ಸರಣಿ ಹಂತಕ ಸೈನೇಡ್ ಮೋಹನ್ ವಿಚಾರಣೆ: 3 ಪ್ರಕರಣಗಳಲ್ಲಿ ಮರಣದಂಡನೆ

Update: 2019-03-27 15:29 GMT

ಬೆಂಗಳೂರು, ಮಾ.27: ರಾಷ್ಟ್ರಾದ್ಯಂತ ಸಂಚಲನ ಮೂಡಿಸಿದ ಸರಣಿ ಸ್ತ್ರೀ ಹಂತಕ ಸೈನೇಡ್ ಮೋಹನ್‌ ಕುಮಾರ್ ಮೇಲಿನ 14 ಪ್ರಕರಣಗಳ ವಿಚಾರಣೆ ಮುಗಿದಿದ್ದು, ಇದರಲ್ಲಿ 3 ಪ್ರಕರಣಗಳಲ್ಲಿ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಮೋಹನ್‌ ಕುಮಾರ್ ಯಾನೆ ಸೈನೇಡ್ ಮೋಹನ್‌ ಕುಮಾರ್(56) ವಿರುದ್ಧ ಬರೋಬ್ಬರಿ 20 ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸಿಐಡಿ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿತ್ತು. ಇದರ ಅನ್ವಯ ವಿಚಾರಣೆ ನಡೆಸಿದ ನ್ಯಾಯಾಲಯವು ಮೂರು ಪ್ರಕರಣಗಳಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಿದೆ.

ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರೋಪಿ ಮೋಹನ್ ವಿರುದ್ಧ 2004 ರಿಂದ 2009 ರವರೆಗೆ 20 ಪ್ರಕರಣಗಳು ದಾಖಲಾಗಿದ್ದು, 2010ನೆ ಸಾಲಿನಲ್ಲಿ ಹೆಚ್ಚಿನ ತನಿಖೆಗಾಗಿ ಎಲ್ಲ ಪ್ರಕರಣಗಳನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಈ ಸಂಬಂಧ ತನಿಖೆ ನಡೆಸಿ, ಮಂಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಚಾಜ್‌ಶೀಟ್ ಸಲ್ಲಿಕೆ ಮಾಡಲಾಗಿತ್ತು.

ಮರಣದಂಡನೆ: ಸುಳ್ಯ ಪೊಲೀಸ್ ಠಾಣೆಯಲ್ಲಿ ಆರೋಪಿ ಮೋಹನ್ ವಿರುದ್ಧ ದಾಖಲಾಗಿದ್ದ ಗಂಭೀರ ಅಪರಾಧ ಪ್ರಕರಣ ಸಂಬಂಧ ಡಿಎಸ್ಪಿ ಎನ್.ಎಂ.ರಾಮಲಿಂಗಪ್ಪ ತನಿಖೆ ನಡೆಸಿದ್ದರು. 2013ರ ಸಾಲಿನಲ್ಲಿ ನ್ಯಾಯಾಲಯವು ಮರಣದಂಡನೆ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿತ್ತು. ಬಂಟ್ವಾಳ ಗ್ರಾಮಾಂತರ ಹಾಗೂ ವೇಣೂರು ಪೊಲೀಸ್ ಠಾಣೆಗಳಲ್ಲಿನ ಪ್ರಕರಣ ಸಂಬಂಧವೂ ನ್ಯಾಯಾಲಯವು ಮರಣದಂಡನೆ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ನೂರೇಂಟು ಹೆಸರು!

