ಮಹಿಳೆ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲಳು: ಡಾ.ಪ್ರಮೋದಾ ದೇವಿ
ಬೆಂಗಳೂರು, ಮಾ.28: ಸಮಾಜದಲ್ಲಿ ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಲ್ಲಳಾಗಿದ್ದಾಳೆ ಎಂದು ಮೈಸೂರಿನ ಮಹಾರಾಣಿ ಡಾ.ಪ್ರಮೋದಾದೇವಿ ತಿಳಿಸಿದ್ದಾರೆ.
ಗುರುವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಗುರುವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಏರ್ಪಡಿಸಿದ್ದ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವೇದಗಳ ಕಾಲದಿಂದಲೂ ಮಹಿಳೆಗೆ ಉತ್ತಮ ಸ್ಥಾನ ನೀಡಲಾಗಿದ್ದು, ಪ್ರಸ್ತುತ ಕುಗ್ಗುತ್ತಿದೆ. ಮಹಿಳಾ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಸಮಾಜ ಮತ್ತು ಸಂಸಾರದಲ್ಲಿ ಮುಖ್ಯ ಪಾತ್ರ ವಹಿಸುವ ಮಹಿಳೆ ಏನನ್ನಾದರೂ ಸಾಧಿಸಬಲ್ಲಳು ಎಂದು ಅಭಿಪ್ರಾಯಪಟ್ಟರು.
ಮಣಿಗಳನ್ನು ಪೋಣಿಸಲು ಸೂತ್ರ ಎಷ್ಟು ಮುಖ್ಯವೋ, ಸಮಾಜ ಮತ್ತು ಸಂಸಾರಕ್ಕೆ ಮಹಿಳೆ ಅಷ್ಟೇ ಮುಖ್ಯ. ಪ್ರಸ್ತುತ ಮಹಿಳೆಯರಿಗೆ ಶೇ. 33ರಷ್ಟು ಮೀಸಲಿದ್ದು, ಮಹಿಳೆಯರು ಮೀಸಲಾತಿಯನ್ನೇ ನಂಬಿಕೊಳ್ಳದೆ, ಶ್ರಮ ಪಟ್ಟು ಕೆಲಸ ಮಾಡಬೇಕು. ರಾಜಮನೆತನ ಸ್ಕೌಟ್ಸ್ ಮತ್ತು ಗೈಡ್ಸ್ ಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಪ್ರತಿಶಾಲೆಯಲ್ಲಿಯೂ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳನ್ನು ಮುಂದುವರಿಸಿದೆ ಎಂದರು.
ಗೈಡ್ಸ್ ನ ರಾಜ್ಯ ಸಹಾಯಕ ಆಯುಕ್ತೆ ಭಾಗ್ಯಲಕ್ಷ್ಮಿ ಮಾತನಾಡಿ, ಮಹಿಳೆ ಪ್ರತಿಯೊಂದು ಕೆಲಸದಲ್ಲಿಯೂ ಗುರುತರ ಪಾತ್ರವಹಿಸುತ್ತಾಳೆ. ಒಬ್ಬ ಮಹಿಳೆ ವಿದ್ಯಾಭ್ಯಾಸ ಪಡೆದರೆ ಇಡೀ ಕುಟುಂಬ ಕಲಿತಂತೆ. ಪುರುಷರಿಗೆ ಸರಿ ಸಮಾನವಾಗಿ ಸಾಧನೆ ಮಾಡಿದ್ದು, ಯುವತಿಯರಿಗೆ ಇಂದಿರಾಗಾಂಧಿ, ಸುಧಾಮೂರ್ತಿ, ಕಲ್ಪನಾ ಚಾವ್ಲಾರಂತ ಸಾಧಕರೇ ಮಾದರಿಯಾಗಿದ್ದಾರೆ. ಉತ್ತಮ ಮತ್ತು ಆರೋಗ್ಯಕರ ಕುಟುಂಬಕ್ಕೆ ಮಹಿಳೆಯ ಶ್ರಮ ಹೆಚ್ಚಿದ್ದು, ಅಸಮಾನತೆ ಎಂಬ ಸಾಮಾಜಿಕ ಪಿಡುಗನ್ನು ನಿವಾರಿಸಬೇಕಿದೆ ಎಂದರು.
ಸಮಾಜ ಸೇವಕಿ ಪೃಥ್ವಿ ಸಿಂಧ್ಯಾ ಮಾತನಾಡಿ, ಮಹಿಳಾ ಸಬಲೀಕರಣವಾಗಬೇಕಾದರೆ, ಮಹಿಳೆಯರಿಗೆ ಶೇ. 50ರಷ್ಟು ಮೀಸಲು ಅವಶ್ಯವಿದೆ. ಮೀಸಲಾತಿ ಇಲ್ಲದ ಕಾರಣ ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರು ಸ್ಪರ್ಧಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ಮುಂದೆ ಬರಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರ ಫೋಟೊಗಳನ್ನು ಅನಾವರಣಗೊಳಿಸಲಾಯಿತು. ವೇದಿಕೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ, ಗೈಡ್ಸ್ ರಾಜ್ಯ ಆಯುಕ್ತೆ ಗೀತಾ ನಟರಾಜ್, ಸ್ಕೌಟ್ಸ್ ಮತ್ತು ಗೈಡ್ಸ್ ನ ಕರ್ನಾಟಕ ಉಪಾಧ್ಯಕ್ಷ ಕೊಂಡಜ್ಜಿ ಬ.ಷಣ್ಮುಖಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.