ಮೋದಿಯನ್ನು ಕೊಲ್ಲಲು ‘ಸುಪಾರಿ’ ಬಯಸಿದ್ದ ಫೇಸ್‌ಬುಕ್ ಪೋಸ್ಟ್‌: ಯುವಕನ ಬಂಧನ

Update: 2019-03-28 14:20 GMT

ಜೈಪುರ(ರಾಜಸ್ಥಾನ),ಮಾ.28: ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ‘ಸುಪಾರಿ’ ಕೋರಿ ಫೇಸ್‌ ಬುಕ್‌ ನಲ್ಲಿ ಪೋಸ್ಟ್‌ ಮಾಡಿದ್ದ ನವೀನ್ ಕುಮಾರ್ ಯಾದವ್ (31) ಎಂಬಾತನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

“ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಕುರಿತು ನಮಗೆ ದೂರು ಬಂದಿದ್ದು,ಸೈಬರ್ ಸೆಲ್ ನೆರವಿನೊಂದಿಗೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ” ಎಂದು ಡಿಸಿಪಿ ರಾಹುಲ್ ಜೈನ್ ತಿಳಿಸಿದರು.

ಪುಸ್ತಕಗಳ ಅಂಗಡಿಯನ್ನು ಹೊಂದಿರುವ ಯಾದವ ಮೂಲತಃ ಹರ್ಯಾಣದ ರೇವಾರಿ ನಿವಾಸಿಯಾಗಿದ್ದು,ಹಾಲಿ ಇಲ್ಲಿಯ ತ್ರಿವೇಣಿ ನಗರದಲ್ಲಿ ವಾಸವಾಗಿದ್ದಾನೆ.

‘‘ಮೋದಿಯ ಹತ್ಯೆಗಾಗಿ ನನಗೆ ಸುಪಾರಿ ನೀಡುವವರು ಯಾರಾದರೂ ಇದ್ದಾರಾ? ನನ್ನ ಬಳಿ ಪಕ್ಕಾ ಯೋಜನೆಯಿದೆ’’ ಎಂದು ಯಾದವ್ ಮಾ.26ರಂದು ತನ್ನ ಫೇಸಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದ.

ತಾನು ಈ ಪೋಸ್ಟ್ ಅಪ್‌ಲೋಡ್ ಮಾಡಿದ್ದನ್ನು ಆರೋಪಿಯು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಮತ್ತು ಹಲವಾರು ಜನರು ಆಕ್ಷೇಪಗಳನ್ನು ವ್ಯಕ್ತಪಡಿಸಿದ ಬಳಿಕ ಅದನ್ನು ಹಿಂದೆಗೆದುಕೊಂಡಿದ್ದೇನೆ ಎಂದು ತಿಳಿಸಿದ್ದಾನೆ ಎಂದು ಜೈನ್ ಹೇಳಿದರು.

ಪ್ರಧಾನಿ ಮತ್ತು ಕೇಂದ್ರ ಸರಕಾರ ಮಾಡಿರುವ ಕಾರ್ಯಗಳು ತನಗೆ ಸಮಾಧಾನ ನೀಡಿಲ್ಲ ಮತ್ತು ತಾನು ಮೋದಿಯವರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದೇನೆ ಎಂದೂ ಆರೋಪಿಯು ತಿಳಿಸಿದ್ದಾನೆ.

ಯಾದವ ಹಿಂದೆಯೂ ಮೋದಿ ಮತ್ತು ಕೇಂದ್ರ ಸರಕಾರದ ವಿರುದ್ಧ ನಕಾರಾತ್ಮಕ ವಿಷಯಗಳನ್ನು ಪೋಸ್ಟ್ ಮಾಡಿದ್ದ ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News