ಸುಂದರ ರೈ, ಆನಂದ, ಸುಧಾಕರ್, ಕುಲಾಲ್, ಸುಧಾಕರ ಆಚಾರ್ಯ, ಶಶಿಧರ ಪೂಜಾರಿ ಮನೋಹರ, ಶಶಿಧರ ಭಂಡಾರಿ, ಎಸ್.ಆನಂದ, ಸುಧಾಕರ ರೈ, ಕೆ.ಸಂಜೀವ... ಹೀಗೆ, ಹತ್ತು ಹಲವು ಹೆಸರುಗಳನ್ನು ಇಟ್ಟುಕೊಂಡು ಸೈನೇಡ್ ಮೋಹನ್ ಅಪರಾಧ ಕೃತ್ಯವೆಸಗುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಯುವತಿಗೆ ಸೈನೇಡ್ ನೀಡಿದ್ದ

ರಾಜ್ಯಾದ್ಯಂತ 20 ಜನ ಅವಿವಾಹಿತ ಯುವತಿಯರೊಂದಿಗೆ ಸ್ನೇಹ ಬೆಳೆಸಿ, ಮದುವೆ ಮಾಡಿಕೊಳ್ಳುವಂತೆ ನಂಬಿಸುತ್ತಿದ್ದ. ಬಳಿಕ ಅವರ ಮನೆಯಿಂದ ಬೆಲೆ ಬಾಳುವ ಚಿನ್ನಾಭರಣ ದೋಚುವ ಜೊತೆಗೆ, ಗರ್ಭ ನಿರೋಧಕ ಔಷದಿ ಎಂದು ಸೈನೇಡ್ ವಿಷಯುಕ್ತ ರಾಸಾಯನಿಕ ವಸ್ತುಗಳನ್ನು ಯುವತಿಯರಿಗೆ ನೀಡಿ ಅವರನ್ನು ಕೊಲೆಗೈದು ಪರಾರಿಯಾಗುತ್ತಿದ್ದ.

ಮೋಹನ್ ವಿರುದ್ಧ ಪ್ರಕರಣಗಳು

ಐಪಿಸಿ ಸೆಕ್ಷನ್ 366(ಅಪಹರಣ), 302(ಕೊಲೆ), 376(ಅತ್ಯಾಚಾರ), 328(ವಿಷ ಉಣಿಸಿದ್ದು), 201(ಸಾಕ್ಷಿ ನಾಶ), 392(ಚಿನ್ನಾಭರಣ ಸುಲಿಗೆ), 417(ವಂಚನೆ) ಸೇರಿದಂತೆ ಇನ್ನಿತರೆ ಪ್ರಕರಣಗಳು ದಾಖಲಾಗಿವೆ ಎಂದು ಸಿಐಡಿ ತಿಳಿಸಿದೆ.

8, 9ನೇ ಪ್ರಕರಣಗಳಲ್ಲಿ ಜೀವನಪರ್ಯಂತ ಜೀವಾವಧಿ ಶಿಕ್ಷೆ

ಮಂಗಳೂರು: ಸರಣಿ ಹಂತಕ ಸೈನೈಡ್ ಮೋಹನ್‌ನ 8 ಮತ್ತು 9ನೇ ಪ್ರಕರಣದ ಆರೋಪವು ಸಾಬೀತಾಗಿದ್ದು, ಆತನಿಗೆ ಜೀವನ ಪರ್ಯಂತ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.

ಪುತ್ತೂರು ನಗರ ಠಾಣೆ ಹಾಗೂ ಮಡಿಕೇರಿ ಗ್ರಾಮಾಂತರ ಠಾಣೆ ವ್ಯಾಪ್ತಿಗಳಲ್ಲಿ ನಾಪತ್ತೆಯಾಗಿದ್ದ ಇಬ್ಬರು ಯುವತಿಯರ ಪ್ರಕರಣಗಳಲ್ಲಿ ಶಿಕ್ಷೆ ಪ್ರಕಟವಾಗಿದೆ. ಎರಡೂ ಪ್ರಕರಣಗಳಲ್ಲಿ ಒಂದೇ ರೀತಿಯಲ್ಲಿ ಶಿಕ್ಷೆ ವಿಧಿಸಿ ನ್ಯಾಯಾಧೀಶ ಡಿ.ಟಿ.ಪುಟ್ಟರಂಗ ಸ್ವಾಮಿ ತೀರ್ಪು ನೀಡಿದ್ದಾರೆ.

