ದ.ಕ.: ಬಿಜೆಪಿಯ ಸಂಘಟನಾ ಶಕ್ತಿಯನ್ನು ಮಣಿಸಬಲ್ಲುದೇ ಕಾಂಗ್ರೆಸ್ ?

Update: 2019-03-30 05:03 GMT

ಬಿಜೆಪಿ ಸಾರ್ವಜನಿಕ ಸಭೆಗೆ ಹೆಚ್ಚು ಒತ್ತು ನೀಡು ವುದಿಲ್ಲ. ಬದಲಾಗಿ ‘ಪೇಜ್ ಪ್ರಮುಖ್’ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತದೆ. ಮತದಾರರನ್ನು ವೈಯಕ್ತಿಕವಾಗಿ ಕಂಡು ಸ್ಥಳೀಯ ವಿಷಯಗಳ ಬದಲು ‘ರಾಷ್ಟ್ರೀಯ ವಿಚಾರದ’ ಬಗ್ಗೆ ಮಾತನಾಡಿ ಮತದಾರರ ಮನಪರಿವರ್ತನೆ ಮಾಡಲಾಗುತ್ತದೆ. ಆದರೆ ಮೂರು ದಶಕದ ಬಳಿಕ ಮತ್ತೆ ಬಿಜೆಪಿಯಿಂದ ಕ್ಷೇತ್ರ ವಶಪಡಿಸಿಕೊಳ್ಳುವ ಬಗ್ಗೆ ಮಾತಾಡುತ್ತಿರುವ ಕಾಂಗ್ರೆಸ್‌ನಲ್ಲಿ ಇಂತಹ ಯಾವುದೇ ತಯಾರಿ ಈವರೆಗೂ ಕಂಡು ಬಂದಿಲ್ಲ. ಬಿಜೆಪಿಯನ್ನು ಸೋಲಿಸಬೇಕಾದರೆ ಕಾಂಗ್ರೆಸ್ ಮೊದಲು ಮಣಿಸಬೇಕಾದದ್ದು ಅದರ ಸಂಘಟನಾ ಶಕ್ತಿಯನ್ನು. ಆದರೆ ಅಂತಹ ಯಾವುದೇ ಪ್ರಯತ್ನ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವುದು ಕಾಣುತ್ತಿಲ್ಲ. ಮಂಗಳೂರಿನಿಂದ ಸುಳ್ಯದ ಗಡಿವರೆಗೆ ಒಟ್ಟು 1,861 ಚುನಾವಣಾ ಬೂತ್‌ಗಳಿವೆ. ಈ ಬೂತ್ ಗಳ ಮಟ್ಟದಲ್ಲಿ ಪರಿಣಾಮಕಾರಿ ಕೆಲಸ ಮಾಡದೆ ಫಲಿತಾಂಶ ನಿರೀಕ್ಷಿಸುವುದರಲ್ಲಿ ಅರ್ಥವಿಲ್ಲ. 

ಮಂಗಳೂರು, ಮಾ.29: ಬಿಸಿಲ ಧಗೆ ಏರುತ್ತಿದೆ, ಚುನಾವಣೆಯ ಕಾವೂ ಹೆಚ್ಚುತ್ತಿದೆ. ದ.ಕ. ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಈಗಾಗಲೇ ಎರಡು ಸುತ್ತಿನ ಪ್ರಚಾರ ವನ್ನು ಮುಗಿಸಿ ಮೂರನೇ ಸುತ್ತಿಗೆ ಅಣಿಯಾಗುತ್ತಿದೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ಆ ಕ್ರಿಯಾಶೀಲತೆ ಕಾಣಿಸುತ್ತಿಲ್ಲ. ಮೇಲ್ನೋಟಕ್ಕೆ ನಾವೆಲ್ಲಾ ಜೊತೆಗಿದ್ದೇವೆ ಎಂದು ಬಿಂಬಿಸಲು ಕಾಂಗ್ರೆಸ್ ನಾಯಕರು ಪ್ರಯತ್ನ ಮಾಡುತ್ತಿದ್ದರೂ ಇದು ಕೇವಲ ವೇದಿಕೆಗೆ ಮಾತ್ರ ಸೀಮಿತವಾಗಿರುವುದು ಎದ್ದು ಕಾಣುತ್ತಿದೆ. ಇದು ದ.ಕ. ಲೋಕಸಭಾ ಕ್ಷೇತ್ರದಲ್ಲಿ ಪ್ರಮುಖ ಸ್ಪರ್ಧಿಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಳ ಚುನಾವಣಾ ತಯಾರಿಯ ಸದ್ಯದ ಪರಿಸ್ಥಿತಿ.

