ಎಲ್ಲೆಡೆ ಮೋದಿ ಅಲೆ, ಗೆಲುವು ಖಚಿತ: ನಳಿನ್ ಕುಮಾರ್

Update: 2019-03-29 06:52 GMT

ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ನಿಧಾನಗತಿಯ ಬಗ್ಗೆ ಭಾರೀ ಅಸಮಾಧಾನವಿದೆಯಲ್ಲಾ?

- ಪಂಪ್‌ವೆಲ್ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಿಧಾನವಾಗಲು ಕಾಂಗ್ರೆಸ್‌ನ ರಾಜಕಾರಣ ಕಾರಣ ಎಂಬುದು ಜನರಿಗೆ ಗೊತ್ತಿದೆ. ಇದಕ್ಕೆ ಕೇವಲ ಸಂಸದರು ಕಾರಣ ಅಲ್ಲ ಎಂದು ಜನ ಅರಿತಿದ್ದಾರೆ. ನಾವು ಕಾಮಗಾರಿಗೆ ವೇಗ ನೀಡುವ ಕೆಲಸ ಮಾಡಿದ್ದೇವೆ.

ದ.ಕ. ಜಿಲ್ಲೆಯಲ್ಲಿ ಈಗಾಗಲೇ ಲೋಕಸಭಾ ಚುನಾ ವಣೆಯ ಕಾವು ತೀವ್ರಗೊಂಡಿದೆ. ಉರಿ ಬಿಸಿಲಿನ ನಡುವೆಯೂ ಈಗಾಗಲೇ ಸ್ಪರ್ಧೆಗಿಳಿದಿರುವ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ತಮ್ಮ ಕಾರ್ಯಕರ್ತರೊಂದಿಗೆ ಬಿರುಸಿನ ಮತ ಬೇಟೆ ಆರಂಭಿಸಿದ್ದಾರೆ. ಧಾರ್ಮಿಕ ಕ್ಷೇತ್ರಗಳ ಭೇಟಿ ಸೇರಿದಂತೆ, ಸಮಾವೇಶ, ಪಕ್ಷದ ಪ್ರಮುಖ ಸಮಾವೇಶಗಳ ಮೂಲಕ ಪ್ರಮುಖ ಪಕ್ಷಗಳು ಚುನಾವಣಾ ಪ್ರಚಾರವನ್ನು ನಡೆಸುತ್ತಿವೆ. ಜಿಲ್ಲೆಯಲ್ಲಿ ಜೆಡಿಎಸ್ ಸೇರಿದಂತೆ ಎಡಪಕ್ಷಗಳು ಈಗಾಗಲೇ ಕಾಂಗ್ರೆಸ್‌ಗೆ ಬೆಂಬಲ ನೀಡಿರುವುದರಿಂದ ಸದ್ಯ ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ಎದುರಾಗಿದೆ. ಉಳಿದಂತೆ ಎಸ್‌ಡಿಪಿಐಯೂ ಸ್ಪರ್ಧೆಯಲ್ಲಿದ್ದು ಮತ ಬೇಟೆಯಲ್ಲಿ ತೊಡಗಿದೆ.ಈ ನಡುವೆ, ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರನ್ನು ‘ವಾರ್ತಾಭಾರತಿ’ ಸಂದರ್ಶಿಸಿದ್ದು, ಅದರ ಮುಖ್ಯಾಂಶವನ್ನು ಇಲ್ಲಿ ನೀಡಲಾಗಿದೆ. ..

►ಈ ಬಾರಿ ಕಾಂಗ್ರೆಸ್ ಹೊಸ ಮುಖವನ್ನು ಕಣಕ್ಕಿಳಿಸಿರುವುದರಿಂದ ಯಾವ ರೀತಿಯ ಸ್ಪರ್ಧೆ ಎದುರು ನೋಡುತ್ತಿದ್ದೀರಿ?

- ನಮ್ಮದು ವ್ಯಕ್ತಿಗತ ಸ್ಪರ್ಧೆ ಅಲ್ಲ. ರಾಷ್ಟ್ರೀಯ ವಿಚಾರದಲ್ಲಿ ವೈಚಾರಿಕ ವಿಚಾರಧಾರೆಯನ್ನು ಹಿಡಿದುಕೊಂಡು ರಾಷ್ಟ್ರ ಚಿಂತಿತವಾದ ಚುನಾವಣೆ. ಈ ಚುನಾವಣೆಯಲ್ಲಿ ವ್ಯಕ್ತಿಯನ್ನು ಆಧಾರದಲ್ಲಿಟ್ಟುಕೊಂಡು ಸ್ಪರ್ಧಿಸುತ್ತಿಲ್ಲ, ವಿಚಾರದಡಿ ಸ್ಪರ್ಧಿಸುತ್ತಿದ್ದೇವೆ. ..

