ನಟ ಯಶ್ ಬಾಡಿಗೆ ಮನೆ ತೆರವಿಗೆ 2 ತಿಂಗಳು ಸಮಯಾವಕಾಶ ನೀಡಿದ ಹೈಕೋರ್ಟ್

Update: 2019-03-29 17:24 GMT

ಬೆಂಗಳೂರು, ಮಾ.29: ನಟ ಯಶ್ ಅವರ ಬನಶಂಕರಿಯ ಬಾಡಿಗೆ ಮನೆ ತೆರವು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮನೆ ತೆರವು ಮಾಡಲು ಎರಡು ತಿಂಗಳುಗಳ ಕಾಲಾವಕಾಶ ನೀಡಿ ಹೈಕೋರ್ಟ್ ಆದೇಶಿಸಿದೆ.

ಈ ಕುರಿತು ನಟ ಯಶ್ ತಾಯಿ ಪುಷ್ಪಾ ಬಾಡಿಗೆ ಮನೆ ಖಾಲಿ ಮಾಡಲು ಸಮಯಾವಕಾಶ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಬಿ.ವಿ.ನಾಗರತ್ನ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಅರ್ಜಿದಾರರಾದ ಪುಷ್ಪಾ ಅವರು ಹಾಸನದಲ್ಲಿ ಹೊಸದೊಂದು ಮನೆ ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ, ಬನಶಂಕರಿಯ ಬಾಡಿಗೆ ಮನೆಯನ್ನು ಖಾಲಿ ಮಾಡಲು ಸಮಯಾವಕಾಶ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಮನೆ ಖಾಲಿ ಮಾಡಲು ಎರಡು ತಿಂಗಳುಗಳ ಸಮಯಾವಕಾಶವನ್ನು ನೀಡಿ ಆದೇಶಿಸಿದೆ. ಬನಶಂಕರಿಯ 3ನೆ ಬ್ಲಾಕ್, 6 ನೆ ಕ್ರಾಸ್‌ನ ಎಂ.ಮುನಿಪ್ರಸಾದ್-ವನಜಾ ವೈದ್ಯ ದಂಪತಿಯ ಮನೆಯಲ್ಲಿ ಯಶ್ ಕುಟುಂಬ 2010ರ ಅಕ್ಟೋಬರ್‌ನಿಂದ ವಾಸವಿದ್ದಾರೆ. ಇನ್ನು 40 ಸಾವಿರ ತಿಂಗಳಿಗೆ ಇಲ್ಲಿ ಬಾಡಿಗೆ ಫಿಕ್ಸ್ ಆಗಿತ್ತು. ಆದರೆ 2013ರಿಂದ ಮನೆ ಬಾಡಿಗೆಯನ್ನು ಸಹ ನೀಡಿರಲಿಲ್ಲ. 2015ರಲ್ಲಿ ಮನೆಯನ್ನು ಖಾಲಿ ಮಾಡಿಕೊಡಲು ವೈದ್ಯ ದಂಪತಿ ಕೇಳಿದ್ದರು. ಆದರೆ ಇದಕ್ಕೆ ಯಶ್ ತಾಯಿ ಪುಷ್ಪಾ ತಗಾದೆ ತೆಗೆದಿದ್ದರು. ಇದಕ್ಕೆ ವೈದ್ಯ ದಂಪತಿ ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರಿ ಬಾಡಿಗೆ ನೀಡಿಲ್ಲ ಎಂದಿದ್ದರು. ಇದಕ್ಕೆ ಯಶ್ ತಾಯಿ ಪುಷ್ಪಾಬಾಡಿಗೆಗೆ ಬಂದಾಗ ಮನೆ ಸಂಪೂರ್ಣ ಆಗಿರಲಿಲ್ಲ. ನಾವೇ 12.5 ಲಕ್ಷ ಖರ್ಚು ಮಾಡಿ ಮಾಡಿಸಿಕೊಂಡಿದ್ದಾಗಿ ಹೇಳಿದ್ದರು. ಇದಕ್ಕೆ ವೈದ್ಯ ದಂಪತಿ ತಮ್ಮ ಮನೆ ಎನ್ನುವ ರೀತಿ ಇಲ್ಲ. ನಮ್ಮ ಗಮನಕ್ಕೆ ತರದೇ ಮಾಡಿಸಿದ್ದಾಗಿ ಆರೋಪಿಸಿದ್ದರು. ವಾದ ಪ್ರತಿವಾದ ಆಲಿಸಿದ್ದ ಸಿಟಿ ಸಿವಿಲ್ ನ್ಯಾಯಾಲಯ 2018 ಎ.7ರಂದು ತೀರ್ಪು ನೀಡಿತ್ತು. 2013ರಿಂದ ಇಲ್ಲಿಯತನಕ ಪ್ರತಿ ತಿಂಗಳು 40 ಸಾವಿರದಂತೆ ಬಾಡಿಗೆ ಹಣ ನೀಡಲು ತಾಕೀತು ಮಾಡಿತ್ತು. ಜೊತೆಗೆ ಶೆ.9ರಷ್ಟು ಬಡ್ಡಿಯನ್ನು ಸಹ ನೀಡುವಂತೆ ಸೂಚಿಸಿತ್ತು. ಇದನ್ನ ಪ್ರಶ್ನಿಸಿ ಯಶ್ ತಾಯಿ ಪುಷ್ಪಾಮತ್ತೆ ಹೈಕೋರ್ಟ್ ಮೆಟ್ಟಿಲೇರಿ ಮೇಲ್ಮನವಿ ಸಲ್ಲಿಸಿದ್ದರು.

ಈ ವೇಳೆ ಹೈಕೋರ್ಟ್‌ನಲ್ಲಿ ಯಶ್ ತಾಯಿಗೆ ಭಾರಿ ಹಿನ್ನಡೆಯಾಗಿತ್ತು. ಹೈಕೋರ್ಟ್ ವಿಭಾಗೀಯ ಪೀಠ ಸೆ.5ರಂದು ಅರ್ಜಿಯನ್ನ ವಜಾಗೊಳಿಸಿ ಬಾಡಿಗೆ ಹಣ ಪಾವತಿಸಿದರೆ 2019ರ ಮಾರ್ಚ್ 31ರತನಕ ಮನೆ ವಾಸಕ್ಕೆ ಅವಕಾಶ ನೀಡುತ್ತೇವೆ ಎಂದು ಹೇಳಿತ್ತು. ಜೊತೆಗೆ ಸಿಟಿ ಸಿವಿಲ್ ಕೋರ್ಟ್ ವಿಧಿಸಿದ್ದ ಬಡ್ಡಿಯನ್ನೂ ಶೇ.9ರಿಂದ ಶೇ.6ಗೆ ಇಳಿಸಿತ್ತು. ಪುಷ್ಪಾ ಅವರು ಬಾಡಿಗೆ ಮನೆ ತೆರವು ಮಾಡಲು ಸಮಯಾವಕಾಶ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ನ್ಯಾಯಪೀಠವು ಮತ್ತೆ ಎರಡು ತಿಂಗಳುಗಳ ಕಾಲಾವಕಾಶವನ್ನು ನೀಡಿ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News