ಸಿದ್ದರಾಮಯ್ಯ ವಿರುದ್ಧ ಡಿವಿಎಸ್ ಸರಣಿ ಟ್ವಿಟ್ ಪ್ರಹಾರ
ಬೆಂಗಳೂರು, ಮಾ.29: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ನಗುವುದು ಬಿಟ್ಟರೆ ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡಿಲ್ಲವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಟೀಕೆಗೆ ಸದಾನಂದ ಗೌಡ ಸರಣಿ ಟ್ವಿಟ್‌ಗಳನ್ನು ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.
ಟ್ವಿಟ್-1: ಹೌದು, ನನ್ನದು ನಗು ಮುಖ, ನನ್ನ ಆಲೋಚನೆಗಳು ಯಾವತ್ತೂ ಧನಾತ್ಮಕ. ಅದಕ್ಕೆ ನಾನು ನಗು ಮಖದಲ್ಲಿ ಇರುತ್ತೇನೆ. ಗಂಡನನ್ನು ಕಳೆದು ಕೊಂಡವರ ಬಗ್ಗೆ ಕೀಳಾಗಿ ಮಾತನಾಡುವ ಋಣಾತ್ಮಕ ಚಿಂತನೆ ನನಗೆ ಯಾವತ್ತೂ ಬಂದಿಲ್ಲ. ಅಧಿಕಾರಕ್ಕಾಗಿ ಬದುಕಿ ಬಂದ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಂಡು ಹೀನವಾಗಿ ಬದುಕುವ ಜಾಯಮಾನ ನನ್ನದಲ್ಲ.
ಟ್ವಿಟ್-2: ಸಂಸದನಾಗಿ ನಾನೇನು ಮಾಡಿದ್ದೇನೆಂದು ನನ್ನ ಜನರಿಗೆ ಗೊತ್ತಿದೆ. ಸಾಂದರ್ಭಿಕ ಮೈತ್ರಿ ಮಾಡಿಕೊಂಡು ಜನರನ್ನು ಯಾಮಾರಿಸಲು ಹೊರಟ ಹಗಲು ವೇಷಗಾರರಿಗೆ ಮನದಟ್ಟು ಮಾಡುವ ಅಗತ್ಯ ನನಗಿಲ್ಲ. ನಮ್ಮೊಂದಿಗೆ ಮೋದಿಯವರಿದ್ದಾರೆ. ಮೋದಿ ಜೊತೆಗಿದ್ದರೆ ದೇಶ ಸುರಕ್ಷಿತ ಎನ್ನುವ ಕೋಟಿ ಕೋಟಿ ಜನರಿದ್ದಾರೆ.
ಟ್ವಿಟ್-3: ನೀವುಗಳು ಎದೆಯುಬ್ಬಿಸಿ ಹೇಳಿಕೊಳ್ಳುವಂತ ನಿಷ್ಕಳಂಕ ಚಾರಿತ್ರ್ಯದ ಒಬ್ಬನೇ ಒಬ್ಬ ನಾಯಕ ನಿಮ್ಮಲ್ಲಿದ್ದಾನೆ ಎನ್ನುವ ಛಾತಿ ನಿಮಗಿದೆಯಾ? ರಾಜಕೀಯವನ್ನು ರಾಜಕೀಯವಾಗಿ ನಡೆಸಿ. ವೈಯಕ್ತಿಕ ನಿಂದನೆ ನಿಮ್ಮ ತೂಕವನ್ನು ಅಳೆಯುತ್ತೆ ಎನ್ನುವ ಭಾವನೆ ನಿಮಗಿರಲಿ. ಜನ ಗಮನಿಸುತ್ತಾರೆಂಬ ಕನಿಷ್ಠ ಪ್ರಜ್ಞೆ ಕೂಡ ಇರಲಿ ಎಂದು ಸದಾನಂದಗೌಡ ಸರಣಿ ಟ್ವಿಟ್‌ಗಳನ್ನು ಮಾಡಿದ್ದಾರೆ.
ಸದಾನಂದಗೌಡಗೆ ಬೆಂಬಲಿಸಿ ‘ಕರ್ನಾಟಕದ ವ್ಯಾಕರಣ ಮೇಸ್ಟ್ರೆ. ರಾಜಕೀಯದಲ್ಲಿ ಹಾಸ್ಯ/ವ್ಯಂಗ್ಯದಿಂದ ಕಿಚಾಯಿಸುವುದಕ್ಕೂ ಹೀನಾಯವಾಗಿ ಮಾತನಾಡಿ ಅವಹೇಳನ ಮಾಡುವುದಕ್ಕೂ ‘ಅವರಪ್ಪನಾಣೆ ವ್ಯತ್ಯಾಸವಿದೆ’ ಎಂದು ಬಿಜೆಪಿ ಶಾಸಕ ಸುರೇಶ್‌ಕುಮಾರ್ ಟ್ವಿಟ್ ಮಾಡಿದ್ದಾರೆ.