ಪ್ರಕಾಶ್ ರೈಗೆ ‘ವಿಶಲ್’, ಸುಮಲತಾಗೆ ‘ಕಹಳೆ ಊದುತ್ತಿರುವ ರೈತ’ ಚಿಹ್ನೆ

Update: 2019-03-29 16:51 GMT

ಬೆಂಗಳೂರು, ಮಾ.29: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಹುಭಾಷಾ ನಟ ಪ್ರಕಾಶ್ ರೈ ನಾಮಪತ್ರ ಅಂಗೀಕಾರಗೊಂಡಿದ್ದು, ಚುನಾವಣಾ ಆಯೋಗವು ಅವರಿಗೆ ‘ವಿಶಲ್’ ಚಿಹ್ನೆ ನೀಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಪ್ರಕಾಶ್ ರೈ, ಚುನಾವಣಾ ಆಯೋಗವು ನಮ್ಮ ಆಯ್ಕೆಯಂತೆ ‘ವಿಶಲ್’ ಚಿಹ್ನೆಗೆ ಒಪ್ಪಿಗೆ ನೀಡಿದೆ. ಎಲ್ಲರೂ ಭ್ರಷ್ಟಾಚಾರ, ಬೇಜವಾಬ್ದಾರಿ ರಾಜಕಾರಣಿಗಳ ವಿರುದ್ಧ ವಿಶಲ್ ಊದೋಣ ಎಂದು ಪ್ರಕಾಶ್ ರೈ ಕರೆ ನೀಡಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್ ಅವರಿಗೆ ‘ಕಹಳೆ ಊದುತ್ತಿರುವ ರೈತ’ ಚಿಹ್ನೆ ನೀಡಲು ಚುನಾವಣಾಧಿಕಾರಿ ಹಾಗೂ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಂತಿಮಗೊಳಿಸಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಚುನಾವಣಾ ಕಣದಲ್ಲಿದ್ದವರಿಗೆ ಆಯೋಗ ಚಿಹ್ನೆಗಳನ್ನು ನೀಡಿದ್ದು, ಸುಮಲತಾ ಅಂಬರೀಶ್ ತೆಂಗಿನ ತೋಟ, ಕಹಳೆ ಊದುತ್ತಿರುವ ರೈತ, ಕಬ್ಬಿನ ಗದ್ದೆ ಮುಂದೆ ರೈತ ನಿಂತಿರುವ ಚಿಹ್ನೆಗಳನ್ನು ಆಯ್ಕೆ ಮಾಡಿದ್ದರು. ಆದರೆ, ಇಂದು ನಡೆದ ಲಕ್ಕಿ ಡ್ರಾನಲ್ಲಿ ಮೂರು ಚಿಹ್ನೆಗಳು ಬೇರೆಯವರ ಪಾಲಾಗಿ, ಇವರಿಗೆ ತಳ್ಳುವ ಗಾಡಿ ಚಿಹ್ನೆ ಸಿಕ್ಕಿತ್ತು. ಆದರೆ, ಸುಮಲತಾ ಇದೇ ಚಿಹ್ನೆ ನೀಡಬೇಕು ಎಂದು ಪಟ್ಟು ಹಿಡಿದಿದ್ದು, ಚುನಾವಣಾಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಣಯ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.

ಇನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮೌನ ಹೋರಾಟಗಾರ ಅಂಬ್ರೋಸ್ ಡಿ ಮೆಲ್ಲೋ ಅವರಿಗೆ ‘ಸ್ಲೇಟು’ ಚಿಹ್ನೆಯನ್ನು ಚುನಾವಣಾ ಆಯೋಗ ನೀಡಿದೆ. ಇಂದು ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯುತ್ತಿರುವ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಎಲ್ಲ ಪಕ್ಷೇತರ ಅಭ್ಯರ್ಥಿಗಳಿಗೆ ಆಯೋಗದಿಂದ ಚಿಹ್ನೆಗಳನ್ನು ನಿಗದಿ ಮಾಡಿದ್ದು, ಚುನಾವಣಾ ಕಣ ರಂಗೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News