ಬಂಧಿಸಲು ಹೊರಟ ಪೊಲೀಸರ ಮೇಲೆಯೇ ಹಲ್ಲೆ: ಆರೋಪಿ ಕಾಲಿಗೆ ಗುಂಡೇಟು

Update: 2019-03-28 16:30 GMT

ಬೆಂಗಳೂರು, ಮಾ.28: ಪ್ರಕರಣವೊಂದರ ಸಂಬಂಧ ಬಂಧಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ಆರೋಪಿಯ ಮೇಲೆ ಪಿಸ್ತೂಲಿನಿಂದ ಗುಂಡು ಹಾರಿಸಿ ಇಲ್ಲಿನ ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ಲಗ್ಗೆರೆ ನಿವಾಸಿ ಮುನಿರಾಜು ಯಾನೆ ಮುನ್ನಾ(25) ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ಮಾ.26ರಂದು ರಾತ್ರಿ 7:30ರ ಸುಮಾರಿಗೆ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯ ಲಗ್ಗೆರೆಯ ಮುನೇಶ್ವರ ಬ್ಲಾಕ್‌ನಲ್ಲಿರುವ ಸರಕಾರಿ ಆಟದ ಮೈದಾನದಲ್ಲಿ ಸಂತೋಷ್ ಮತ್ತು ಆತನ ಸ್ನೇಹಿತರು ಆಟವಾಡಿ ಕುಳಿತಿದ್ದರು. ಈ ವೇಳೆ ನಾಲ್ವರು ದುಷ್ಕರ್ಮಿಗಳು ಏಕಾಏಕಿ ಸಂತೋಷ್ ಮತ್ತು ಸ್ನೇಹಿತ ಸಂದೀಪ್ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಈ ಬಗ್ಗೆ ನಂದಿನಿ ಲೇಔಟ್ ಠಾಣೆಯಲ್ಲಿ ಹಲ್ಲೆ, ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ತನಿಖೆ ಕೈಗೊಂಡ ಪೊಲೀಸರಿಗೆ ಮುನಿರಾಜು ಯಾನೆ ಮುನ್ನ ಮತ್ತು ಆತನ ಸಹಚರರು ಭಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು.

ಗುರುವಾರ ಮುಂಜಾನೆ 6 ಗಂಟೆ ಸಮಯದಲ್ಲಿ ನಂದಿನಿ ಲೇಔಟ್ ಠಾಣೆ ಇನ್ಸ್‌ಪೆಕ್ಟರ್ ಲೋಹಿತ್, ಎಸ್ಸೈ ಕುಮಾರ್, ಪೇದೆ ಬಸವರಾಜು ಮತ್ತು ಸಿಬ್ಬಂದಿ ವರ್ಗ ಕಾರ್ಯಾಚರಣೆ ಕೈಗೊಂಡಾಗ, ಆರೋಪಿ ಮುನಿರಾಜ, ಬುದ್ಧ ನಗರದಲ್ಲಿರುವ ಬಗ್ಗೆ ಖಚಿತ ಮಾಹಿತಿ ಬಂದಿದೆ.

ಪೊಲೀಸರು ಬಂಧಿಸಲು ಯತ್ನಿಸಿದಾಗ ಆರೋಪಿ ಮುನಿರಾಜ, ಪೇದೆ ಬಸವರಾಜು ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ತಕ್ಷಣ ಇನ್ಸ್‌ಪೆಕ್ಟರ್ ಲೋಹಿತ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದರೂ ಕೂಡ ಆರೋಪಿ ಪೊಲೀಸರ ಮೇಲೆ ಮತ್ತೆ ಹಲ್ಲೆಗೆ ಮುಂದಾಗಿದ್ದಾನೆ. ಆ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಆರೋಪಿ ಮುನಿರಾಜನ ಎಡಗಾಲಿಗೆ ತಗುಲಿ ಗಾಯಗೊಂಡು ಕುಸಿದು ಬಿದ್ದಿದ್ದಾನೆ ಎನ್ನಲಾಗಿದೆ.

ತಕ್ಷಣ ಪೊಲೀಸರು ಆತನನ್ನು ಸುತ್ತುವರಿದು ವಶಕ್ಕೆ ತೆಗೆದುಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಯಿಂದ ಹಲ್ಲೆಗೊಳಗಾದ ಪೇದೆ ಬಸವರಾಜು ಅವರನ್ನು ಸಹ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News