ವೈದ್ಯರನ್ನು ಬೆದರಿಸಿ 50 ಲಕ್ಷಕ್ಕೆ ಬೇಡಿಕೆ: ನಾಲ್ವರು ಪತ್ರಕರ್ತರ ಬಂಧನ

Update: 2019-03-27 16:35 GMT

ವಿಜಯಪುರ, ಮಾ.27: ವೈದ್ಯರೊಬ್ಬರನ್ನು ಬೆದರಿಸಿ, 50 ಲಕ್ಷ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದ ಆರೋಪದಡಿ ಸುವರ್ಣ ನ್ಯೂಸ್ ಸುದ್ದಿ ವಾಹಿನಿಯ ವರದಿಗಾರ ಸೇರಿದಂತೆ ನಾಲ್ವರು ಪತ್ರಕರ್ತರನ್ನು ಬಂಧಿಸಲಾಗಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಅಮೃತ್ ನಿಕ್ಕಂ ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುವರ್ಣ ನ್ಯೂಸ್ ಸುದ್ದಿ ವಾಹಿನಿಯ ವರದಿಗಾರ ಪ್ರಸನ್ನ ದೇಶಪಾಂಡೆ, ಕ್ಯಾಮೆರಾಮನ್ ಸಂಗಮೇಶ ಕುಂಬಾರ, ಸಂಗ್ರಾಮ ಪತ್ರಿಕೆಯ ವರದಿಗಾರ ರವಿ ಬಿಸನಾಳ, ಹಲೋ ಬೆಂಗಳೂರು ಪಾಕ್ಷಿಕ ಪತ್ರಿಕೆಯ ವರದಿಗಾರ ಸಿದ್ರಾಮಪ್ಪಲಗಳಿ ಬಂಧಿತರಾಗಿದ್ದಾರೆ. ವಿಜಯಪುರದ ನಿಂಗನಗೌಡ ಪಾಟೀಲ, ಅಥಣಿಯ ಆಶಾ ಲಕ್ಷ್ಮಣ ಜಡಗೆ ಎಂಬುವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ತನಿಖೆ ಮುಂದುವರೆಸಲಾಗಿದೆ ಎಂದು ಮಾಹಿತಿ ನೀಡಿದರು.

ವಿಜಯಪುರದ ಖ್ಯಾತ ವೈದ್ಯ ಡಾ.ವೋಸ್ವಾಲ್ ನಡೆಸುತ್ತಿರುವ ಆಸ್ಪತ್ರೆಯಲ್ಲಿ ಲಿಂಗ ಪತ್ತೆ ಪರೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿ ಈ ಪತ್ರಕರ್ತರ ತಂಡ ಸ್ಥಳಕ್ಕೆ ತೆರಳಿ, ಇವರೆ ಅವರ ಕಿಸೆಗೆ 20 ಸಾವಿರ ಹಣವಿಟ್ಟು ಬೆದರಿಸಿದ್ದಾರೆ. ಆ ನಂತರ ಬೇರೆ ಕಡೆ ಕರೆದುಕೊಂಡು ಹೋಗಿ ಬಲವಂತವಾಗಿ 1 ಲಕ್ಷ ಹಣ ಪಡೆದು, ಮಿಕ್ಕ 9 ಲಕ್ಷವನ್ನು ನಾಳೆಯೇ ಕೊಡಬೇಕು, ಇಲ್ಲದಿದ್ದರೆ ಸುದ್ದಿ ಬಿತ್ತರಿಸಲಾಗುವುದು ಎಂದು ಬ್ಲಾಕ್‌ಮೇಲ್ ಮಾಡಿದ್ದಾರೆ. ಈ ಸಂಬಂಧ ವೈದ್ಯರು ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ನಾಲ್ವರು ಪತ್ರಕರ್ತರನ್ನು ಬಂಧಿಸಿ, ಏಪ್ರಿಲ್ 3ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ ಎಂದು ಅವರು ವಿವರ ನೀಡಿದರು.

ಬಿಸನಾಳ ಬಿಜೆಪಿ ಕಾರ್ಯಕರ್ತ

ಪತ್ರಕರ್ತ ರವಿ ಬಿಸನಾಳ ಬಿಜೆಪಿ ಜಿಲ್ಲಾ ಘಟಕದ ಮೋರ್ಚಾವೊಂದರ ಕಾರ್ಯದರ್ಶಿಯಾಗಿದ್ದರು. ಈ ಘಟನೆಗೆ ಮುನ್ನವೂ ಪಕ್ಷದಲ್ಲಿ ಸಕ್ರಿಯರಾಗಿದ್ದರು ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News