ಇಬ್ಬರು ಗುಜರಾತಿ ದರೋಡೆಕೋರರು ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ: ಬಿಜೆಪಿಯ ನಾಯಕ

Update: 2019-03-25 18:00 GMT

ಲಕ್ನೋ, ಮಾ. 25: ಪಕ್ಷದ ಉನ್ನತ ನಾಯಕರನ್ನು ‘ಗುಜರಾತಿ ದರೋಡೆಕೋರರು’ ಎಂದು ತಮಾಷೆ ಮಾಡಿದ ಹಾಗೂ ನಾವು ಆಯ್ಕೆ ಮಾಡಿರುವುದು ಪ್ರಧಾನ ಮಂತ್ರಿಯನ್ನೇ ?, ಅಥವಾ ಪ್ರಚಾರ ಮಂತ್ರಿಯನ್ನೇ ?, ಎಂದು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಲಕ್ನೋ ಮೂಲದ ಹಿರಿಯ ನಾಯಕನನ್ನು ಬಿಜೆಪಿ ಸೋಮವಾರ ಉಚ್ಛಾಟಿಸಿದೆ.

ಸರಣಿ ಟ್ವೀಟ್ ಮೂಲಕ ಬಿಜೆಪಿಯ ಉನ್ನತ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಪಕ್ಷದ ಮಾಜಿ ವಕ್ತಾರ ಐಪಿ ಸಿಂಗ್, ಅಝಮ್‌ಗಢದಿಂದ ಸ್ವರ್ಧಿಸುತ್ತಿರುವ ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಅವರನ್ನು ಪ್ರಶಂಸಿಸಿದ್ದಾರೆ ಹಾಗೂ ತನ್ನ ನಿವಾಸವನ್ನು ಚುನಾವಣಾ ಪ್ರಚಾರ ಕಚೇರಿ ಯನ್ನಾಗಿ ಬಳಿಸಿಕೊಳ್ಳುವಂತೆ ಅವರಿಗೆ ಆಹ್ವಾನ ನೀಡಿದ್ದಾರೆ. ಬಿಜೆಪಿಯ ರಾಜ್ಯಾಧ್ಯಕ್ಷರ ನಿರ್ದೇಶನದಂತೆ ಐಪಿ ಸಿಂಗ್ ಅವರನ್ನು ಪಕ್ಷದಿಂದ 6 ವರ್ಷಕ್ಕೆ ಉಚ್ಛಾಟಿಸಲಾಗಿದೆ ಎಂದು ಪಕ್ಷದ ಪತ್ರಿಕಾ ಹೇಳಿಕೆ ತಿಳಿಸಿದೆ.

ಹೆಸರಿನ ಮುಂದೆ ‘ಉಸುಲ್‌ದಾರ್’ (ಸಿದ್ಧಾಂತ ಪಾಲಿಸುವ ವ್ಯಕ್ತಿ) ಎಂದು ಸೇರಿಸಿದ ತನ್ನ ಅಧಿಕೃತ ಟ್ವಟ್ಟರ್ ಖಾತೆ ಮೂಲಕ ಮಾಡಿದ ಸರಣಿ ಟ್ವೀಟ್‌ನಲ್ಲಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸಿಂಗ್ ಅವರನ್ನು ಉಚ್ಛಾಟಿಸಲಾಗಿದೆ. ‘‘ನಾನು ಶಿಸ್ತಿನ ಕ್ಷತ್ರೀಯ ಕುಟುಂಬಕ್ಕೆ ಸೇರಿದವನಾಗಿದ್ದೇನೆ. ಇಬ್ಬರು ಗುಜರಾತಿಗಳು ದೇಶದ ಹಿಂದಿ ಕೇಂದ್ರ ಭಾಗವನ್ನು ವಶಪಡಿಸಿಕೊಂಡ ಬಳಿಕ ಕಳೆದ ಐದು ವರ್ಷಗಳಿಂದ ಹಿಂದಿ ಮಾತನಾಡುವ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ.’’ ಎಂದು ಅವರು ಒಂದು ಟ್ವೀಟ್‌ನಲ್ಲಿ ಹೇಳಿದ್ದಾರೆ. ಒಂದು ಟ್ವೀಟ್‌ನಲ್ಲಿ, ‘‘ನಾವು ಪ್ರಧಾನ ಮಂತ್ರಿಯನ್ನಾಗಿ ಆಯ್ಕೆ ಮಾಡಿರುವುದು ಪ್ರಧಾನ ಮಂತ್ರಿಯನ್ನೇ ಅಥವಾ ಪ್ರಚಾರ ಮಂತ್ರಿಯನ್ನೇ ಪ್ರಧಾನ ಮಂತ್ರಿ ಅವರು ಟಿ ಶರ್ಟ್ ಟಿ ಕಪ್ ಮಾರಾಟ ಮಾಡುವುದು ಉತ್ತಮವೆಂದು ಕಾಣುತ್ತದೆಯೇ ?” ಎಂದಿದ್ದಾರೆ.

ತನ್ನ ಸಿದ್ಧಾಂತದ ಮೂಲಕ ಜನರ ಹೃದಯದಲ್ಲಿ ಸ್ಥಾನ ಪಡೆದುಕೊಂಡ ಪಕ್ಷ ಬಿಜೆಪಿ. ಮಿಸ್ಡ್ ಕಾಲ್ ಹಾಗೂ ಟಿ ಶರ್ಟ್ ಮೂಲಕ ಕಾರ್ಯಕರ್ತರನ್ನು ಉತ್ಪಾದಿಸಲು ಅದಕ್ಕೆ ಸಾಧ್ಯವಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ. ಪೂರ್ವಾಂಚಲ್‌ನಿಂದ ಅಖಿಲೇಶ್ ಯಾದವ್ ಸ್ಪರ್ಧಿಸುವುದಾಗಿ ಘೋಷಿಸಿದ ಬಳಿಕ ಪೂರ್ವ ಉತ್ತರ ಪ್ರದೇಶದ ಜನರು ಅತ್ಯಾನಂದ ಹೊಂದಿದ್ದಾರೆ. ಯುವಕರು ಉತ್ಸಾಹಿತರಾಗಿದ್ದಾರೆ. ಅವರು ಜಾತಿ ಹಾಗೂ ಧರ್ಮ ರಾಜಕಾರಣವನ್ನು ಅಂತ್ಯಗೊಳಿಸುವ ಹರಿಕಾರನಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ. ನಾನು ಮೂರು ದಶಕ ಪಕ್ಷಕ್ಕಾಗಿ ವ್ಯಯಿಸಿದೆ. ಆಂತರಿಕ ಪ್ರಜಾಪ್ರಭುತ್ವ ನಾಶವಾಗಿರುವ ಬಿಜೆಪಿಯಲ್ಲಿ ಸತ್ಯ ಮಾತನಾಡುವುದು ಅಪರಾಧ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News