ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ಅಗತ್ಯ: ಪದ್ಮಶ್ರೀ ಪುರಸ್ಕೃತ ಪ್ರೊ.ಬಲದೇವ್ ಸಿಂಗ್ ದಿಲ್ಲಾನ್

Update: 2019-03-25 18:24 GMT

ಬೆಂಗಳೂರು, ಮಾ.25: ಭವಿಷ್ಯದಲ್ಲಿ ಉಂಟಾಗಬಹುದಾದ ಆಹಾರ ಪದಾರ್ಥಗಳ ಕೊರತೆ ನೀಗಿಸಲು ಪೋಷಕಾಂಶಗಳುಳ್ಳ ಆಹಾರ ಪದಾರ್ಥಗಳ ಭದ್ರತೆ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಣೆ ಮಾಡಬೇಕಾದ ಅಗತ್ಯವಿದೆ ಎಂದು ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಕುಲಪತಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊ.ಬಲದೇವ್ ಸಿಂಗ್ ದಿಲ್ಲಾನ್ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ನಗರದ ಜಿಕೆವಿಕೆಯಲ್ಲಿನ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರ್‌ರಾಷ್ಟ್ರೀಯ ಸಮಾವೇಶ ಭವನದಲ್ಲಿ ಯೋಜಿಸಿದ್ದ ಕೃಷಿ ವಿಶ್ವ ವಿದ್ಯಾನಿಲಯದ 53ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಅಧಿಕವಾಗುತ್ತಿದ್ದು, ಆಹಾರ ಪದಾರ್ಥಗಳ ಪ್ರಮಾಣವೂ ಹೆಚ್ಚಿತ್ತಿದೆ. ಆದರೆ, ಅಗತ್ಯಕ್ಕೆ ಅನುಗುಣವಾಗಿ ಆಹಾರ ಪದಾರ್ಥಗಳನ್ನು ನೀಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತಿದೆ. ಮುಂದಿನ 10 ವರ್ಷಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಆಹಾರ ಪದಾರ್ಥಗಳು, ಬೆಳೆಕಾಳು, ಎಣ್ಣೆಕಾಳುಗಳ ಕೊರತೆ ಎದುರಿಸಬೇಕಾಗುತ್ತದೆ. ಅದಕ್ಕಾಗಿ ಇಂದಿನಿಂದಲೇ ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ವಿದ್ಯಾರ್ಥಿಗಳು ಅನುವಂಶೀಯ ಸಂಶೋಧನೆಯಲ್ಲಿ ಹೆಚ್ಚು ತೊಡಗಿಕೊಳ್ಳಬೇಕು. ಸೂಕ್ಷ್ಮ ತಂತ್ರಜ್ಞಾನದ ಮೂಲಕ ಕೃಷಿಯ ಅಡೆತಡೆಗಳನ್ನು ನಿವಾರಿಸಲು ಪ್ರಯತ್ನಿಸಬೇಕು. ಜೊತೆಗೆ ಜೀವನಾಧಾರಿತ ಕೃಷಿ ಪದ್ದತಿಗೆ ಹೆಚ್ಚು ಒತ್ತು ನೀಡುವ ಮೂಲಕ ದೇಶದ ರೈತರ ಹಿತ ರಕ್ಷಣೆ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು. ಕೃಷಿ ಕ್ಷೇತ್ರಕ್ಕೆ ಪ್ರಸ್ತುತ ಲಭ್ಯವಿರುವ ಪರಿಕರಗಳನ್ನು ಸೂಕ್ತ ರೀತಿ ಬಳಕೆ ಮಾಡಿಕೊಳ್ಳಬೇಕು. ರಾಸಾಯನಿಕ ಹಾಗೂ ನೀರು ನಿರ್ವಹಣೆ ಮಾಡುವ ಕ್ರಮವನ್ನು ಕೃಷಿ ಕ್ಷೇತ್ರದಲ್ಲಿ ಕಟ್ಟ ನಿಟ್ಟಾಗಿ ಬಳಕೆ ಮಾಡಿಕೊಳ್ಳಲು ಸರಕಾರಗಳು ನೆರವಾಗಬೇಕು. ಆ ಮೂಲಕ ರೈತರ ಜೀವನ ಕ್ರಮ ಸುಧಾರಿಸಲು ಮುಂದಾಗಬೇಕು. ಅಲ್ಲದೆ, ದೂರ ಸಂಪರ್ಕ ತಂತ್ರಜ್ಞಾನ ಹಾಗೂ ಡ್ರೋಣ್‌ಗಳ ಬಳಕೆಯಿಂದಾಗಿ ಕೃಷಿಯಲ್ಲಿ ಸುಧಾರಿತ ಪದ್ಧತಿಗಳನ್ನು ಅನುಷ್ಠಾನಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ಭೌಗೋಳಿಕ ಮಾಹಿತಿ, ದೂರಸಂವೇದನಾ ತಂತ್ರಜ್ಞಾನ ಹಾಗೂ ಡ್ರೋಣ್‌ಗಳ ಬಳಕೆಯಿಂದ ಕೃಷಿಯಲ್ಲಿ ಸುಧಾರಿತ ಪದ್ಧತಿಗಳು ಸಾಕಾರಗೊಂಡಿವೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸಸ್ಯ ಪ್ರಬೋಧಕಗಳಾದ ಬ್ಯಾಕ್ಟೀರಿಯಾ ಜೊತೆಗೆ ಜೈವಿಕ ಗೊಬ್ಬರಗಳು, ಜೈವಿಕ ಶಿಲೀಂದ್ರಗಳ ನಾಶಕ, ಜೈವಿಕ ಪ್ರಚೋದಕಗಳಿಂದ ಉತ್ತಮ ನೆರವು ರೈತರಿಗೆ ದೊರೆಯಲಿದೆ ಎಂದು ನುಡಿದರು.

ನೈಸರ್ಗಿಕ ಸಂಪನ್ಮೂಲಕಗಳ ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಂಡು ಕೃಷಿ ಕ್ಷೇತ್ರಕ್ಕಿರುವ ಅಡೆ ತಡೆಗಳನ್ನು ನಿಭಾಯಿಸಿಕೊಳ್ಳಬೇಕು. ಕೃಷಿ ಕ್ಷೇತ್ರಕ್ಕೆ ತಲೆದೋರಿರುವ ಮಾನವ ಸಂಪನ್ಮೂಲದ ಕೊರತೆ ನಿವಾರಣೆಗಾಗಿ ವೈಜ್ಞಾನಿಕ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕು. ಜೊತೆಗೆ, ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವಂತಹ ಯೋಜನೆಗಳನ್ನು ರೂಪಿಸಿ, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್ ಸೇರಿದಂತೆ ವಿವಿಯ ಎಲ್ಲ ವಿಭಾಗಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು. ವಿವಿಧ ಜಿಲ್ಲೆಗಳಲ್ಲಿರುವ ಕೃಷಿ ವಿವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News