ಉರುಳಿ ಬಿದ್ದ ಬಿಎಂಟಿಸಿ ಬಸ್: 13 ಪ್ರಯಾಣಿಕರಿಗೆ ಗಾಯ

Update: 2019-03-27 16:49 GMT

ಬೆಂಗಳೂರು, ಮಾ.27: ವೇಗವಾಗಿ ಮೇಲ್ಸೆತುವೆ ಹತ್ತಲು ಹೋಗಿ ಬಿಎಂಟಿಸಿ ಬಸ್ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಉರುಳಿಬಿದ್ದ ಪರಿಣಾಮ 13 ಪ್ರಯಾಣಿಕರಿಗೆ ಗಾಯಗಳಾಗಿರುವ ದುರ್ಘಟನೆ ಇಲ್ಲಿನ ರಾಜಾಜಿನಗರದ 1 ನೇ ಬ್ಲಾಕ್‌ನಲ್ಲಿ ಬುಧವಾರ ನಡೆದಿದೆ.

ಘಟನೆಯಲ್ಲಿ ಗಾಯಗೊಂಡಿರುವ ಅಂಬಿಕಾ(30), ಚಿಕ್ಕೇಗೌಡ(45), ಕಮಲ(44), ಜೈಕುಮಾರ್(45)ನನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿದ್ದು, ಬಸ್ ನಿರ್ವಾಹಕ ವಿಜಯಕುಮಾರ್(52), ಮೋಹನ್(72), ದರ್ಶನ್(19), ಹರೋನ್(62), ಪ್ರಭಾಕರ್(25) ಹಾಗೂ ಕೃಷ್ಣಮೂರ್ತಿ(50)ಯನ್ನು ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಡಿಸಿಪಿ ಸೌಮ್ಯಲತಾ ಹೇಳಿದ್ದಾರೆ.

ಏನಿದು ಘಟನೆ?: ಕಾವಲ್‌ಬೈರಸಂದ್ರದಿಂದ ಮಾಗಡಿ ರಸ್ತೆಯ ಕೆಎಚ್‌ಬಿ ಕಾಲನಿ ಕಡೆಗೆ ಹೋಗುತಿದ್ದ 180ಎ ಸಂಖ್ಯೆಯ ಬಿಎಂಟಿಸಿ ಬಸ್ ಬುಧವಾರ ಬೆಳಗ್ಗೆ 10:40ರ ವೇಳೆಗೆ ರಾಜಾಜಿನಗರ 1ನೇ ಬ್ಲಾಕ್‌ನ ಮೆಲ್ಸೇತುವೆ ರಸ್ತೆಯನ್ನು ಹತ್ತಲು ವೇಗವಾಗಿ ಹೋಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಕೆಳಗಿನ ರಸ್ತೆಗೆ ಉರುಳಿ ಬಿದ್ದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ..

ಬಸ್ ಢಿಕ್ಕಿಯ ರಬಸಕ್ಕೆ ರಸ್ತೆ ವಿಭಜಕ ಚೂರುಚೂರಾಗಿದ್ದು,ಉರುಳಿಬಿದ್ದ ಬಸ್‌ಕೂಡ ಜಖಂಗೊಂಡಿದೆ. ಬಸ್‌ನಲ್ಲಿ 25ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದು, ಅವರಲ್ಲಿ 13 ಮಂದಿಯನ್ನು ಬಿಟ್ಟರೆ ಉಳಿದವರೆಲ್ಲರೂ ಗಾಯಗಳಿಲ್ಲದೇ ಪಾರಾಗಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಧಾವಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಪರಿಹಾರ ಕ್ರಮವನ್ನು ಕೈಗೊಳ್ಳಲಾಗಿದ್ದು, ಚಾಲಕನ ಅತೀ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಮಲ್ಲೇಶ್ವರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೂಡಲೇ ಆಸ್ಪತ್ರೆಗೆ ಧಾವಿಸಿದ ಶಾಸಕ ಗೋಪಾಲಯ್ಯ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಘಟನಾ ಸ್ಥಳಕ್ಕೆ ಸಂಚಾರ ವಿಭಾಗದ ಆಯುಕ್ತ ಹರಿಶೇಖರನ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News