►ಪ್ರಚಾರ ಕಾರ್ಯ ಹೇಗೆ ನಡೆಯುತ್ತಿದೆ?

- ಮನೆ ಮನೆ ಭೇಟಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದೇವೆ. ನಮ್ಮ ಪೇಜ್ ಪ್ರಮುಖರ ಮೂಲಕ ಈಗಾಗಲೇ ಪ್ರಚಾರ ನಡೆಯುತ್ತಿದೆ. ಕಳೆದ ಬಾರಿಯೂ ಎಪ್ರಿಲ್ ಮೇ ತಿಂಗಳಲ್ಲಿಯೇ ಚುನಾವಣೆ ನಡೆದಿತ್ತು. ಈ ಬಾರಿಯ ಬಿಸಿಲಿನ ಧಗೆಗೂ ಕಾರ್ಯಕರ್ತರು ಇದಕ್ಕೆ ಒಗ್ಗಿಕೊಂಡಿದ್ದಾರೆ. ಬೆಳಗ್ಗೆ ಮತ್ತು ಸಂಜೆ ವೇಳೆಯೇ ಆಯ್ಕೆ ಮಾಡುತ್ತಿದ್ದೇವೆ. ಮೂರು ರೀತಿಯಲ್ಲಿ ಪ್ರಚಾರ ಅಭಿಯಾನ ನಡೆಸುತ್ತಿದ್ದೇವೆ. ಪ್ರಥಮ ಹಂತದ ಪ್ರಚಾರ ಕಾರ್ಯ ಈಗಾಗಲೇ ಸಾಕಷ್ಟು ಪೂರ್ಣವಾಗಿದೆ.ಎರಡನೇ ಹಂತದಲ್ಲಿ ಮಧ್ಯ ಭಾಗದಲ್ಲಿ ಮತ್ತು ಮೂರನೇ ಹಂತದ್ದು ಕೊನೆಯಲ್ಲಿ ನಡೆಯಲಿದೆ. ಅದರ ಮಧ್ಯೆ ಎರಡು ದಿನ ಅಭಿಯಾನ ನಡೆಯಲಿದೆ. ಅದು ಇಡೀ ದಿನ ಮನೆ ಮನೆ ಭೇಟಿ. ಇಡೀ ಜಿಲ್ಲೆಯ ಎಲ್ಲಾ ಬೂತ್‌ಗಳಲ್ಲೂ ಏಕಕಾಲದಲ್ಲಿ ಈ ಕಾರ್ಯ ನಡೆಯಲಿದೆ. ..

►ಕಳೆದ ಎರಡು ಅವಧಿಗಿಂತ ಈ ಬಾರಿಯ ಚುನಾವಣೆಯಲ್ಲೇನು ವಿಶೇಷತೆ?

- ಹಿಂದೆಲ್ಲಾ ಸಾರ್ವಜನಿಕ ಸಭೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು. ಈಗ ನೇರವಾಗಿ ಮನೆ ಮನೆಗಳಿಗೆ ಮತದಾರರನ್ನು ಭೇಟಿಯಾಗುವ ಕೆಲಸ ಮಾಡಲಾಗುತ್ತಿದೆ. ಕಾರ್ಯಕರ್ತರು ಮತದಾರರನ್ನು ಸಂಪರ್ಕಿಸುತ್ತಾರೆ. ಮತದಾರರ ಸಮಸ್ಯೆಗಳನ್ನು ಆಲಿಸಿಕೊಂಡು ನಮಗೆ ತಿಳಿಸುತ್ತಾರೆ. ನೇರ ಸಂಪರ್ಕದ ಮೂಲಕ ಪ್ರಚಾರ ನಡೆಸುತ್ತಿದ್ದೇವೆ. ಪೇಜ್ ಪ್ರಮುಖನ ಮೂಲಕ ಈ ಕಾರ್ಯ ನಡೆಯುತ್ತಿದೆ. ಪೇಜ್ ಪ್ರಮುಖನೊಬ್ಬನಿಗೆ 10 ಮನೆಗಳ ಭೇಟಿಯ ಜವಾಬ್ದಾರಿಯನ್ನು ನೀಡಲಾಗುತ್ತಿದೆ. ಆತ ಪ್ರಚಾರದಿಂದ ಹಿಡಿದು ಆ ಮನೆಯವರನ್ನು ಮತದಾನದಂದು ಕರೆದುಕೊಂಡು ಬಂದು ಮತದಾನ ಮಾಡಿಸುವವರೆಗೆ ಕಾರ್ಯ ನಿರ್ವಹಿಸುತ್ತಾನೆ. ಇದು ಯಶಸ್ವಿ ತಂತ್ರಗಾರಿಕೆ. ..