ದ.ಕ. ಲೋಕಸಭಾ ಕ್ಷೇತ್ರದಲ್ಲಿ ಈವರೆಗಿನ ಚುನಾವಣೆಗಳಲ್ಲಿ ಕಾಂಗ್ರೆಸ್, ಬಿಜೆಪಿ ಮಧ್ಯೆಯೇ ತೀವ್ರ ಹಣಾಹಣಿ ನಡೆಯುತ್ತಿದ್ದು, ಇತರ ಪಕ್ಷಗಳು ಸ್ಪರ್ಧಿಸುತ್ತಿದ್ದರೂ ಇವೆರಡೂ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಿದ ಉದಾಹರಣೆ ಇಲ್ಲ. ಕಳೆದ ಎರಡು ಅವಗಳಲ್ಲಿ ಈ ಕ್ಷೇತ್ರವನ್ನು ಪ್ರತಿನಿಸಿದ ಬಿಜೆಪಿಯ ನಳಿನ್ ಕುಮಾರ್ ಕಟೀಲು ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಆದರೆ ಅಂತಿಮವಾಗಿ ಬಿಜೆಪಿ ಹೈಕಮಾಂಡ್ ನಳಿನ್‌ಗೆ ಮಣೆ ಹಾಕಿದೆ. ಆದರೆ ಬಿಜೆಪಿ ಕಾರ್ಯಕರ್ತರು ಚುನಾವಣೆ ಸನ್ನಿಹಿತವಾಗುತ್ತಲೇ ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದರು. ಪ್ರತಿಯೊಂದು ವಾರ್ಡ್‌ನ ಪ್ರತೀ ಬೂತ್‌ನ ಮತದಾರರ ಪಟ್ಟಿಯಲ್ಲಿ ಒಂದೊಂದು ಪುಟಕ್ಕೂ ಒಬ್ಬೊಬ್ಬ ಸಕ್ರಿಯ ಕಾರ್ಯಕರ್ತನನ್ನು ‘ಪೇಜ್ ಪ್ರಮುಖ್’ ಎಂದು ಬಿಜೆಪಿ ನೇಮಿಸಿತ್ತು. ಇದು ಇತ್ತೀಚಿಗೆಬಿಜೆಪಿಯ ವ್ಯವಸ್ಥಿತ ಚುನಾವಣಾ ತಂತ್ರವಾಗಿದೆ. ಸಂಘ ಪರಿವಾರದ ಸಲಹೆ-ಸೂಚನೆಯ ಮೇರೆಗೆ ನಡೆಯುವ ಈ ಪ್ರಚಾರ ತಂತ್ರದಲ್ಲಿ ಅಭ್ಯರ್ಥಿ ಯಾರೇ ಆದರೂ ಕೊನೆಗೆ ಪಕ್ಷಕ್ಕೆ ಗೆಲುವು ಖಚಿತ ಎಂಬುದು ಬಿಜೆಪಿ ವಿಶ್ವಾಸ. ಇದು ಈವರೆಗೆ ಯಶಸ್ವಿಯೂ ಆಗಿದೆ.