ಶಿಕ್ಷೆಯ ವಿವರ

ಐಪಿಸಿ ಸೆಕ್ಷನ್ 302 (ಕೊಲೆ) ಪ್ರಕರಣಕ್ಕೆ ಜೀವನ ಪರ್ಯಂತ ಜೀವಾವಧಿ ಶಿಕ್ಷೆ, ಸೆಕ್ಷನ್ 376 (ಅತ್ಯಾಚಾರ) ಮತ್ತು ಸೆಕ್ಷನ್ 328 (ವಿಷ ಉಣಿಸಿದ್ದು)ರಡಿ ತಲಾ ಏಳು ವರ್ಷ ಕಠಿಣ ಸಜೆ, ಮೂರು ಸಾವಿರ ರೂ. ದಂಡ, ಸೆಕ್ಷನ್ 201 (ಸಾಕ್ಷಿನಾಶ) ಐದು ವರ್ಷ ಕಠಿಣ ಸಜೆ, ಮೂರು ಸಾವಿರ ರೂ. ದಂಡ, ಸೆಕ್ಷನ್ 392 (ಚಿನ್ನಾಭರಣ ಸುಲಿಗೆ) ಐದು ವರ್ಷ ಕಠಿಣ ಸಜೆ, ಮೂರು ಸಾವಿರ ರೂ. ದಂಡ, ಸೆಕ್ಷನ್ 417 (ವಂಚನೆ)ರಡಿ ಆರು ತಿಂಗಳ ಸಜೆ ಹಾಗೂ ಎರಡೂ ಪ್ರಕರಣಗಳಲ್ಲಿ ತಲಾ 18 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಕೊಲೆಯಾದ ಯುವತಿಯರ ಕುಟುಂಬಸ್ಥರು ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆದುಕೊಳ್ಳಲು ಅರ್ಹರೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಪುತ್ತೂರು ಯುವತಿಯ ಪ್ರಕರಣ

ಬಂಟ್ವಾಳ ತಾಲೂಕು ಕೆದಿಲ ಗ್ರಾಮ ಪಂಚಾಯತ್‌ನ ಪೇರಮೊಗರಿನ 34 ವರ್ಷದ ಯುವತಿಯನ್ನು ಸೈನೈಡ್ ಕಿಲ್ಲರ್ ಮೋಹನ್ ಕುಮಾರ್, ಆನಂದ ಎಂದು ಪರಿಚಯಿಸಿಕೊಂಡಿದ್ದ. 2009ರ ಜ. 23ರಂದು ಬಿ.ಸಿ.ರೋಡ್‌ನಿಂದ ಮಡಿಕೇರಿಗೆ ಮದುವೆಯಾಗುವುದಾಗಿ ನಂಬಿಸಿ ಕರೆದೊಯ್ದಿದ್ದ. ಅಲ್ಲಿ ಲಾಡ್ಜ್‌ನಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಅದೇ ದಿನ ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಕರೆ ತಂದಿದ್ದ. ಅಲ್ಲಿ ಗರ್ಭ ನಿರೋಧಕ ಮಾತ್ರೆ ಎಂದು ನಂಬಿಸಿ ಸೈನೈಡ್ ನೀಡಿದ್ದ. ಮಹಿಳೆಯರ ಶೌಚಾಲಯಕ್ಕೆ ತೆರಳಿ ಅದನ್ನು ಸೇವಿಸಿದ್ದ ಯುವತಿ ಅಲ್ಲೇ ಮೃತಪಟ್ಟಿದ್ದರು. ಈತ ಆಕೆಯ ಚಿನ್ನಾಭರಣ ಸಹಿತ ಪರಾರಿಯಾಗಿದ್ದ.

ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಕೆಯ ಮನೆಯವರು ನಾಪತ್ತೆ ಪ್ರಕರಣ ದಾಖಲಿಸಿ ಹುಡುಕಾಟ ನಡೆಸಿದ್ದರು. ಸೈನೈಡ್ ಮೋಹನ್ 2009ರ ಅ.21ರಂದು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಅ.26ರಂದು ಈಕೆಯ ಬಗ್ಗೆ ಹೇಳಿಕೆ ನೀಡಿದ್ದ. ಅಂದಿನ ಪುತ್ತೂರು ಇನ್‌ಸ್ಪೆಕ್ಟರ್ ಶ್ರೀಕಾಂತ್ ಅವರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ಈಕೆಯನ್ನು ಮಡಿಕೇರಿಗೆ ಕರೆದೊಯ್ದು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದ. ಬಳಿಕ ಪ್ರಕರಣವನ್ನು ಸಿಒಡಿ ತನಿಖೆ ನಡೆಸಿತ್ತು. ಡಿವೈಎಸ್ಪಿ ಎಸ್.ಎಸ್.ಪಾಟೀಲ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಚಿನ್ನಾಭರಣ ಖರೀದಿಸಿದ್ದ ಫೈನಾನ್ಸ್‌ನವರು, ಲಾಡ್ಜ್‌ನವರು ಸಾಕ್ಷಿ ಹೇಳಿದ್ದರು.

ಮಡಿಕೇರಿ ಪ್ರಕರಣ: ಮಡಿಕೇರಿ ತಾಲೂಕಿನ ಪೆರಾಜೆ ಇಂದಿರಾ ಆವಾಜ್ ಕಾಲನಿ ನಿವಾಸಿ 32 ವರ್ಷ ವಯಸ್ಸಿನ ಮಹಿಳೆಯನ್ನು ಸೈನೈಡ್ ಮೋಹನ್, ಆನಂದ ಎಂದು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಮೈಸೂರಿಗೆ 2009ರ ಮಾ.17ರಂದು ಕರೆದೊಯ್ದಿದ್ದ.

ಲಾಡ್ಜ್‌ನಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿ ಅದೇ ದಿನ ಮೈಸೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗರ್ಭನಿರೋಧಕ ಮಾತ್ರೆ ಎಂದು ಸೈನೈಡ್ ನೀಡಿ ಕೊಲೆ ಮಾಡಿದ್ದ. ಬಳಿಕ ಆಕೆಯ ಚಿನ್ನಾಭರಣ ಹಾಗೂ ಮೊಬೈಲ್‌ನೊಂದಿಗೆ ಪರಾರಿಯಾಗಿದ್ದ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆಕೆ ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿತ್ತು.

2009 ಅ.21ರಂದು ಬಂಧಿತನಾದ ಮೋಹನ್ ಪೆರಾಜೆಯ ಯುವತಿಯನ್ನು ತಾನೇ ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದ. ಬಳಿಕ ಸಿಒಡಿ ಡಿವೈಎಸ್ಪಿ ಪುರುಷೋತ್ತಮ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ 44 ಸಾಕ್ಷಿ ವಿಚಾರಣೆ ನಡೆಸಿ, 70 ದಾಖಲೆ, 37 ಸಾಂದರ್ಭಿಕ ಸಾಕ್ಷಗಳನ್ನು ವಿಚಾರಣೆ ನಡೆಸಲಾಗಿತ್ತು. ಆರೋಪಿ ವಿರುದ್ಧ ಎಲ್ಲ ಆರೋಪ ಗಳು ಸಾಬೀತಾದ ಕಾರಣ ಅಪರಾಧಿಗೆ ಜೀವನ ಪರ್ಯಂತ ಜೀವಾವಧಿ ಶಿಕ್ಷೆ ಹಾಗೂ 18 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಜುಡಿತ್ ಒ.ಎಂ.ಕ್ರಾಸ್ತಾ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News