ಭೂಮಿ,ವಾಯು ಮತ್ತು ಬಾಹ್ಯಾಕಾಶದಿಂದ ಸರ್ಜಿಕಲ್ ದಾಳಿ ನಡೆಸುವ ಧೈರ್ಯವನ್ನು ಸರಕಾರ ಪ್ರದರ್ಶಿಸಿದೆ: ಮೋದಿ

Update: 2019-03-28 14:21 GMT

ಮೀರತ್(ಉ.ಪ್ರ),ಮಾ.28: ಪ್ರತಿಪಕ್ಷದ ವಿರುದ್ಧ ತೀವ್ರ ದಾಳಿಯೊಂದಿಗೆ ಗುರುವಾರ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರವನ್ನು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರು,ತನ್ನ ಸರಕಾರವು ಭೂಮಿ,ವಾಯು ಮತ್ತು ಬಾಹ್ಯಾಕಾಶ ಈ ಎಲ್ಲ ಕ್ಷೇತ್ರಗಳಿಂದ ಸರ್ಜಿಕಲ್ ದಾಳಿ ನಡೆಸುವ ಧೈರ್ಯವನ್ನು ಪ್ರದರ್ಶಿಸಿದೆ ಎಂದು ಹೇಳಿದರು.

ವಿಜಯ ಸಂಕಲ್ಪ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಮೋದಿ,ಸ್ಪರ್ಧೆಯು ನಿರ್ಣಾಯಕ ಸರಕಾರ ಮತ್ತು ಅನಿಶ್ಚಿತತೆಯ ಭೂತಕಾಲದ ನಡುವೆ ನಡೆಯುತ್ತಿದೆ. ಎನ್‌ಡಿಎ ಸರಕಾರವನ್ನು ಮರಳಿ ಅಧಿಕಾರಕ್ಕೆ ತರಲು ದೇಶದ 130 ಕೋಟಿ ಜನರು ನಿರ್ಧರಿಸಿದ್ದಾರೆ ಎಂದರು.

ತನ್ನನ್ನು ದೇಶದ ‘ಚೌಕಿದಾರ’ ಎಂದು ಕರೆದುಕೊಂಡ ಅವರು,ಈ ಚೌಕಿದಾರನ ಸರಕಾರವು ಭೂಮಿ,ಆಗಸ ಮತ್ತು ಬಾಹ್ಯಾಕಾಶದಿಂದ ಸರ್ಜಿಕಲ್ ದಾಳಿಗಳನ್ನು ನಡೆಸುವ ಧೈರ್ಯವನ್ನು ಹೊಂದಿತ್ತು. ಭಾರತವು ಅಭಿವೃದ್ಧಿಗೊಳ್ಳಬೇಕು, ಭಾರತವು ಶತ್ರುಗಳಿಂದ ಸುಭದ್ರವಾಗಿರಬೇಕು ಎಂದರು. ಕೆಲಸವನ್ನು ಹೇಗೆ ಮಾಡಬೇಕು ಎನ್ನುವುದನ್ನು ತಿಳಿದಿರುವ ಸರಕಾರವನ್ನು ಈ ದೇಶವು ಮೊದಲ ಬಾರಿಗೆ ಕಂಡಿದೆ ಎಂದರು.

2014ರಲ್ಲಿಯೂ ಮೀರತ್‌ನಿಂದಲೇ ಬಿಜೆಪಿಯ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದ ಮೋದಿ,ತಾನು ಎಲ್ಲರಿಗೂ ನ್ಯಾಯವನ್ನು ಒದಗಿಸುವುದಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News