ಮೋದಿ ಸರಕಾರ ಒಕ್ಕೂಟ ವ್ಯವಸ್ಥೆಗೆ ಮಾರಕ: ಎಚ್.ಡಿ.ಕುಮಾರಸ್ವಾಮಿ

Update: 2019-03-28 15:07 GMT

ಬೆಂಗಳೂರು, ಮಾ.28: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಒಕ್ಕೂಟ ವ್ಯವಸ್ಥೆ ಮಾರಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಇವತ್ತು ರಾಜ್ಯದಲ್ಲಿ ನಡೆದ ಐಟಿ ದಾಳಿಯು ಅದರ ಭಾಗವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಗುರುವಾರ ಕಾಂಗ್ರೆಸ್, ಜೆಡಿಎಸ್ ಹಾಗೂ ಅವರ ಬೆಂಬಲಿಗರ ಮನೆಗಳ ಮೇಲೆ ಐಟಿ ದಾಳಿ ನಡೆದಿರುವುದು ಬಿಜೆಪಿ ಪ್ರೇರಿತವೆಂದು ಖಂಡಿಸಿ ನಗರದ ಐಟಿ ಕಚೇರಿ ಮುಂಭಾಗ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಐಟಿ ಅಧಿಕಾರಿಗಳು ಸಂವಿಧಾನ ಬಾಹಿರವಾಗಿ ಬಿಜೆಪಿ ಏಜೆಂಟ್‌ರಂತೆ ಕಾರ್ಯನಿರ್ವಹಿಸುತ್ತಿರುವುದು ಸ್ಪಷ್ಟವಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಹೀಗಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ನಮ್ಮದು ಒಕ್ಕೂಟ ವ್ಯವಸ್ಥೆ ಎಂಬುದನ್ನು ಮರೆತು ಐಟಿ ಇಲಾಖೆ ಇವತ್ತು ಕಾಂಗ್ರೆಸ್, ಜೆಡಿಎಸ್ ನಾಯಕರ ಮನೆಗಳ ಮೇಲೆ ದಾಳಿ ನಡೆದಿದೆ. ಯಾವುದೆ ರಾಜ್ಯದಲ್ಲಿ ಐಟಿ ಇಲಾಖೆ ದಾಳಿ ಮಾಡುವ ಮುನ್ನ ಆಯಾ ರಾಜ್ಯದ ಪೊಲೀಸ್ ಇಲಾಖೆಯ ಸಹಕಾರ ಪಡೆಯಬೇಕು. ಆದರೆ, ರಾತ್ರೋರಾತ್ರಿ ಈ ರೀತಿಯ ದಾಳಿ ನಡೆಸುವ ಮೂಲಕ ರಾಜ್ಯಗಳಿಗಿರುವ ಕಾನೂನುಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಐಟಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ, ನಾವು ಸಂಪೂರ್ಣವಾಗಿ ಸಹಕಾರ ನೀಡಲು ಸಿದ್ಧರಿದ್ದೇವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ನಡೆದಿರುವ ಐಟಿ ದಾಳಿಗಳು ಕೇವಲ ರಾಜಕೀಯ ಪ್ರೇರಿತ ಎಂಬುದು ಸಾಮಾನ್ಯ ಜನತೆಗೂ ಅನಿಸದೆ ಇರದು ಎಂದು ಅವರು ಹೇಳಿದರು.

ಆಪರೇಷನ್ ಕಮಲದ ಹೆಸರಿನಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಹಾಗೂ ಬಿಜೆಪಿ ನಾಯಕರ ಭ್ರಷ್ಟಾಚಾರದ ಬಗ್ಗೆ ಸಲ್ಲಿಸಿರುವ ದೂರುಗಳ ಬಗ್ಗೆ ಇಲ್ಲಿಯವರೆಗೂ ಐಟಿ ಅಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದರ ಬಗ್ಗೆ ಬಹಿರಂಗ ಪಡಿಸಲಿ. ಕೇವಲ ಬಿಜೆಪಿಯೇತರ ಪಕ್ಷಗಳ ನಾಯಕರ ಮನೆಗಳ ಮೇಲೆ ಮಾತ್ರ ಯಾಕೆ ದಾಳಿ ನಡೆಯುತ್ತಿದೆ ಎಂದು ಅವರು ಪ್ರಶ್ನಿಸಿದರು.

ಬಿಜೆಪಿಯವರು ಸತ್ಯ ಹರಿಶ್ಚಂದ್ರನ ಮಕ್ಕಳಾ

ಬಿಜೆಪಿ ನಾಯಕರ ಮೇಲೆ ಯಾಕೆ ಐಟಿ ದಾಳಿ ನಡೆಯುವುದಿಲ್ಲ. ಬಿಜೆಪಿ ನಾಯಕರು ಸತ್ಯ ಹರಿಶ್ಚಂದ್ರನ ಮಕ್ಕಳಾ. ಇಲ್ಲವೆ ಐಟಿ ಇಲಾಖೆ ಅಧಿಕಾರಿಗಳು ದೇವಲೋಕದಿಂದ ಇಳಿದು ಬಂದವರಾ ? ಅಧಿಕಾರಿಗಳು ಎಷ್ಟು ದಾಳಿ ಮಾಡಿ, ಎಷ್ಟು ಸೆಟ್ಲ್‌ಮೆಂಟ್ ಮಾಡಿಕೊಳ್ಳುತ್ತಾರೆಂದು ನಮಗೆ ಗೊತ್ತಿದೆ. ಐಟಿ ಅಧಿಕಾರಿಗಳ ಇಂತಹ ತಾರತಮ್ಯ ವರ್ತನೆ ಇಲ್ಲಿಗೆ ನಿಲ್ಲಬೇಕು.

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News