ನಯನತಾರಾ ಬಗ್ಗೆ ನಿಂದನಾತ್ಮಕ ಹೇಳಿಕೆ: ನಟ ರಾಧಾ ರವಿ ಡಿಎಂಕೆಯಿಂದ ಉಚ್ಚಾಟನೆ

Update: 2019-03-25 15:36 GMT

ಚೆನ್ನೈ, ಮಾ.25: ಜನಪ್ರಿಯ ನಟಿ ನಯನತಾರಾ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿರಿಯ ನಟ ರಾಧಾ ರವಿಯನ್ನು ಡಿಎಂಕೆ ಪಕ್ಷದಿಂದ ಉಚ್ಛಾಟಿಸಲಾಗಿದೆ.

‘ಕೊಲಯುತ್ತಿಲ್ ಕಾಲಂ’ ಚಲನಚಿತ್ರ ಬಿಡುಗಡೆಗೆ ಮುನ್ನ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಭಾಗವಹಿಸಿದ್ದ ರಾಧಾ ರವಿ ಈ ಸಂದರ್ಭ ನಯನತಾರಾರನ್ನು ಉಲ್ಲೇಖಿಸಿ ಆಕೆ ಬೇರೆ ಬೇರೆ ಚಿತ್ರಗಳಲ್ಲಿ ‘ಪ್ರೇತ’ ಹಾಗೂ ಸೀತೆಯ ಪಾತ್ರ ಮಾಡುತ್ತಿರುವ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಿದ್ದರು.

‘‘ಈ ಹಿಂದೆ ಕೆ.ಆರ್.ವಿಜಯಾರಂತಹ ನಟಿಯರನ್ನು ದೇವತೆಗಳ ಪಾತ್ರಕ್ಕಾಗಿ ಆರಿಸಲಾಗುತ್ತಿತ್ತು. ಆದರೆ ಇಂದು ಯಾರನ್ನು ಬೇಕಾದರೂ ದೇವತೆಯ ಪಾತ್ರಕ್ಕೆ ಆರಿಸಬಹುದು. ಅವರನ್ನು ನೋಡಿದಾಗ ನಿಮಗೆ ಪ್ರಾರ್ಥಿಸಬೇಕೆಂದು ಅನಿಸುವ ಪಾತ್ರಕ್ಕೂ ಆರಿಸಬಹುದು ಹಾಗೂ ಅವರನ್ನು ನೋಡಿದಾಗ ನಿಮ್ಮ ಕಡೆ ಕರೆಯಬೇಕೆಂದು ಅನಿಸುವವರನ್ನೂ ಆರಿಸಬಹುದು’’ ಎಂದು ಹೇಳಿದ್ದರು.

ಅವರ ಈ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ವರಲಕ್ಷ್ಮಿ ಶರತ್ ಕುಮಾರ್ ಹಾಗೂ ಚಿತ್ರ ತಯಾರಕ ವಿಘ್ನೇಶ್ ಶಿವನ್ ಟೀಕಿಸಿದ್ದರು. ಈ ಹೇಳಿಕೆ ಅಸ್ವೀಕಾರಾರ್ಹ ಎಂದು ಹೇಳಿದ್ದ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟ್ಯಾಲಿನ್ ನಟನ ವಿರುದ್ಧ ಕ್ರಮದ ಆಶ್ವಾಸನೆ ನೀಡಿದರು.

ಕಳೆದ ವರ್ಷ ರಾಧಾ ರವಿಯ ವಿರುದ್ಧ ಮೀಟೂ ಆರೋಪ ಹೊರಿಸಿದ್ದ ಗಾಯಕಿ ಚಿನ್ಮಯಿಯನ್ನು ನಟನ ನೇತೃತ್ವದ ಡಬ್ಬಿಂಗ್ ಯೂನಿಯನ್ ನಿಂದ ಹೊರಗಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ಟ್ರೈಲರ್ ಬಿಡುಗಡೆ ಸಂದರ್ಭದ ತನ್ನ ಭಾಷಣದಲ್ಲಿ ಪೊಲ್ಲಾಚಿ ಸರಣಿ ಲೈಂಗಿಕ ದೌರ್ಜನ್ಯ ಹಗರಣದ ಕುರಿತೂ ಮಾತನಾಡಿದ್ದ ರವಿ, “ದೊಡ್ಡ ಚಿತ್ರ ಮತ್ತು ಸಣ್ಣ ಚಿತ್ರದ ನಡುವೆ ವ್ಯತ್ಯಾಸವೇನು? ನೀವು ಒಮ್ಮೆ ಓರ್ವ ಬಾಲಕಿಯನ್ನು ಅತ್ಯಾಚಾರಗೈದರೆ ಅದು ಸಣ್ಣ ಚಿತ್ರ ಮತ್ತು ಪೊಲ್ಲಾಚಿಯಂತೆ ಒಮ್ಮೆ 40 ಮಹಿಳೆಯರ ಮೇಲೆ ಅತ್ಯಾಚಾರವೆಸಗಿದರೆ ಅದು ದೊಡ್ಡ ಚಿತ್ರವಾಗುತ್ತದೆ” ಎಂದಿದ್ದರು. ಅವರ ಭಾಷಣದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ತಮಿಳು ಚಿತ್ರರಂಗದ ಒಂದು ವರ್ಗವು ರವಿ ಹೇಳಿಕೆಗಳನ್ನು ಖಂಡಿಸಿದೆ.

ರವಿಯವರ ಸೆಕ್ಸಿಸ್ಟ್ ಹೇಳಿಕೆಯನ್ನು ಮೊದಲು ಬೆಟ್ಟು ಮಾಡಿದ್ದು ಗಾಯಕಿ ಚಿನ್ಮಯಿ ಶ್ರೀಪಾದ್. ಗೀತಕಾರ ವೈರಮುತ್ತು ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದಕ್ಕಾಗಿ ತಮಿಳುನಾಡು ಡಬ್ಬಿಂಗ್ ಯೂನಿಯನ್‌ನ ನಿಷೇಧಕ್ಕೊಳಗಾಗಿರುವ ಚಿನ್ಮಯಿ,ರವಿ ಹೇಳಿಕೆಯನ್ನು ತಮಿಳುನಾಡು ಚಿತ್ರರಂಗದ ಯಾರಾದರೂ ನಟ ಖಂಡಿಸುತ್ತಾರೋ ಎನ್ನುವುದನ್ನು ತಾನು ಶನಿವಾರದಿಂದ ಕಾಯುತ್ತಿದ್ದೇನೆ ಎಂದು ರವಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News