ಈ ‘ಪೇಜ್ ಪ್ರಮುಖ್’ ಮತದಾರರ ಪಟ್ಟಿಯ ‘ಪುಟ ಮಟ್ಟ’ದ ಪ್ರತಿಯೊಂದು ಮನೆಗೂ ತೆರಳಿ ಮನೆಯ ಪ್ರತಿ ಸದಸ್ಯರಲ್ಲಿ ‘ಬಿಜೆಪಿ ಅಭ್ಯರ್ಥಿ’ಗೆ ಮತ ನೀಡಿ ಎಂದು ವಿನಂತಿಸುತ್ತಾರೆ. ಸದ್ಯ ಈ ಚರ್ಚೆಯಲ್ಲಿ ‘ಬಿಜೆಪಿ ಮತ್ತು ಮೋದಿ’ಯೇ ಪ್ರಮುಖ ಅಂಶ. ಅಭ್ಯರ್ಥಿ ಯಾರು ಎಂಬುದು ನಂತರದ ವಿಷಯ. ಮನೆ ಮನೆಗೆ ತೆರಳಿದಾಗ ಅಲ್ಲಿಂದ ವ್ಯಕ್ತವಾಗುವ ಅಭಿಪ್ರಾಯ, ಅನಿಸಿಕೆ, ಪ್ರತಿಕ್ರಿಯೆಗಳ ಆಧಾರದ ಮೇಲೆ ಯಾವ್ಯಾವ ಮನೆಯಿಂದ ಎಷ್ಟೆಷ್ಟು ಮಂದಿ ಬಿಜೆಪಿಗೆ ಮತ ನೀಡುತ್ತಾರೆ ಎಂದು ಈ ಪೇಜ್ ಪ್ರಮುಖ್ ಲೆಕ್ಕಾಚಾರದಲ್ಲಿ ತೊಡಗುತ್ತಾರೆ. ‘ಪೇಜ್ ಪ್ರಮುಖ್’ ಬಳಿಕ ‘ಬೂತ್ ಪ್ರಮುಖ್’ನನ್ನೂ ಬಿಜೆಪಿ ನಿಯುಕ್ತಿಗೊಳಿಸಿದೆ. ಪ್ರತೀ ಪೇಜ್ ಪ್ರಮುಖ್ ಪ್ರತೀ ವಾರ ತನ್ನ ಪುಟ ವ್ಯಾಪ್ತಿಯ ಮನೆಯವರ ಪ್ರತಿಕ್ರಿಯೆಗಳ ಬಗ್ಗೆ ‘ಬೂತ್ ಪ್ರಮುಖ್’ಗೆ ವರದಿ ಸಲ್ಲಿಸುತ್ತಾರೆ. ನಂತರ ಅದನ್ನು ‘ವಾರ್ಡ್ ಪ್ರಮುಖ್’ಗೆ ನೀಡುತ್ತಾರೆ. ಹೀಗೆ ಅತ್ಯಂತ ಶಿಸ್ತು ಮತ್ತು ವ್ಯವಸ್ಥಿತವಾಗಿ ಬಿಜೆಪಿ ಪ್ರಚಾರ ನಡೆಯುತ್ತಿದೆ. ಅಭ್ಯರ್ಥಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಪ್ರಮುಖ ಊರುಗಳಲ್ಲಿ ಪ್ರಚಾರ ಮಾಡುತ್ತಿರುವಾಗ ಈ ವ್ಯವಸ್ಥೆಯ ಮೂಲಕ ಪಕ್ಷ ಗ್ರಾಮ ಗ್ರಾಮಗಳಲ್ಲಿ ಮನೆಮನೆ ತಲುಪುತ್ತದೆ. ಅಭ್ಯರ್ಥಿ ಘೋಷಣೆ, ನಾಮಪತ್ರ ಸಲ್ಲಿಕೆ ಬಳಿಕ ಈ ಪ್ರಚಾರ ಇನ್ನಷ್ಟು ಚುರುಕುಗೊಳ್ಳುತ್ತದೆ. ಹೀಗೆ ಮತದಾನದ ದಿನದೊಳಗೆ ಕನಿಷ್ಠ 7-8 ಬಾರಿ ಮತದಾರರನ್ನು ಭೇಟಿ ಮಾಡಲಾಗುತ್ತದೆ. ಆದರೆ ಎಲ್ಲೂ ಅಬ್ಬರವಿಲ್ಲ, ಎಲ್ಲವೂ ಅತ್ಯಂತ ವ್ಯವಸ್ಥಿತವಾಗಿಯೇ ನಡೆಯುತ್ತದೆ.

