‘ರಾಮ್ ಕಿ ಜನ್ಮಭೂಮಿ’ ಸಿನೆಮ ಬಿಡುಗಡೆಗೆ ತಡೆ ನೀಡಲು ಸುಪ್ರೀಂ ನಕಾರ
ಹೊಸದಿಲ್ಲಿ, ಮಾ.28: ಮಾರ್ಚ್ 29ರಂದು ದೇಶದಾದ್ಯಂತ ಬಿಡುಗಡೆಗೆ ಸಿದ್ಧಗೊಂಡಿರುವ ‘ರಾಮ್ ಕಿ ಜನ್ಮಭೂಮಿ’ ಸಿನೆಮದ ಬಿಡುಗಡೆಗೆ ತಡೆ ನೀಡಲು ಸುಪ್ರೀಂಕೋರ್ಟ್ ಗುರುವಾರ ನಿರಾಕರಿಸಿದೆ.
ಸನೋಜ್ ಮಿಶ್ರಾ ನಿರ್ದೇಶನದ ‘ರಾಮ್ ಕಿ ಜನ್ಮಭೂಮಿ’ ಸಿನೆಮ ರಾಮಮಂದಿರ ವಿವಾದದ ವಿಷಯವನ್ನು ಒಳಗೊಂಡಿದೆ. ಈ ಸಿನೆಮ ಬಿಡುಗಡೆಯಾದರೆ ಈಗ ನಡೆಯುತ್ತಿರುವ ಅಯೋಧ್ಯೆ ಜಮೀನು ವಿವಾದದ ಮಧ್ಯಸ್ಥಿಕೆ ಪ್ರಕ್ರಿಯೆಗೆ ತೊಂದರೆಯಾಗುತ್ತದೆ. ಆದ್ದರಿಂದ ಸಿನೆಮ ಬಿಡುಗಡೆಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಆದರೆ ಮಧ್ಯಸ್ಥಿಕೆ ಪ್ರಕ್ರಿಯೆಗೂ ಸಿನೆಮಾದ ಬಿಡುಗಡೆಗೂ ಯಾವುದೇ ಸಂಬಂಧವಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾ. ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠ, ಅರ್ಜಿಯ ವಿಚಾರಣೆಯನ್ನು 2 ವಾರದ ಬಳಿಕ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.
ಬುಧವಾರ ಇದೇ ವಿಷಯದ ಬಗ್ಗೆ ಸಲ್ಲಿಸಲಾಗಿದ್ದ ಮತ್ತೊಂದು ಅರ್ಜಿಯ ವಿಚಾರಣೆ ನಡೆಸಿದ ದಿಲ್ಲಿ ಹೈಕೋರ್ಟ್, ಸಂವಿಧಾನ ಖಾತರಿಗೊಳಿಸಿರುವ ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ ಉಳಿಯಬೇಕಿದ್ದರೆ ಜನತೆ ಸಹಿಷ್ಣುಗಳಾಗಿರಬೇಕು ಎಂದು ತಿಳಿಸಿತ್ತು.