►ಪ್ರಚಾರದ ವೇಳೆ ಮತದಾರರಿಂದ ಪ್ರತಿಕ್ರಿಯೆ ಹೇಗಿದೆ?

- ದ.ಕ. ಜಿಲ್ಲೆಯಲ್ಲಿ ಮೋದಿ ಪರವಾದ ಅಲೆ ಇದೆ. ಹಳ್ಳಿ, ನಗರ, ಗ್ರಾಮಸಭೆ, ವಾರ್ಡ್ ಎಲ್ಲಾ ಕಡೆ ನರೇಂದ್ರ ಮೋದಿ ಪರವಾದ ವಾತಾವರಣ ಇದೆ. ರಾಷ್ಟ್ರ ಮತ್ತು ರಾಷ್ಟ್ರ ರಕ್ಷಣೆ ಮೋದಿಯಿಂದ ಸಾಧ್ಯ ಎಂಬುದು ಜನರಿಗೆ ವಿಶ್ವಾಸವಾಗಿದೆ. ಕಳೆದ ಐದು ವರ್ಷಗಳಲ್ಲಿ ಕೇಂದ್ರದಲ್ಲಿ ಪ್ರಧಾನಿ ಮೋದಿಯವರ ಕಾರ್ಯ, ಆಡಳಿತದ ವೈಖರಿ ಜನರಿಗೆ ವಿಶ್ವಾಸ ತುಂಬಿದೆ. ಈ ಬಾರಿ ಮತ್ತೊಮ್ಮೆ ಅವರಿಗೆ ಅವಕಾಶ ನೀಡಬೇಕೆಂಬುದು ಯುವ ಮತದಾರರಿಂದ ಹಿಡಿದು ಹಿರಿಯ ಮತದಾರರ ವಿಚಾರಧಾರೆ. ..

►ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಇದೆಯೇ?

- ಐದು ವರ್ಷಗಳಲ್ಲಿ ನಾನು ಹಲವಾರು ಕಡೆ ತಿರುಗಿದ್ದೇನೆ. ಈವರೆಗೆ ಒಂದೇ ಒಂದು ಕಡೆ ಆಡಳಿತ ವಿರೋಧಿ ಅಲೆಯ ಬಗ್ಗೆ ಚರ್ಚೆ ಬಂದಿಲ್ಲ. ಕೆಲವೆಡೆ ರಸ್ತೆ ಆಗಿಲ್ಲ, ಕುಡಿಯುವ ನೀರು, ಕೃಷಿಗೆ ಪಂಪ್‌ಸೆಟ್ ಎಂಬ ಬೇಡಿಕೆಗಳಿವೆ. ಅದು ಸಾಮಾನ್ಯ. ಆದರೆ ವಿರೋಧಿ ಅಲೆ ಎಂಬ ಪ್ರಶ್ನೆಯೇ ಇಲ್ಲ. ಆಡಳಿತ ಪರ ಬಲ ಇದೆ. ..

►ಕಾಂಗ್ರೆಸ್‌ನ ಯುವ ಅಭ್ಯರ್ಥಿ ಎದುರು ನಿಮ್ಮ ಚುನಾವಣಾ ತಂತ್ರಗಾರಿಕೆ ಏನು ?

- ಅಭ್ಯರ್ಥಿ ಬಗ್ಗೆ ನಾನೇನೂ ಹೇಳುವುದಿಲ್ಲ. ಅವರ ಪಕ್ಷ ಅವರಿಗೆ ಜವಾಬ್ದಾರಿ ನೀಡಿದೆ. ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಯುವಜನತೆ ಇರುವುದು ಮೋದಿಯ ಜೊತೆ. ಮೋದಿಗಿಂತ ಬೇರೆ ಬ್ರಾಂಡ್ ಇಲ್ಲ. .

►ಬಿಜೆಪಿಗೆ ಅಲ್ಪಸಂಖ್ಯಾತರು ವಿರೋಧವಾಗಿದ್ದಾರೆ ಎಂಬ ಅನಿಸಿಕೆ ಇದೆಯೇ?