‘ನಾನು ಈವತ್ತು ನನ್ನ ಪುಟ ವ್ಯಾಪ್ತಿಯ 10 ಮನೆಗಳಿಗೆ ಭೇಟಿ ನೀಡಿದೆ. ಈ ಪೈಕಿ ಎರಡು ಮನೆಗಳಿಗೆ ಬೀಗ ಹಾಕಲಾಗಿತ್ತು. ಅವರು ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದಾರಂತೆ. ಎರಡು ದಿನಗಳ ಬಳಿಕ ಬರುತ್ತಾರಂತೆ. ಬಳಿಕ ಮತ್ತೆ ಈ ಮನೆಗಳಿಗೆ ಭೇಟಿ ನೀಡುವೆ. 10 ಮನೆಯವರ ಪೈಕಿ 7 ಮನೆಯ 60 ಮತಗಳು ಬಿಜೆಪಿಗೆ ಪಕ್ಕಾ ಆಗಿರುತ್ತದೆ. ಇನ್ನು 3 ಮನೆಯವರ ಪೈಕಿ ಒಂದು ಮನೆಯವರ ಮತ ನಮಗೆ ಲಭಿಸದು. ಉಳಿದ 2 ಮನೆಯವರ ಪ್ರತಿಕ್ರಿಯೆ ಸ್ಪಷ್ಟವಿಲ್ಲ. ಅವರನ್ನು ನಾಳೆ ಮತ್ತೆ ಭೇಟಿ ಮಾಡಿ ಮನ ಒಲಿಸುವೆವು’... ಸಾಮಾನ್ಯವಾಗಿ ಈ ಮಾದರಿಯಲ್ಲಿ ವರದಿ ನೀಡಲಾಗುತ್ತದೆ. ಪೇಜ್ ಪ್ರಮುಖ್‌ನ ಜವಾಬ್ದಾರಿ ಇಲ್ಲಿಗೇ ಮುಗಿಯುವುದಿಲ್ಲ. ಮತದಾನದ ದಿನದಂದು ಮತದಾರರನ್ನು ಕಂಡು ಅವರನ್ನು ಮತದಾನ ಕೇಂದ್ರಕ್ಕೆ ತಲುಪಿಸುವ ಹೊಣೆಯೂ ಅವರ ಮೇಲಿದೆ. ಅಲ್ಲದೆ ಮತದಾನದ ರಾತ್ರಿಯೇ ಪೋಲಿಂಗ್ ಏಜೆಂಟ್ ನೀಡಿದ ಲೆಕ್ಕಾಚಾರ ಮತ್ತು ಪೇಜ್ ಪ್ರಮುಖ್ ನೀಡುವ ವರದಿಯನ್ನು ಆಧರಿಸಿ ಬಿಜೆಪಿಗೆ ಎಷ್ಟು ಮತಗಳು ಲಭ್ಯವಾಗಿದೆ ಎಂಬ ನಿಖರ ಅಂಕಿಅಂಶವನ್ನು ಕ್ರೋಢೀಕರಿಸಿ ಸೋಲು-ಗೆಲುವಿನ ಲೆಕ್ಕಾಚಾರ ಮಾಡಲಾಗುತ್ತದೆ. ಈ ಲೆಕ್ಕಾಚಾರ ಬಹುತೇಕ ಫಲಿತಾಂಶದೊಂದಿಗೆ ತಾಳೆಯಾಗುತ್ತದೆ.

