ನಕಲಿ ದಾಖಲೆ ಸೃಷ್ಟಿಸಿ ವಂಚನೆ ಆರೋಪ: ಪೊಲೀಸ್ ಆಯುಕ್ತರಿಗೆ ದೂರು

Update: 2019-03-29 17:29 GMT

ಬೆಂಗಳೂರು, ಮಾ.29: ನಕಲಿ ಭೂ ದಾಖಲೆ ಸೃಷ್ಟಿಸಿ ವಂಚನೆ ಮಾಡಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ನದೀಮ್, ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಬೆಂಗಳೂರು ಉತ್ತರ ತಾಲೂಕಿನ ಕಾಡುಗೊಂಡನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 121, 119ರ ಒಟ್ಟು 1.12 ಎಕರೆ ಭೂಮಿಯ ಮಾಲಕರಾಗಿದ್ದ ಮುಹಮ್ಮದ್ ಇಸ್ಮಾಯಿಲ್ ಸಾಹೀಬ್ ಎಂಬುವರು ಮೃತಪಟ್ಟ ಬಳಿಕ ಝುಬೇರ್ ಅಹ್ಮದ್ ಎಂಬಾತ ನಕಲಿ ದಾಖಲೆ ಸೃಷ್ಟಿಸಿ ತನ್ನ ಹೆಸರಿಗೆ 119ರ ಸರ್ವೆ ಸಂಖ್ಯೆಯ 32,725 ಚದರ ಅಡಿ ವಿಸ್ತೀರ್ಣದ ಜಾಗವನ್ನು ನೋಂದಣಿ ಮಾಡಿಕೊಂಡಿದ್ದಾನೆ.

ಈತನ ಜೊತೆಯಲ್ಲಿ ರಶೀದ್ ಅಹ್ಮದ್, ಅನೀಸ್ ಅಹ್ಮದ್, ಝಾಕಿ ಅಹ್ಮದ್, ಅಬ್ದುಲ್ ಖುದ್ದೂಸ್, ಅಕ್ಬರ್ ಪಾಷಾ, ಝಹೀರ್ ಅಹ್ಮದ್, ಅರ್ಶದ್ ಅಹ್ಮದ್, ಅಮ್ಜದ್ ಅಹ್ಮದ್, ಮುಸಾಯೀರ್, ಅಬ್ದುಲ್ ಸಮದ್ ಖಾನಿ ಸೇರಿ ಒಟ್ಟು 14 ಜನರ ಕೈಜೋಡಿದ್ದಾರೆ.

ಈ ಸಂಬಂಧ ಮಾ.26ರಂದು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆದರೆ, ಅಲ್ಲಿನ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಆಯುಕ್ತರಿಗೆ ದೂರು ನೀಡಲಾಗಿದೆ ಎಂದು ಸುದ್ದಿಗಾರರಿಗೆ ಮುಹಮ್ಮದ್ ನದೀಮ್ ತಿಳಿಸಿದರು.

ಆಸ್ತಿಯ ಮಾಲಕ ಮುಹಮ್ಮದ್ ಇಸ್ಮಾಯಿಲ್ ಅವರು ಇಂಗ್ಲಿಷ್‌ನಲ್ಲಿ ಸಹಿ ಮಾಡುತ್ತಿದ್ದರು. ಆದರೆ, ತಮಿಳು ಭಾಷೆಯಲ್ಲಿ ನಕಲಿ ಸಹಿ ಮಾಡಿದ್ದಾರೆಂದು ಝುಬೇರ್ ಅಹ್ಮದ್ ನಕಲಿ ದಾಖಲೆ ಸೃಷ್ಟಿಸಿದ್ದಾನೆ ಎಂದು ಆರೋಪಿಸಿದರು.

ನಕಲಿ ದಾಖಲೆ ಸೃಷ್ಟಿಸಿಕೊಂಡಿರುವ ಝುಬೇರ್ ಅಹ್ಮದ್, ರಶೀದ್ ಅಹ್ಮದ್ ಸೇರಿದಂತೆ 14 ಮಂದಿ ದಿನನಿತ್ಯ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಹೀಗಾಗಿ, ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದು, ಅವರು ನಕಲಿ ದಾಖಲೆ ಸೃಷ್ಟಿಸುವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡಿದರು.

‘ನಕಲಿ ಸಹಿ ಬಹಿರಂಗ’

ನಕಲಿ ಭೂ ದಾಖಲೆ ಸೃಷ್ಟಿಸಿರುವ ಬಗ್ಗೆ ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ ಎಸ್‌ಎಲ್) ವರದಿ ಹೊರಬಂದಿದ್ದು, ಆರೋಪಿಗಳು ನಕಲಿ ಸಹಿ ಮಾಡಿರುವುದು ಸಾಬೀತವಾಗಿದೆ. ಈಗಲಾದರೂ ಪೊಲೀಸರು ಕ್ರಮ ಕೈಗೊಳ್ಳಲಿ.

-ಮುಹಮ್ಮದ್ ನದೀಮ್, ಸಾಮಾಜಿಕ ಕಾರ್ಯಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News