ಎಲ್ಲ ಕ್ಷೇತ್ರಗಳಲ್ಲಿ ನಮಗೆ ಮೋದಿಯೇ ಅಭ್ಯರ್ಥಿ: ಮಾಜಿ ಡಿಸಿಎಂ ಆರ್.ಅಶೋಕ್
ಬೆಂಗಳೂರು, ಮಾ. 29: ನರೆಂದ್ರ ಮೋದಿಯವರೇ ನಮಗೆ ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕೆಂಬುದು ನಮ್ಮ ಉದ್ದೇಶ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ ಕ್ಷೇತ್ರದ ಪಕ್ಷದ ಅಭ್ಯರ್ಥಿ ತೇಜಸ್ವಿ ಸೂರ್ಯ ಬಿಜೆಪಿ ಉಸ್ತುವಾರಿ ಮುರುಳೀಧರ ರಾವ್ ಅವರನ್ನು ಭೇಟಿ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತೇವೆ ಎಂದರು.
ಬೆಂ.ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ತೇಜಸ್ವಿನಿ ಅನಂತಕುಮಾರ್ ಅವರಿಗೆ ಅನ್ಯಾಯವಾಗಿದೆ. ಆದರೂ, ಪಕ್ಷ ಮೊದಲು, ವ್ಯಕ್ತಿ ನಂತರ. ಹೀಗಾಗಿ ಅವರನ್ನೂ ಸಮಾಧಾನಪಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಅಶೋಕ್ ಇದೇ ವೇಳೆ ಹೇಳಿದರು.
ನೋವು ಏಕೆ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸುಳ್ಳು ಹೇಳುವುದರಲ್ಲಿ, ಕಣ್ಣೀರು ಹಾಕುವುದರಲ್ಲಿ ನಿಸ್ಸೀಮರು. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ದೇವೇಗೌಡ ತೇಜೋವಧೆ ಮಾಡಿರುವುದು ಸರಿಯಲ್ಲ ಎಂದ ಅವರು, ಗುತ್ತಿಗೆದಾರರ ಮೇಲೆ ಐಟಿ ದಾಳಿ ನಡೆಸಿದ್ರೆ ಇವರಿಗೇನು ನೋವು ಎಂದು ಪ್ರಶ್ನಿಸಿದರು.