×
Ad

ಚುನಾವಣೆ ಪ್ರಚಾರಕ್ಕಾಗಿ ದಿನಗೂಲಿ ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳ ಬಳಕೆ

Update: 2019-03-25 23:38 IST

ಬೆಂಗಳೂರು, ಮಾ.25: ರಾಜಧಾನಿಯಲ್ಲಿ ದಿನೇ ದಿನೇ ಲೋಕಸಭಾ ಚುನಾವಣೆಯ ಕಾವು ಏರತೊಡಗಿದ್ದು, ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ದಿನಗೂಲಿ ಕಾರ್ಮಿಕರು, ಮಹಿಳೆಯರು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿವೆ.

ಬೆಳಿಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಸಂಜೆ 4ರಿಂದ 9 ಗಂಟೆವರೆಗಿನ ಅವಧಿಯಲ್ಲಿ ಪ್ರಚಾರದ ಕಾವು ಜೋರಾಗಿದ್ದು, ದಿನದ ಕೂಲಿಗಾಗಿ ಮನೆಗೆಲಸ ಸೇರಿದಂತೆ ಇತರೆ ಕೆಲಸಗಳಲ್ಲಿ ತೊಡಗುತ್ತಿದ್ದ ಮಹಿಳೆಯರು ಹಾಗೂ ಪುರುಷರು, ಈಗ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ರಾಜಕೀಯ ಪಕ್ಷಗಳ ಕಾರ್ಯಕರ್ತರು, ಗುಂಪು ಗುಂಪಾಗಿ ಮನೆ ಮನೆಗೆ ಹೋಗಿ ಮತಯಾಚನೆ ಮಾಡುತ್ತಿದ್ದಾರೆ.

ಕಾಲೇಜು ವಿದ್ಯಾರ್ಥಿಗಳ ಸೆಳೆತ: ನಗರದಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಲ್ಲಿಯ ಉದ್ಯೋಗಿಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಕಾರ್ಖಾನೆಯಲ್ಲಿ ದುಡಿದರೆ ಸಿಗುವ ವೇತನಕ್ಕಿಂತ ಶೇ.50ರಿಂದ ಶೇ.100ರಷ್ಟು ಹೆಚ್ಚಿನ ವೇತನ ಪ್ರಚಾರ ಕೆಲಸದಿಂದ ಸಿಗುತ್ತಿದೆ. ಹೀಗಾಗಿ ಉದ್ಯೋಗಿಗಳು, ಪ್ರಚಾರದತ್ತ ವಾಲುತ್ತಿದ್ದಾರೆ. ತಮ್ಮ ಪ್ರದೇಶ ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ಮುಖಂಡರ ಜೊತೆಗೂಡಿ ಪ್ರಚಾರ ನಡೆಸುತ್ತಿದ್ದಾರೆ. ಕೆಲವೆಡೆ ಕಾಲೇಜು ವಿದ್ಯಾರ್ಥಿಗಳನ್ನೂ ಪ್ರಚಾರ ಕೆಲಸಕ್ಕೆ ಸೆಳೆಯಲಾಗುತ್ತಿದೆ.

ಮಹಿಳಾ ಮತ ಸೆಳೆತ: ಪ್ರಚಾರಕ್ಕೆ ಹೋದವರಿಗೆ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ ಮತ್ತು ಸಂಜೆ ತಿಂಡಿ, ರಾತ್ರಿ ಊಟ ಸಿಗುತ್ತದೆ. ಮತದಾನದ ದಿನದವರೆಗೂ ಪ್ರಚಾರ ಮಾಡಬೇಕಾಗುತ್ತದೆ. ಪ್ರಚಾರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಮಹಿಳಾ ಮತಗಳನ್ನು ಸೆಳೆಯಬಹುದೆಂಬ ಭಾವನೆ ಅಭ್ಯರ್ಥಿಗಳು ಹಾಗೂ ಮುಖಂಡರದ್ದಾಗಿದೆ. ಹೀಗಾಗಿಯೇ ಗಾರ್ಮೆಂಟ್ಸ್ ಕಾರ್ಖಾನೆಯ ಮಹಿಳೆಯರನ್ನು ಪ್ರಚಾರಕ್ಕೆ ಕರೆದೊಯ್ಯುವವರ ಸಂಖ್ಯೆ ಹೆಚ್ಚಿದೆ.

ಗುತ್ತಿಗೆದಾರರ ಮೊರೆ: ಪ್ರಚಾರಕ್ಕೆ ಜನರನ್ನು ಕರೆತರುವುದೇ ಅಭ್ಯರ್ಥಿಗಳು ಹಾಗೂ ಮುಖಂಡರಿಗೆ ಸವಾಲಿನ ಕೆಲಸವಾಗಿದೆ. ಅದೇ ಕಾರಣಕ್ಕೆ ಅವರೆಲ್ಲ ಗುತ್ತಿಗೆದಾರರ ಮೊರೆ ಹೋಗುತ್ತಿದ್ದಾರೆ. ಜನರನ್ನು ಪ್ರಚಾರಕ್ಕೆ ಕರೆತರುವುದಕ್ಕಾಗಿ ನಗರದಲ್ಲಿ 50ಕ್ಕೂ ಹೆಚ್ಚು ಗುತ್ತಿಗೆದಾರರಿದ್ದಾರೆ. ನಿರ್ದಿಷ್ಟ ಮೊತ್ತವನ್ನು ಅವರಿಗೆ ಕೊಟ್ಟು ಎಷ್ಟು ಜನ ಬೇಕು ಎಂದು ಹೇಳಿದರೆ, ನಿಗದಿತ ದಿನ ಹಾಗೂ ಸಮಯಕ್ಕೆ ಜನರು ಬರುತ್ತಾರೆ.

ನಾಮಪತ್ರಕ್ಕೂ ಜನ: ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು, ಪ್ರಚಾರ ಮಾಡಲು ಹಾಗೂ ಸಭೆ ಸಮಾರಂಭ ನಡೆಸಲು ಗುತ್ತಿಗೆದಾರರಿಂದಲೇ ಜನರನ್ನು ಕರೆಸುತ್ತಿದ್ದಾರೆ. ಉದ್ಯೋಗಿಗಳು, ಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಬಗೆಯ ಜನರನ್ನು ಗುತ್ತಿಗೆದಾರರೇ ಕರೆತರುತ್ತಾರೆ.

ದಿನಕ್ಕೆ 700 ಕೊಡುತ್ತಾರೆಂದು ಈ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದೇನೆ. ನಾಳೆ ಇನ್ನೊಬ್ಬರ ಪರ ಪ್ರಚಾರಕ್ಕೆ ಹೋಗುತ್ತೇನೆ. ಚುನಾವಣೆ ಮುಗಿಯುವವರೆಗೂ ಊಟ, ವೇತನಕ್ಕೆ ಕೊರತೆ ಇಲ್ಲ.

-ರಾಜೇಶ್, ಹಾಸ್ಟೆಲ್ ವಿದ್ಯಾರ್ಥಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News