ಬಿಜೆಪಿ ಯೋಗ್ಯರಿಗೆ ಟಿಕೆಟ್ ನೀಡಿದೆ: ಮಾಜಿ ಸಚಿವ ಸುರೇಶ್ ಕುಮಾರ್
ಬೆಂಗಳೂರು, ಮಾ. 27: ಲೋಕಸಭೆ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಯೋಗ್ಯರಿಗೆ ಟಿಕೆಟ್ ನೀಡಿದೆ. ಯಾವುದೇ ಅಯೋಗ್ಯರಿಗೆ ಟಿಕೆಟ್ ನೀಡಿಲ್ಲ. ಚುನಾವಣಾ ಕಣದಲ್ಲಿರುವ ಎಲ್ಲರೂ ಯೋಗ್ಯರೆ. ಎಲ್ಲರೂ ಗೆಲ್ಲಲಿದ್ದಾರೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್, ಶಾಸಕ ಬಸನಗೌಡ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಬುಧವಾರ ಪಕ್ಷದ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿ ಕೋರ್ ಕಮಿಟಿ ತೇಜಸ್ವಿನಿ ಅನಂತಕುಮಾರ್ ಅವರ ಹೆಸರನ್ನು ಕಳುಹಿಸಿತ್ತು. ಅವರಿಗೆ ಟಿಕೆಟ್ ಸಿಗಬೇಕಿತ್ತು. ಆದರೆ, ಹೈಕಮಾಂಡ್ ಬೇರೆಯವರಿಗೆ ಟಿಕೆಟ್ ನೀಡಿದೆ. ಆದರೆ, ತೇಜಸ್ವಿನಿ ಅವರು ತುಮಕೂರು ಸಂಸದ ಮುದ್ದಹನುಮೇಗೌಡರಂತೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿಲ್ಲ. ಬದಲಿಗೆ ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸಿ, 'ಪಕ್ಷದ ಪರವಾಗಿ ಕೆಲಸ ಮಾಡುವೆ. ಪಕ್ಷ ಮೊದಲು ನಾನು ಅನಂತರ' ಎಂದು ಅವರೇ ಹೇಳಿದ್ದಾರೆಂದು ತಿಳಿಸಿದರು.
ಪ್ರಧಾನಿ ಮೋದಿ ಭಾಷಣವನ್ನು ಕಾಂಗ್ರೆಸಿಗರು ಪೂರ್ಣ ಕೇಳಲಿ. ಆ ಬಳಿಕ ಪ್ರತಿಕ್ರಿಯೆ ನೀಡಲಿ. ಸರ್ಜಿಕಲ್ ಸ್ಟ್ರೈಕ್ ಶ್ರೇಯಸ್ಸು ಡಿಆರ್‌ಡಿಒ ವಿಜ್ಞಾನಿಗಳಿಗೆ ಸಲ್ಲುತ್ತದೆ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ. ವಿಜ್ಞಾನಿಗಳ ಸಾಧನೆಯನ್ನು ದೇಶಕ್ಕೆ ತಿಳಿಯಲಿ ಎಂದು ಪ್ರಧಾನಿ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.
ಮೈತ್ರಿ ಸರಕಾರದ ಅವಸ್ಥೆ ಹರಿದ ಬಟ್ಟೆಯಂತಾಗಿದೆ. ಚಿಕ್ಕಮಗಳೂರು-ಉಡುಪಿ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಅಭ್ಯರ್ಥಿ ಸಿಕ್ಕಿಲ್ಲ. ಹೊಸ ರೀತಿಯಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದಾರೆ. ಮೈತ್ರಿ ಪಕ್ಷಗಳ ಚುನಾವಣೆ ಹಾಸ್ಯಾಸ್ಪದವಾಗಿ ನಡೆಯುತ್ತಿದೆ ಎಂದು ಲೇವಡಿ ಮಾಡಿದರು.
ಮಂಡ್ಯ ಅತಿಸೂಕ್ಷ್ಮ ಕ್ಷೇತ್ರ
ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಿದರೆ ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದು, ಇದು ಮತದಾರರನ್ನು ಬ್ಲಾಕ್‌ಮೇಲ್ ಮಾಡುವ ಹೇಳಿಕೆ. ಮಂಡ್ಯದಲ್ಲಿ ಮುಕ್ತ, ಶಾಂತಿಯುತ ಮತದಾನ ನಡೆಯಬೇಕು. ಈ ನಿಟ್ಟಿನಲ್ಲಿ ಮಂಡ್ಯವನ್ನು ಅತಿಸೂಕ್ಷ್ಮ ಕ್ಷೇತ್ರವೆಂದು ಚುನಾವಣಾ ಆಯೋಗ ಘೋಷಿಸಬೇಕು.
-ಸುರೇಶ್ ಕುಮಾರ್, ಮಾಜಿ ಸಚಿವ