ಪಿವಿಸಿ ಪೈಪ್‌ಗಳಲ್ಲಿ ಸೀಸದ ಬಳಕೆ: ಮಾನದಂಡಗಳನ್ನು 2 ತಿಂಗಳಲ್ಲಿ ಅಂತಿಮಗೊಳಿಸಲು ಎನ್‌ಜಿಟಿ ನಿರ್ದೇಶ

Update: 2019-03-28 14:12 GMT

ಹೊಸದಿಲ್ಲಿ,ಮಾ.28: ಹೆಚ್ಚಿನ ಕಟ್ಟಡಗಳಲ್ಲಿ ಬಳಕೆಯಾಗುತ್ತಿರುವ ಪಿವಿಸಿ ಪೈಪ್‌ಗಳಲ್ಲಿ ಸೀಸದ ಬಳಕೆಗಾಗಿ ಮಾನದಂಡಗಳನ್ನು ಎರಡು ತಿಂಗಳುಗಳಲ್ಲಿ ಅಂತಿಮಗೊಳಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ)ವು ಕೇಂದ್ರಕ್ಕೆ ನಿರ್ದೇಶ ನೀಡಿದೆ.

ಸೂಚಿತ ಅವಧಿಯೊಳಗೆ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸುವಂತೆ ಎನ್‌ಜಿಟಿ ಅಧ್ಯಕ್ಷ ನ್ಯಾ.ಆದರ್ಶ ಕುಮಾರ ಗೋಯೆಲ್ ನೇತೃತ್ವದ ಪೀಠವು ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಆದೇಶಿಸಿತು.

ಕರಡು ಅಧಿಸೂಚನೆಯನ್ನು ಹೊರಡಿಸುವಂತೆ ತಜ್ಞರ ಸಮಿತಿಯು 2018,ಡಿ.13ರಂದು ಶಿಫಾರಸು ಮಾಡಿರುವುದನ್ನು ನಾವು ಗಮನಿಸಿದ್ದೇವೆ. ಹೀಗಿರುವಾಗ ಪರಿಸರ ಕುರಿತು ಇಂತಹ ಸೂಕ್ಷ್ಮ ವಿಷಯದಲ್ಲಿ ಕರಡು ಅಧಿಸೂಚನೆಯ ಪ್ರಕಟಣೆಯು ಇನ್ನಷ್ಟು ವಿಳಂಬಗೊಳ್ಳಲು ಯಾವುದೇ ಕಾರಣವಿಲ್ಲ ಎಂದು ಪೀಠವು ಹೇಳಿತು.

ಕರಡು ನಿಯಮಾವಳಿಗಳನ್ನು 2018,ಡಿ.13ರಂದು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಮತ್ತು 1986ರ ಪರಿಸರ (ರಕ್ಷಣೆ) ಕಾಯ್ದೆಗನುಗುಣವಾಗಿ ಕರಡು ಅಧಿಸೂಚನೆಯನ್ನು ಹೊರಡಿಸಲು ಶಿಫಾರಸು ಮಾಡಲಾಗಿದೆ ಎಂದು ಪರಿಸರ ಸಚಿವಾಲಯವು ನ್ಯಾಯಾಧಿಕರಣಕ್ಕೆ ತಿಳಿಸಿತ್ತು.

ಹೆಚ್ಚಿನ ಕಟ್ಟಡಗಳಲ್ಲಿ ಸಾಮಾನ್ಯವಾಗಿ ಬಳಕೆಯಾಗುತ್ತಿರುವ ಪಿವಿಸಿ ಪೈಪ್‌ಗಳ ಮೂಲಕ ಹರಿಯುವ ನೀರು ಮಾನವನ ಆರೋಗ್ಯಕ್ಕೆ ಅಪಾಯಕಾರಿಯಾದ ಸೀಸದಂತಹ ವಿಷವಸ್ತುಗಳನ್ನು ಒಳಗೊಂಡಿರಬಹುದು ಎಂದು ಈ ಹಿಂದೆ ಎನ್‌ಜಿಟಿಗೆ ಮಾಹಿತಿ ನೀಡಲಾಗಿತ್ತು.

ಪಿವಿಸಿ ಪೈಪ್‌ಗಳಲ್ಲಿ ಸೀಸದ ಬಳಕೆಗೆ ಮಾನದಂಡಗಳನ್ನು ನಿಗದಿಗೊಳಿಸಲು ಮತ್ತು ಕ್ರಮೇಣ ಅದರ ಬಳಕೆಯನ್ನು ನಿಲ್ಲಿಸಲು ಅಧಿಸೂಚನೆಯ ಪ್ರಕಟಣೆಯನ್ನು ಕೋರಿ ಪರಿಸರ ಕಾರ್ಯಕರ್ತ ಅಜಯಕುಮಾರ ಸಿಂಗ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಎನ್‌ಜಿಟಿ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News