ಅಪಹೃತ ಬಾಲಕಿಯರನ್ನು ಸರಕಾರದ ವಶಕ್ಕೆ ನೀಡಿದ ಪಾಕ್ ನ್ಯಾಯಾಲಯ

Update: 2019-03-26 17:54 GMT

ಕರಾಚಿ (ಪಾಕಿಸ್ತಾನ), ಮಾ. 26: ಅಪಹರಿಸಿ ಮತಾಂತರ ಮಾಡಲಾಗಿರುವ ಇಬ್ಬರು ಹಿಂದೂ ಸಹೋದರಿಯರನ್ನು ವಶಕ್ಕೆ ಪಡೆದುಕೊಳ್ಳುವಂತೆ ಪಾಕಿಸ್ತಾನದ ನ್ಯಾಯಾಲಯವೊಂದು ಮಂಗಳವಾರ ಸರಕಾರಕ್ಕೆ ಆದೇಶಿಸಿದೆ.

ಈ ಸಹೋದರಿಯರನ್ನು ಸಿಂಧ್ ರಾಜ್ಯದಿಂದ ಮಾರ್ಚ್ 20ರಂದು ಅಪಹರಿಸಲಾಗಿದೆ ಹಾಗೂ ಪಾಕಿಸ್ತಾನದ ಪಂಜಾಬ್ ರಾಜ್ಯದಲ್ಲಿ ಅವರನ್ನು ಬಲವಂತದಿಂದ ಮದುವೆಯಾಗಲಾಗಿದೆ ಎಂದು ಆರೋಪಿಸಲಾಗಿದೆ.

ಸಿಂಧ್ ರಾಜ್ಯದ ಕಾನೂನಿನಲ್ಲಿ 18 ವರ್ಷಕ್ಕಿಂತ ಕೆಳಗಿನ ಪ್ರಾಯದವರ ಮದುವೆಗೆ ಅವಕಾಶವಿಲ್ಲ.

‘‘ಈ ಬಾಲಕಿಯರು ಮಂಗಳವಾರ ಬೆಳಗ್ಗೆ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಹಾಜರಾದರು’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘‘ಬಾಲಕಿಯರನ್ನು ವಶಕ್ಕೆ ಪಡೆದುಕೊಳ್ಳುವಂತೆ ನ್ಯಾಯಾಲಯವು ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ’’ ಎಂದರು.

ಈ ಘಟನೆಯ ಬಗ್ಗೆ ಪ್ರಧಾನಿ ಇಮ್ರಾನ್ ಖಾನ್ ಆದೇಶಿಸಿರುವ ತನಿಖೆಯ ವರದಿಯನ್ನು ಮುಂದಿನ ಮಂಗಳವಾರದ ಒಳಗೆ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ ಹಾಗೂ ಪ್ರಕರಣ ಇತ್ಯರ್ಥಗೊಳ್ಳುವವರೆಗೆ ಬಾಲಕಿಯರು ಸಿಂಧ್‌ಗೆ ಮರಳುವಂತಿಲ್ಲ ಎಂದು ಹೇಳಿದೆ.

► 7 ಮಂದಿ ಬಂಧನ

ಇಬ್ಬರು ಅಪ್ರಾಪ್ತ ವಯಸ್ಕ ಹಿಂದೂ ಬಾಲಕಿಯರ ಅಪಹರಣ, ಬಲವಂತದ ಮತಾಂತರ ಮತ್ತು ಮದುವೆಗೆ ಸಂಬಂಧಿಸಿ ಪಾಕಿಸ್ತಾನದ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.

ಪೊಲೀಸರು ರವಿವಾರ ಪಂಜಾಬ್ ರಾಜ್ಯದ ರಹೀಮ್ ಯಾರ್ ಖಾನ್ ಜಿಲ್ಲೆಯಲ್ಲಿ ದಾಳಿ ನಡೆಸಿ, ಅಪ್ರಾಪ್ತ ಬಾಲಕಿಯರ ಮದುವೆಗಳನ್ನು ನಡೆಸಿಕೊಟ್ಟ ವ್ಯಕ್ತಿ, ಪಾಕಿಸ್ತಾನ್ ಸುನ್ನಿ ತೆಹ್ರೀಕ್‌ನ ಓರ್ವ ನಾಯಕ ಮತ್ತು ಅಪ್ರಾಪ್ತ ಬಾಲಕಿಯರನ್ನು ಮದುವೆಯಾದ ವ್ಯಕ್ತಿಗಳ ಸಂಬಂಧಿಕರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಸಿಂಧ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಬಾಲಕಿಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಮ್‌ಗೆ ಮತಾಂತರಿಸಲಾಗಿದೆ ಎಂಬುದಾಗಿ ಅವರ ತಂದೆ ಮತ್ತು ಸಹೋದರ ಹೇಳಿದ್ದಾರೆ.

ಅದೇ ವೇಳೆ, ತಾವು ಸ್ವಂತ ಇಚ್ಛೆಯಿಂದ ಇಸ್ಲಾಮ್ ಸ್ವೀಕರಿಸಿರುವುದಾಗಿ ಬಾಲಕಿಯರು ಹೇಳಿಕೊಳ್ಳುತ್ತಿರುವ ಒಂದು ವೀಡಿಯೊ ಕೂಡ ಚಾಲ್ತಿಯಲ್ಲಿದೆ.

ಸಿಂಧ್‌ನ ದಹರ್ಕಿ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News