ಬಿಜೆಪಿಯಿಂದ ಟಿಕೆಟ್ ನಿರಾಕರಣೆ: ಕಾಂಗ್ರೆಸ್ ಸೇರಲಿರುವ ಶತ್ರುಘ್ನ ಸಿನ್ಹಾ

Update: 2019-03-26 16:17 GMT

ಹೊಸದಿಲ್ಲಿ, ಮಾ.26: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಟೀಕೆ ಮಾಡುತ್ತಲೇ ಬಂದಿರುವ ಪಕ್ಷದ ಬಂಡಾಯ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಗುರುವಾರ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಹಾರದ ಪಟ್ನಾದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ನಿರಾಕರಿಸಲ್ಪಟ್ಟ ನಂತರ ಸಿನ್ಹಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 2014ರಲ್ಲಿ ಸಿನ್ಹಾ ಪಟ್ನಾದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಆದರೆ ನಂತರ ಸಂಪುಟದಿಂದ ಹೊರಗುಳಿಸಲ್ಪಟ್ಟ ಕಾರಣದಿಂದ ಪಕ್ಷದ ನಾಯಕತ್ವದ ವಿರುದ್ಧ ಬಂಡಾಯ ಸಾರಿದ್ದರು.

ಸದ್ಯ ಸಿನ್ಹಾಗೆ ಕಾಂಗ್ರೆಸ್ ಪಟ್ನಾದಿಂದ ಟಿಕೆಟ್ ನೀಡುವುದೇ ಎಂಬ ಬಗ್ಗೆ ಇನ್ನೂ ದೃಢಪಟ್ಟಿಲ್ಲ. ಇತ್ತೀಚಿನ ಕೆಲವು ತಿಂಗಳುಗಳಿಂದ ಸಿನ್ಹಾ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದರು ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತು ಪುತ್ರ ತೇಜಸ್ವಿ ಯಾದವ್ ಜೊತೆ ಹೆಚ್ಚಾಗಿ ಕಾಣಿಸುತ್ತಿದ್ದರು. ಬಿಹಾರದಲ್ಲಿ ಎಲ್ಲ 40 ಸ್ಥಾನಗಳನ್ನು ಗೆಲ್ಲಲಿದೆ ಎಂಬ ಎನ್‌ಡಿಎ ನಾಯಕರ ಹೇಳಿಕೆ ಎಂದೂ ನನಸಾಗದ ಕನಸು ಎಂದು ಸಿನ್ಹಾ ವ್ಯಂಗ್ಯವಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News