ತೇಜಸ್ವಿ ಸೂರ್ಯರಿಂದ 5 ವರ್ಷ ಕಿರುಕುಳ: ಯುವತಿಯ ಆರೋಪಗಳ ಟ್ವೀಟ್ ಶೇರ್ ಮಾಡಿದ ಕಾಂಗ್ರೆಸ್

Update: 2019-03-27 18:42 GMT

ಬೆಂಗಳೂರು, ಮಾ.27: ತೇಜಸ್ವಿ ಸೂರ್ಯ 5 ವರ್ಷಗಳ ಕಾಲ ಕಿರುಕುಳ ನೀಡಿದ್ದಾರೆ ಎಂದು ಯುವತಿಯೊಬ್ಬರು ಆರೋಪಿಸಿರುವುದಾಗಿ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಯುವತಿಯದ್ದು ಎನ್ನಲಾದ ಟ್ವೀಟ್ ಗಳ ಸ್ಕ್ರೀನ್ ಶಾಟ್ ಗಳನ್ನು ಶೇರ್ ಮಾಡಿದೆ.

ಡಾ. ಸೋಮ್ ದತ್ತಾ ಎನ್ನುವ ಖಾತೆಯಿಂದ ಮಾಡಲಾದ ಟ್ವೀಟ್ ಗಳಲ್ಲಿ ಬಿಜೆಪಿಯ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಗಂಭೀರ ಆರೋಪಗಳಿತ್ತು.

“ಪ್ರೀತಿಯ ಶೆಫಾಲಿ ಜಿ, ತೇಜಸ್ವಿ ಸೂರ್ಯ ಬಗ್ಗೆ ಸಂಪೂರ್ಣವಾಗಿ ಗೊತ್ತಿಲ್ಲದೆ ಅವರನ್ನು ಪ್ರಮೋಟ್ ಮಾಡಬೇಡಿ ಎಂದು ನಾನು ವಿನಂತಿಸುತ್ತೇನೆ. ಓರ್ವ ನಿಂದಕ, ಮಹಿಳಾ ಶೋಷಕ ನಮ್ಮನ್ನು ಮುನ್ನಡೆಸಬೇಕು ಎಂದು ನೀವು ಬಯಸುತ್ತೀರಾ? ಸಾಕ್ಷಿ ಬೇಕಾಗಿದೆಯೇ? ನಾನು ಶೇರ್ ಮಾಡುತ್ತೇನೆ. ಎಲ್ಲಾ ಹಿಂದೂಗಳು ಧಾರ್ಮಿಕನಲ್ಲ ಹಾಗು ಒಳ್ಳೆಯ ಭಾಷಣಗಳು ಒಳ್ಳೆಯ ಮನುಷ್ಯನನ್ನು ಸೃಷ್ಟಿಸುವುದಿಲ್ಲ” ಎಂದು ಡಾ. ಸೋಮ್ ದತ್ತಾ ಎನ್ನುವ ಖಾತೆಯದ್ದು ಎನ್ನಲಾದ ಟ್ವೀಟ್ ನ ಸ್ಕ್ರೀನ್ ಶಾಟ್ ಅನ್ನು ಕಾಂಗ್ರೆಸ್ ಶೇರ್ ಮಾಡಿದೆ.

ಕಾಂಗ್ರೆಸ್ ಶೇರ್ ಮಾಡಿರುವ ಡಾ.ಸೋಮ್ ದತ್ತಾ ಅವರದ್ದು ಎನ್ನಲಾದ ಇನ್ನೊಂದು ಆರೋಪ ಹೀಗಿದೆ:

“5 ವರ್ಷಗಳ ಕಾಲ ನಾನು ಆತನ ಕೈಯಲ್ಲಿ ನರಳಿದೆ. ನನ್ನ ಪ್ರೀತಿ ಕುರುಡಾಗಿತ್ತು ಮತ್ತು ನನ್ನನ್ನು ನಂಬಿ ನಾನು ಆತನ ಮೊದಲ ಸಂತ್ರಸ್ತೆಯೂ ಅಲ್ಲ ಕೊನೆಯವಳೂ ಅಲ್ಲ”

ಈ ಟ್ವೀಟ್ ಗಳ ಸ್ಕ್ರೀನ್ ಶಾಟ್  ಪೋಸ್ಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, “ತೇಜಸ್ವಿ ಸೂರ್ಯ ಇನ್ನೊಬ್ಬ ಎಂಜೆ ಅಕ್ಬರ್?, ಪ್ರೀತಿಯ ಬಿಜೆಪಿ ತೇಜಸ್ವಿ ಸೂರ್ಯ ಉತ್ತಮ ಆಯ್ಕೆ ಎಂದೆನಿಸುತ್ತದೆ. ಬೆಂಗಳೂರು ದಕ್ಷಿಣ ನೆನಪಿಟ್ಟುಕೊಳ್ಳುತ್ತದೆ” ಎಂದಿದೆ.

ಈ ಬಗ್ಗೆ ಡಾ. ಸೋಮ್ ದತ್ತಾ ಖಾತೆಯನ್ನು ಪರಿಶೀಲಿಸಿದಾಗ ಕಾಂಗ್ರೆಸ್ ಪೋಸ್ಟ್ ಮಾಡಿರುವ ಟ್ವೀಟ್ ಗಳು ಡಿಲಿಟ್ ಆಗಿರುವುದು ಕಂಡುಬಂದಿದೆ. ಬದಲಾಗಿ ಆ ಖಾತೆಯಿಂದ , “ಪ್ರೀತಿಯ ಎಲ್ಲರಿಗೂ ನನ್ನ ಮತ್ತು ತೇಜಸ್ವಿ ಪ್ರಕರಣವನ್ನು ಬಿಟ್ಟುಬಿಡಲು ನಾನು ಪ್ರತಿಯೊಬ್ಬರಲ್ಲೂ ವಿನಂತಿಸುತ್ತಿದ್ದೇನೆ. ನಾವಿಬ್ಬರೂ ಒಳ್ಳೆಯ ಕುಟುಂಬದಿಂದ ಬಂದವರು. ನಾವು ಈ ಪ್ರಕರಣವನ್ನು ಇನ್ನೂ ಎಳೆದರೆ ಹಲವರಿಗೆ ನೋವಾಗುತ್ತದೆ. ನಾವು ಮುಂದೆ ಸಾಗಿದ್ದೇವೆ. ನಾನು ನನ್ನ ಟ್ವೀಟ್ ಗಳನ್ನು ನನ್ನ ಇಚ್ಛೆಯ ಪ್ರಕಾರವೇ ಡಿಲಿಟ್ ಮಾಡಿದ್ದೇನೆ” ಎಂದು ಟ್ವೀಟ್ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News