ಪುರಾವೆ ಕೇಳಿದ ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ವಿರುದ್ಧ ರುಪಾನಿ ವಾಗ್ದಾಳಿ ನಡೆಸಿದರು. "ಪಾಕಿಸ್ತಾನ ಉಗ್ರರ ನೆಲೆ ಎನ್ನುವುದು ಇಡೀ ವಿಶ್ವಕ್ಕೆ ಗೊತ್ತು; ಆದರೆ ರಾಹುಲ್ ಅವರ ಶಿಕ್ಷಕ ಸ್ಯಾಮ್ ಪಿತ್ರೋಡಾ ಮಾತ್ರ ಐದರಿಂದ ಏಳು ಮಂದಿ ಮಾಡಿದ ಪುಲ್ವಾಮಾ ದಾಳಿಯ ಬಗ್ಗೆ ಪಾಕಿಸ್ತಾನದ ಮೇಲೆ ಆರೋಪ ಮಾಡುವುದು ತಪ್ಪು ಎನ್ನುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಪಾಕಿಸ್ತಾನದ ಭಾಷೆ ಮಾತನಾಡುತ್ತಾರೆ" ಎಂದು ಛೇಡಿಸಿದರು. ವಿರೋಧ ಪಕ್ಷಗಳು ಸಶಸ್ತ್ರ ಪಡೆಗಳನ್ನು ಅವಮಾನಿಸುತ್ತಿವೆ ಎಂಬ ಆರೋಪ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News