- ಯಾವುದೇ ವರ್ಗ, ಮತ ಬೇಧ ನಮ್ಮಲ್ಲಿಲ್ಲ. ಯಾವುದೇ ವರ್ಣಭೇದ ಆಧಾರದಲ್ಲಿ ಇಲ್ಲಿ ವಿರೋಧವಿಲ್ಲ. ಇದು ಪ್ರಜಾಪ್ರಭುತ್ವ ರಾಷ್ಟ್ರ. ಯಾರೂ ವಿರೋಧ ಮಾಡಿಲ್ಲ. ..

►ಸಂಸದರಾಗಿದ್ದಾಗ ಕೆಲವು ಬಾರಿ ಆಭಾಸ ರೀತಿಯ ಹೇಳಿಕೆ, ವರ್ತನೆ ತೋರಿದ್ದೀರಲ್ಲ?

- ನಾನು ಆ ರೀತಿಯಾಗಿ ನಡೆದುಕೊಂಡಿಲ್ಲ. ಅಂತಹ ಯಾವುದೇ ಹೇಳಿಕೆ ನೀಡಿಲ್ಲ. ಅಂತಹ ಭಾವನೆ ಜನರಲ್ಲೂ ಇಲ್ಲ. ಕೆಲವೊಂದು ಸಂದರ್ಭಗಳಲ್ಲಿ ಸರಕಾರಕ್ಕೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದ್ದೇನೆ. ಆ ಸಂದರ್ಭಕ್ಕೆ ಅದು ಸರಿಯಾಗಿತ್ತು. ..

► ಈ ಬಾರಿಯ ಚುನಾವಣೆಯನ್ನು ಯಾವ ರೀತಿಯಲ್ಲಿ ವಿಶ್ಲೇಷಿಸುತ್ತೀರಿ?

ರಾಷ್ಟ್ರ-ಅರಾಷ್ಟ್ರತೆಯ ಚುನಾವಣೆ. ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಷ್ಟ್ರ ರಕ್ಷಣೆ, ರಾಷ್ಟ್ರದ ಅಭಿವೃದ್ಧಿ ಕೇಂದ್ರೀಕೃತ ಚುನಾವಣೆ. ಜನರಿಗೆ ವಿಶ್ವಾಸ ಇದೆ. ರಾಷ್ಟ್ರ ರಕ್ಷಣೆ ಯಾರಿಂದ ಸಾಧ್ಯ. ಭ್ರಷ್ಟಾಚಾರ ರಹಿತ ಆಡಳಿತ ಯಾರು ನೀಡಬಲ್ಲರು ಎಂಬುದಾಗಿ ಜನರಿಗೆ ವಿಶ್ವಾಸ ಇದೆ. ಈ ವಿಚಾರಗಳ ಸ್ಪರ್ಧೆ, ರಾಷ್ಟ್ರಕ್ಕೆ ಬೆಂಬಲಿತವಾಗಿ ಜನ ಬೆಂಬಲಿಸುತ್ತಾರೆ ಎಂಬುದು ನನ್ನ ವಿಶ್ವಾಸ

ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಿರುವಾಗ ಅದು ಸಹಜವಾಗಿಯೇ ಇನ್ನೊಂದು ಪಕ್ಷಕ್ಕೆ ಪೂರಕವಾಗಿರುತ್ತದೆ. ಆದರೆ ಕಾಂಗ್ರೆಸ್‌ನ ದುರಾಡಳಿತವನ್ನು ಹಿಡಿದು ನಾವು ಎಲ್ಲೂ ಮತ ಪ್ರಚಾರ ಮಾಡಿಲ್ಲ. ನಾವು ನಮ್ಮದೇ ಅಭಿವೃದ್ಧಿ ಕಾರ್ಯಗಳ ಮೂಲಕ ಮುಂದುವರಿದಿದ್ದೇವೆ. ನರೇಂದ್ರ ಮೋದಿ ನೀಡಿರುವ 5 ವರ್ಷಗಳ ಅಭಿವೃದ್ಧಿಯ ಮಾರ್ಗಗಳಿವೆ. ಮೋದಿ ಆಡಳಿತದ ಕೊಡುಗೆಗಳನ್ನು ಹಿಡಿದು ನಾವು ಮತ ಯಾಚಿಸುತ್ತಿದ್ದೇವೆ.

Writer - ಸಂದರ್ಶನ: ಸತ್ಯಾ.ಕೆ

contributor

Editor - ಸಂದರ್ಶನ: ಸತ್ಯಾ.ಕೆ

contributor

Similar News