ರಿಯಾದ್: ಇಂಡಿಯಾ ಫ್ರಟರ್ನಿಟಿ ಫೋರಮ್ ನಿಂದ ‘ಸ್ನೇಹಕೂಟ-2019’ ಕುಟುಂಬ ಸಮ್ಮಿಲನ

Update: 2019-03-26 07:05 GMT

ರಿಯಾದ್, ಮಾ.26: ಸೌದಿ ಅರೇಬಿಯಾದ್ಯಂತ ಇಂಡಿಯಾ ಫ್ರಟರ್ನಿಟಿ ಫೋರಂ(ಐ.ಎಫ್.ಎಫ್.) ವತಿಯಿಂದ ನಡೆಯುತ್ತಿರುವ ‘ಫ್ರಟರ್ನಿಟಿ ಫೆಸ್ಟ್ -2019’ರ ಅಂಗವಾಗಿ ಐ.ಎಫ್.ಎಫ್. ರಿಯಾದ್ ಕರ್ನಾಟಕ ಚಾಪ್ಟರ್ ವತಿಯಿಂದ ಅನಿವಾಸಿ ಭಾರತೀಯರಿಗಾಗಿ 'ಸ್ನೇಹ ಕೂಟ -2019' ಕುಟುಂಬ ಸಮ್ಮಿಲನವು ಇತ್ತೀಚೆಗೆ ಅಲ್ -ಸುಲೈನ ತಾಕತ್ ವ್ಯೂ ರೆಸಾರ್ಟ್ನಲ್ಲಿ ನಡೆಯಿತು.

ಇಂಡಿಯಾ ಫ್ರಟರ್ನಿಟಿ ಫೋರಂ  ಸೌದಿ  ಅರೇಬಿಯಾದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫಿ  ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇಂಡಿಯಾ ಫ್ರಟರ್ನಿಟಿ ಫೋರಮ್ ರಿಯಾದ್ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಇಸ್ಮಾಯೀಲ್ ಯೂಸುಫ್, ಸೌದಿ ಅರೇಬಿಯಾದಲ್ಲಿ ಅನಿವಾಸಿ ಭಾರತೀಯರ ನಡುವಿನ ಸಂಬಂಧವನ್ನು ಬಲಪಡಿಸುವುದು ಮತ್ತು ಸಮುದಾಯವನ್ನು ಒಗ್ಗೂಡಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.

ದಿಕ್ಸೂಚಿ ಭಾಷಣಗೈದ ಇಂಡಿಯನ್ ಸೋಶಿಯಲ್ ಫೋರಂ ಕೇಂದ್ರ ಸಮಿತಿಯ ಅಧ್ಯಕ್ಷ ಹಾರಿಸ್ ಮಂಗಳೂರು, ಅನಿವಾಸಿಗಳಿಗೆ ರಾಜಕೀಯ ಪ್ರಜ್ಞೆಯ ಅವಶ್ಯಕತೆಯನ್ನು ವಿವರಿಸಿದರು.

 ಖಿದ್ಮಾ ಫೌಂಡೇಶನ್ ಮಾಜಿ ಅಧ್ಯಕ್ಷ ಹನೀಫ್ ಬಸ್ರೂರ್,  ಅಝೀಝ್ ಬಣಕಲ್ (ಅಧ್ಯಕ್ಷರು, ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟ ),  ಡಾ. ಕೈಸರ್  ಅತಿಥಿ ಭಾಷಣ ಮಾಡಿದರು.

 ಇಲ್ಯಾಸ್ (ಅಧ್ಯಕ್ಷರು, ಹಿದಾಯಾ ಫೌಂಡೇಶನ್), ಅಶ್ಫಾಕ್ ಕೋಟೇಶ್ವರ (ಅಧ್ಯಕ್ಷರು ಮುರುಡೇಶ್ವರ ಜಮಾಅತ್), ಅಬ್ದುಸ್ಸಲಾಮ್ (ಅಧ್ಯಕ್ಷರು ಅಡ್ಡೂರ್ ರಿಯಾದ್ ಸಮಿತಿ), ಅಬ್ದುಲ್ ಅಝೀಝ್ ಕಾಟಿಪಳ್ಳ (ಅಧ್ಯಕ್ಷರು ಕಾಟಿಪಳ್ಳ ಮುಸ್ಲಿಂ ಯೂತ್  ಅಸೋಸಿಯೇಶನ್ ) ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ನೇಹಕೂಟದ ಅಂಗವಾಗಿ ನಡೆದ ಐ.ಎಫ್.ಎಫ್. -ಯಂಗ್ ಆರ್ಟಿಸ್ಟ್  ಚಿತ್ರಕಲೆ ಸ್ಪರ್ಧೆಯ ವಿಜೇತರ ಹೆಸರನ್ನು  ಘೋಷಿಸಲಾಯಿತು. ಕಿರಿಯರ ವಿಭಾಗದಲ್ಲಿ ರುಮಾಸ್ ಪ್ರಥಮ,  ಲುಹ ಫಾತಿಮಾ ಎರಡನೇ ಸ್ಥಾನ ಪಡೆದರು. ಹಿರಿಯರ ವಿಭಾಗದಲ್ಲಿ ನೂಹ್ ಎಂ. ಖಾನ್ ವಿಜೇತರಾದರು.

