×
Ad

‘ಜವಾಬ್ ದೋ ಮೋದಿ ಜೀ’ ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ಚಾಲನೆ

Update: 2019-03-27 22:39 IST

ಬೆಂಗಳೂರು, ಮಾ.27: 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರಮೋದಿ ದೇಶದ ಜನರಿಗೆ ನೀಡಿದ ಎಷ್ಟು ಆಶ್ವಾಸನೆಗಳನ್ನು ಈಡೇರಿಸಿದ್ದಾರೆ ಎಂಬುದರ ಕುರಿತು ‘ಜವಾಬ್ ದೋ ಮೋದಿ ಜೀ’ ಅಭಿಯಾನ ನಡೆಸಲಾಗುವುದು ಎಂದು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಆಗ್ರಹಿಸಿದರು.

ಬುಧವಾರ ನಗರದ ಅರಮನೆ ಮೈದಾನದ ವೈಟ್‌ಪೆಟಲ್ಸ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೈತರ ಎಷ್ಟು ಸಾಲವನ್ನು ನರೇಂದ್ರಮೋದಿ ತಮ್ಮ ಆಡಳಿತಾವಧಿಯಲ್ಲಿ ಮನ್ನಾ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು.

ರೈತರು ನಿಮ್ಮನ್ನು ಸುಳ್ಳುಗಾರ, ಮೋಸಗಾರ, ನುಡಿದಂತೆ ನಡೆಯಲಿಲ್ಲ, ಕೊಟ್ಟ ವಚನವನ್ನು ಈಡೇರಿಸದೆ ವಚನ ಭ್ರಷ್ಟರಾಗಿದ್ದೀರಾ ಎಂದು ಟೀಕಿಸುತ್ತಿದ್ದಾರೆ. ನಿಮ್ಮ ವಿರುದ್ಧ ಕೇಳಿಬರುತ್ತಿರುವ ಆಪಾದನೆಗಳ ಬಗ್ಗೆ ‘ಜವಾಬ್ ದೋ ಮೋದಿ ಜೀ’(ಉತ್ತರ ಕೊಡಿ ಮೋದಿ ಜೀ) ಎಂದು ಎಚ್.ಕೆ.ಪಾಟೀಲ್ ಆಗ್ರಹಿಸಿದರು.

ನಾವು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರಮೋದಿ ಎದುರು ಆರು ಪ್ರಸ್ತಾಪಗಳನ್ನ ಮುಂದಿಡುತ್ತಿದ್ದೇವೆ. ವಿದೇಶಗಳಿಂದ ಕಪ್ಪುಹಣ ವಾಪಸ್ ತರುವ ಪ್ರಕ್ರಿಯೆ ಯಾವ ಹಂತದಲ್ಲಿದೆ. ಈ ಬಗ್ಗೆ ಜನರಿಗೆ ಕೊಟ್ಟ ಮಾತನ್ನು ಯಾಕೆ ಉಳಿಸಿಕೊಳ್ಳಲಿಲ್ಲ ? ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ರಿ. ಆದರೆ, ಆದರೆ ರೈತರ ಎಷ್ಟು ಸಾಲ ಮನ್ನಾ ಮಾಡಿದ್ದೀರಾ? ಇದರ ಉತ್ತರ ನೀಡಿ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯಕ್ಕೆ ಪ್ರಚಾರಕ್ಕೆ ಬಂದಾಗ, ಮಹಾದಾಯಿ ಸಮಸ್ಯೆಯನ್ನು ಚುನಾವಣೆ ಮುಗಿಯುತ್ತಿದ್ದಂತೆ, ಸಂಬಂಧಪಟ್ಟವರನ್ನು ಕರೆದು ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ನರೇಂದ್ರಮೋದಿ ಆಶ್ವಾಸನೆ ನೀಡಿದ್ದರು. ಆದರೆ, ಯಾರೊಬ್ಬರನ್ನೂ ಕರೆದು ಮಾತನಾಡಿಲ್ಲ ಎಂದು ಅವರು ಕಿಡಿಗಾರಿದರು.

ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿ, ಯುವಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡ ನರೇಂದ್ರಮೋದಿ, ತಮ್ಮ ಆಡಳಿತಾವಧಿಯಲ್ಲಿ ಎಷ್ಟು ಉದ್ಯೋಗಗಳನ್ನು ಸೃಷ್ಟಿಸಿದರು ಎಂಬುದನ್ನು ದೇಶದ ಜನರಿಗೆ ತಿಳಿಸಲಿ ಎಂದು ಎಚ್.ಕೆ.ಪಾಟೀಲ್ ಆಗ್ರಹಿಸಿದರು.

ಕಾಂಗ್ರೆಸ್ ಸರಕಾರದ ಆಡಳಿತಾವಧಿಯಲ್ಲಿ 40.79 ಕೋಟಿ ಉದ್ಯೋಗಗಳಿದ್ದವು. ಇವರ ಆಡಳಿತದಲ್ಲಿ 1.70 ಕೋಟಿ ಉದ್ಯೋಗಗಳು ನಷ್ಟವಾಗಿವೆ. ಉದ್ಯೋಗ ಸೃಷ್ಟಿಯಲ್ಲಿ ಮೋದಿ ಸಾಧನೆ ಶೂನ್ಯ ಎಂದು ಎಚ್.ಕೆ.ಪಾಟೀಲ್ ಆರೋಪಿಸಿದರು.

ಮಧ್ಯಪ್ರದೇಶದಲ್ಲಿ ಬಿಜೆಪಿ ಆಡಳಿತವಿದ್ದಾಗ ನಡೆದ ವ್ಯಾಪಂ ಹಗರಣ ಜಗತ್ತಿನಲ್ಲೆ ದೊಡ್ಡ ಹಗರಣವಾಗಿದೆ. ಈ ಹಗರಣಕ್ಕೆ ಸಂಬಂಧಿಸಿದ 44 ಜನ ಸಾಕ್ಷಿದಾರರಲ್ಲಿ ಒಬ್ಬರೂ ಜೀವಂತವಾಗಿಲ್ಲ. ಕೆಲವರು ಸಹಜ ಸಾವಿಗೆ ಒಳಗಾದರೆ, ಕೆಲವು ಅಪಘಾತಗಳಲ್ಲಿ ಮೃತಪಟ್ಟರು, ಕೆಲವರು ನಾಪತ್ತೆಯಾದರು. ಈ ಬಗ್ಗೆ ಯಾಕೆ ಮೋದಿ ಮೌನವಾಗಿದ್ದಾರೆ ಎಂದು ಅವರು ಪ್ರಶ್ನಿಸಿದರು.

22 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ: ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿದ್ದು, ಕನಿಷ್ಠ 22 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ಕೆಲವು ಕ್ಷೇತ್ರಗಳಲ್ಲಿ ಗೊಂದಲವಿರುವುದು ನಿಜ. ಅದನ್ನು ಬಗೆಹರಿಸುವ ಕೆಲಸವನ್ನು ನಮ್ಮ ನಾಯಕರು ಮಾಡುತ್ತಾರೆ ಎಂದು ಎಚ್.ಕೆ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

ಮಾ.31ಕ್ಕೆ ರಾಹುಲ್ ಗಾಂಧಿ ಆಗಮನ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾ.31ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದು, ಬೆಂಗಳೂರು ಹೊರವಲಯದ ಮಾದಾವರ ಬಳಿಯ ಮೈದಾನದಲ್ಲಿ ಬಹೃತ್ ಸಮಾವೇಶವನ್ನು ಆಯೋಜಿಸಲಾಗಿದೆ. ರಾಹುಲ್ ಗಾಂಧಿ ರಾಜ್ಯದ ವಿವಿಧ ಕಡೆ ಪ್ರಚಾರಕ್ಕೆ ಆಗಮಿಸಲಿದ್ದಾರೆ. ಪ್ರಿಯಾಂಕಾ ಗಾಂಧಿ ಪ್ರಚಾರದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.

-ಎಚ್.ಕೆ.ಪಾಟೀಲ್, ಅಧ್ಯಕ್ಷ, ಕೆಪಿಸಿಸಿ ಪ್ರಚಾರ ಸಮಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News