ಶೇ.50 ವಿವಿಪ್ಯಾಟ್ ಚೀಟಿಗಳ ಎಣಿಕೆ ಬೇಡ ಎಂದ ಚುನಾವಣಾ ಆಯೋಗ: ಕಾರಣ ಇಲ್ಲಿದೆ

Update: 2019-03-30 06:27 GMT

ಹೊಸದಿಲ್ಲಿ, ಮಾ.30: ಸಾರ್ವತ್ರಿಕ ಚುನಾವಣೆಯಲ್ಲಿ ಬಳಕೆಯಾಗುವ ಶೇಕಡ 50ರಷ್ಟು ಇವಿಎಂಗಳ ವಿವಿಪ್ಯಾಟ್ ಚೀಟಿಗಳನ್ನು ಎಣಿಕೆ ಮಾಡಿದರೆ ಫಲಿತಾಂಶ ಐದು ದಿನ ವಿಳಂಬವಾಗುತ್ತದೆ ಹಾಗೂ ಈಗಾಗಲೇ ಮತಯಂತ್ರಗಳು ಶೇಕಡ 99.99ರಷ್ಟು ವಿಶ್ವಾಸಾರ್ಹತೆ ಹೊಂದಿದ್ದು, ವಿವಿಪ್ಯಾಟ್ ಚೀಟಿಗಳ ಎಣಿಕೆಯಿಂದ ಇದಕ್ಕೆ ಯಾವ ಲಾಭವೂ ಇಲ್ಲ ಎಂದು ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

"ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರಗಳ ವಿವಿಪ್ಯಾಟ್ ಚೀಟಿಗಳನ್ನು ತಾಳೆ ನೋಡುವುದರಿಂದ ಸರಾಸರಿ ಎಣಿಕೆ ಅವಧಿ ಐದು ದಿನಗಳಿಗೆ ವಿಸ್ತರಿಸಬಹುದು" ಎಂದು ಆಯೋಗ ತಿಳಿಸಿದೆ. 21 ಎನ್‌ಡಿಎಯೇತರ ರಾಜಕೀಯ ಪಕ್ಷಗಳು ಶೇಕಡ 50ರಷ್ಟು ಇವಿಎಂಗಳ ವಿವಿಪ್ಯಾಟ್ ಚೀಟಿಯನ್ನು ಎಣಿಕೆ ಮಾಡುವಂತೆ ಸೂಚನೆ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ನ ಕಟ್ಟೆ ಏರಿವೆ.

ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ 400ಕ್ಕೂ ಅಧಿಕ ಮತಗಟ್ಟೆಗಳಿವೆ. ಇಲ್ಲಿ ವಿವಿಪ್ಯಾಟ್ ಚೀಟಿಗಳ ಎಣಿಕೆಗೆ 8-9 ದಿನ ಬೇಕಾಗಬಹುದು. ವಿವಿಪಿಎಟಿ ಚೀಟಿಗಳ ಮರು ಎಣಿಕೆಗೆ ಬೇಡಿಕೆ ಸಾಮಾನ್ಯವಾಗಿ ಇದ್ದು, ಇದು ಅಗತ್ಯವಿರುವ ಸಮಯಾವಕಾಶವನ್ನು ಮತ್ತು ಸಂಕೀರ್ಣತೆ ಹೆಚ್ಚಿಸಲು ಕಾರಣವಾಗುತ್ತದೆ ಎಂದು  ಆಯೋಗ ವಾದಿಸಿದೆ.

ಎಣಿಕೆ ಯಂತ್ರಗಳ ಮೂಲಕ ಯಾಂತ್ರಿಕವಾಗಿ ವಿವಿಪ್ಯಾಟ್ ಚೀಟಿಗಳನ್ನು ತಾಳೆ ನೋಡಲು ಯಾವುದೇ ಬಾರ್‌ಕೋಡ್ ವ್ಯವಸ್ಥೆ ಇಲ್ಲ. ಫಲಿತಾಂಶವನ್ನು ಮೇ 23ಕ್ಕೆ ಪ್ರಕಟಿಸಲು ಉದ್ದೇಶಿಸಲಾಗಿದೆ. ಆದರೆ ಬಹುತೇಕ ಕ್ಷೇತ್ರಗಳಲ್ಲಿ ವಿವಿಪ್ಯಾಟ್ ಚೀಟಿ ಎಣಿಕೆ ಮಾಡಿದಲ್ಲಿ ಫಲಿತಾಂಶ ಪ್ರಕಟವಾಗುವ ದಿನಾಂಕ ಮೇ 28 ಆಗಬಹುದು. 400ಕ್ಕೂ ಅಧಿಕ ಮತಗಟ್ಟೆ ಹೊಂದಿರುವ ಕಡೆಗಳಲ್ಲಿ ಮೇ 30 ಅಥವಾ 31ಕ್ಕೆ ಪ್ರಕಟಿಸಬಹುದು ಎಂದು ಹಿರಿಯ ವಕೀಲ ಸಿಎ ಸುಂದರಂ ಅವರು ಆಯೋಗದ ಪರವಾಗಿ ಸಲ್ಲಿಸಿದ ಅಫಿಡವಿತ್‌ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News