ಅಸ್ಪೃಶ್ಯತೆ ಹಿಂದೂ ಧರ್ಮದ ಕಳಂಕ: ಡಾ.ಮೂಡ್ನಾಕೂಡು ಚಿನ್ನಸ್ವಾಮಿ
ಬೆಂಗಳೂರು, ಮಾ.28: ಅಸ್ಪೃಶ್ಯತೆ ಎನ್ನುವುದು ಹಿಂದೂ ಧರ್ಮದ ಕಳಂಕ. ಹೀಗಾಗಿ, ಬ್ರಾಹ್ಮಣರು ಮಾತ್ರ ಈ ಅಸ್ಪಶ್ಯತೆ ತೊಡೆದುಹಾಕಲು ಸಾಧ್ಯ ಎಂದು ಹಿರಿಯ ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟರು.
ಗುರುವಾರ ನಗರದ ಚಾಮರಾಜಪೇಟೆಯ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಏರ್ಪಡಿಸಿದ್ದ, ‘ಸಂವಿಧಾನ ಓದು’ ಕುರಿತ ಕಾರ್ಯಾಗಾರ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೂ ಧರ್ಮದ ಕಳಂಕ ಎಂದರೆ, ಅದು ಅಸ್ಪೃಶ್ಯತೆ. ಈ ಕಳಂಕದಿಂದ ಮುಕ್ತವಾಗಬೇಕಾದರೆ, ಬ್ರಾಹ್ಮಣರು ಜಾತಿ ವ್ಯವಸ್ಥೆ ವಿರುದ್ಧ ಮಾತನಾಡಬೇಕು. ಜೊತೆಗೆ, ಸಮಾನತೆಯ ಕೂಗು ಹೆಚ್ಚಿಸಿ, ಜಾಗೃತಿ ಮೂಡಿಸಬೇಕು ಎಂದರು.
ಮಧ್ಯಮ ಜಾತಿ: ದಲಿತ ಸಮುದಾಯ ಹಾಗೂ ಬ್ರಾಹ್ಮಣರು ಮದುವೆ ಮಾಡಿಕೊಂಡಿರುವ ಸಾಕಷ್ಟು ಉದಾಹರಣೆಗಳು ಜೀವಂತವಾಗಿದ್ದು, ಈ ಇಬ್ಬರ ನಡುವಿನ ಸಂಬಂಧಕ್ಕೆ ಯಾರು, ಎಲ್ಲಿಯೂ ಅಡ್ಡಿ ಉಂಟು ಮಾಡಿ, ಹಲ್ಲೆ, ದೌರ್ಜನ್ಯವೆಸಗಿರುವ ಉದಾಹರಣೆಗಳಿಲ್ಲ. ಆದರೆ, ಮಧ್ಯಮ, ಹಿಂದುಳಿದ ಜಾತಿಗೆ ಸೇರಿದವರು, ದಲಿತರನ್ನು ವಿವಾಹ ಮಾಡಿಕೊಂಡಾಗ, ಕೊಲೆಗಳೇ ನಡೆದಿವೆ ಎಂದು ವಿವರಿಸಿದರು.
ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್.ನಾಗಮೋಹನ್ ದಾಸ್ ಮಾತನಾಡಿ, ಬ್ರಿಟಿಷರ ಆಳ್ವಿಕೆಯಲ್ಲಿ ಅವರದೇ ಆದ ಕಾನೂನು ಇತ್ತು. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಆಗಿನ ನಾಯಕರ ದೂರದೃಷ್ಟಿಯ ಫಲವಾಗಿ ಸಂವಿಧಾನ ರಚನೆಯಾಗಿದ್ದು, ಸಮಾಜದಲ್ಲಿ ಬಡವ ಬಲ್ಲಿದ, ಮೇಲು ಕೀಳು ಭಾವನೆಯಿಲ್ಲದೇ ಎಲ್ಲರೂ ಸಮಾನವಾಗಿ ಬಾಳಲು ಅವಕಾಶ ಕಲ್ಪಿಸಿದ್ದು ಸಂವಿಧಾನವಾಗಿದೆ ಎಂದರು.
ಸಂವಿಧಾನ ಓದು ಅಭಿಯಾನ ಸಂಚಾಲಕಿ ಕೆ.ಎಸ್.ವಿಮಲಾ ಮಾತನಾಡಿ, ಸಂವಿಧಾನದ ಮೂಲ ಆಶಯಗಳನ್ನು ಮೂಲೆಗುಂಪು ಮಾಡುತ್ತಿರುವ ಪ್ರಸ್ತುತ ದಿನಗಳಲ್ಲಿ ಸಂವಿಧಾನದ ಪರಿಚಯ ಮಾಡುವುದಕ್ಕಾಗಿ ಆಂದೋಲನವನ್ನು ಪ್ರಾರಂಭಿಸಿದ್ದು, ದೇಶದ ಪ್ರತಿಯೊಬ್ಬ ನಾಗರಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಲಿತ ಕವಿ ಡಾ.ಸಿದ್ದಲಿಂಗಯ್ಯ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಪದ್ಮಾಶೇಖರ್, ಕುಲಸಚಿವೆ ಎಂ.ಶಿಲ್ಪ, ಎನ್‌ಎಸ್ ಎಸ್ ಪ್ರಾಂತೀಯ ನಿರ್ದೇಶಕ ಕೆ.ವಿ.ಖಾದ್ರಿ ನರಸಿಂಹಯ್ಯ, ಡಾ.ಗುಣನಾಥ ಶೆಟ್ಟಿ ಏಕ್ಕಾರ್, ಡಾ.ಸಂತೋಷ ಸು.ಹಾನಗಲ್ಲ ಸೇರಿದಂತೆ ಪ್ರಮುಖರಿದ್ದರು.