ಕಾರ್ಯಕ್ರಮದ ಆಕರ್ಷಣೆಯಾಗಿ ದಫ್, ಕವ್ವಾಲಿ,  ಎಕ್ಸ್ಪೋ,  ಶಾಯರಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

 'ಪ್ರವಾಸ ಜೀವನ' ಎಂಬ ನಾಟಕವು ಈ ಸ್ನೇಹಕೂಟದ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಅನಿವಾಸಿ ಕಾರ್ಮಿಕರ  ಜೀವನ ಪರಿಸ್ಥಿತಿಯನ್ನು ಪ್ರಸ್ತುತಪಡಿಸಿದ ಈ ನಾಟಕವು ನೆರೆದಿದ್ದ ಸಭಿಕರಿಗೆ ಮನ ಮುಟ್ಟುವಂತಿತ್ತು. ಅದೇ ರೀತಿ ಅನಿವಾಸಿಗಳನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಪುರುಷರು ಮತ್ತು ಮಹಿಳೆಯರಿಗಾಗಿ ಕ್ವಿಝ್, ಹಗ್ಗ ಜಗ್ಗಾಟ, ಕ್ರಿಕೆಟ್, ಡ್ರಾಯಿಂಗ್ ಮುಂತಾದ ವಿನೋದ ತುಂಬಿದ ಆಟಗಳನ್ನು ನಡೆಸಿಕೊಡಲಾಗಿತ್ತು.

ಮಕ್ಕಳಿಗಾಗಿ ನಡೆದ  ಓಟದ ಸ್ಪರ್ಧೆ ಯಲ್ಲಿ  ರಫಾನ್ ಅಬ್ದುಲ್ಲಾ ಮೊದಲನೇ ಸ್ಥಾನ ಪಡೆದರೆ,  ಮೊಜಮ್ ಅರಾಫತ್ ದ್ವಿತೀಯ ಸ್ಥಾನ ಪಡೆದರು. ಪುರುಷರಿಗಾಗಿ ನಡೆದ ಹಗ್ಗಜಗ್ಗಾಟದಲ್ಲಿ ಬಂಟ್ವಾಳ ಗೈಸ್ ವಿಜೇತರಾದರೆ, ಟಿಪ್ಪು ನಗರ ಬಂಟ್ವಾಳ ದ್ವಿತೀಯ ಸ್ಥಾನ ಗಳಸಿತು.

ಸೂಪರ್ ಓವರ್ ಕ್ರಿಕೆಟಿನಲ್ಲಿ ಮರ್ಕಝ್ ಜಮಾಲ್ ತಂಡ ವಿಜೇತವಾದರೆ, ರೋಸಸ್ ಬತ್ತ ದ್ವಿತೀಯ ಸ್ಥಾನ ಗಳಸಿತು. ಇಸ್ಮಾಯೀಲ್ ಯೂಸುಫ್, ತಾಜುದ್ದೀನ್, ನವೀದ್, ಶರೀಫ್, ಸಾಬಿತ್, ಉಸ್ಮಾನ್ ಟ್ರೋಫಿಗಳನ್ನು ಮತ್ತು ಪದಕಗಳನ್ನು ವಿಜೇತರಿಗೆ ನೀಡಿದರು.

ಕಾರ್ಯಕ್ರಮವು ಹಾಫೀಝ್ ಆದಿಲ್ ಹುಸೈನ್ ಕಿರಾಅತ್ ಪಠಿಸಿದರು. ಐ.ಎಫ್.ಎಫ್. ರಿಯಾದ್ ಕರ್ನಾಟಕ ಚಾಪ್ಟರ್ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಪುತ್ತೂರು ಸ್ವಾಗತಿಸಿದರು.

ಸುಲ್ತಾನ್ ಬಿಲ್ಡರ್ಸ್ ಮಂಗಳೂರು, ಎಸ್.ಟಿ.ಸಿ, ಪಿಎವೈ ಕಾರ್ಯಕ್ರಮದ ಪ್ರಮುಖ ಪ್ರಾಯೋಜಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News