ದ.ಕ. ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಡಝನ್‌ಗೂ ಅಧಿಕ ಟಿಕೆಟ್ ಆಕಾಂಕ್ಷಿಗಳಿದ್ದರು. ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೈಕಮಾಂಡ್‌ನ ಮನವೊಲಿಸಿ ಕೊನೆ ಗಳಿಗೆಯಲ್ಲಿ ಟಿಕೆಟ್ ದಕ್ಕಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಅಷ್ಟೇನು ನೆಲೆ ಇಲ್ಲದ ಜೆಡಿಎಸ್ ನಾಯಕರು ಕಾಂಗ್ರೆಸ್ ಅಭ್ಯರ್ಥಿಗೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ಜಂಟಿ ಚುನಾವಣಾ ಸಮಿತಿಯೊಂದನ್ನು ರಚಿಸಲಾಗಿದೆ. ಆದರೆ ಈ ಸಮಿತಿ ಏನು ಮಾಡಬೇಕು, ಮತದಾರ ರನ್ನು ಹೇಗೆ ಸೆಳೆಯಬೇಕು ಎಂಬುದರ ಬಗ್ಗೆ ಇನ್ನೂ ಸೂಕ್ತ ನಿರ್ಧಾರ ತೆಗೆದುಕೊಂಡಂತೆ ಕಾಣುತ್ತಿಲ್ಲ. ಅಭ್ಯರ್ಥಿ ಯಾವಾಗ, ಎಲ್ಲಿಗೆ ಭೇಟಿ ನೀಡಬೇಕು? ಯಾರನ್ನು ಭೇಟಿ ಮಾಡಬೇಕು? ಎಂಬುದರ ಪಕ್ಷದ ಮಟ್ಟದಲ್ಲಿ ಚರ್ಚೆಯಾಗಿ ಅಂತಿಮಗೊಳ್ಳುವುದಿಲ್ಲ. ಅವರಿವರು ಕರೆದಂತೆ ಮಂದಿರ, ಮಸೀದಿ, ಚರ್ಚ್ ಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಭೇಟಿ ನೀಡಿ ಕೈ ಮುಗಿಯುತ್ತಿದ್ದಾರೆ. ಮತದಾರರ ಭೇಟಿ ಹೇಗೆ ಎಂಬುದರ ಬಗ್ಗೆ ಸರಿಯಾದ ರೂಪುರೇಷೆ ಇನ್ನೂ ಕಾಣುತ್ತಿಲ್ಲ . ಚುನಾವಣೆಗೆ ಇನ್ನುಳಿದಿರುವುದು ಕೇವಲ 20 ದಿನಗಳು. ಈ ಸಣ್ಣ ಅವಯಲ್ಲಿ ಜಿಲ್ಲೆಯ ಮೂಲೆ ಮೂಲೆಯಲ್ಲಿರುವ ಮತದಾರರನ್ನು ಮಿಥುನ್ ರೈ ಭೇಟಿ ಮಾಡುವುದು ಅಸಾಧ್ಯ. ಆದರೆ ಪಕ್ಷದ ಕಾರ್ಯ ಕರ್ತರು, ಸ್ಥಳೀಯ ನಾಯಕರು ಆಯಾ ಕ್ಷೇತ್ರದ, ಬ್ಲಾಕ್‌ಗಳ ಮತದಾರರನ್ನು ಭೇಟಿ ಮಾಡಿ ಮತಯಾಚಿಸುವ ಲಕ್ಷಣಗಳೂ ಕಾಣುತ್ತಿಲ್ಲ. ಬಿಜೆಪಿ ಈಗಾಗಲೇ ಅಕೃತವಾಗಿ ಚುನಾವಣಾ ಕಚೇರಿಯನ್ನು ತೆರೆದಿದೆ. ಆದರೆ ಕಾಂಗ್ರೆಸ್‌ಗೆ ಪ್ರತ್ಯೇಕ ಚುನಾವಣಾ ಕಚೇರಿ ಬೇಕೇ? ಬೇಕು ಎಂದಾದರೆ ಎಲ್ಲಿ ತೆರೆಯಬೇಕು? ಯಾವಾಗ ತೆರೆಯಬೇಕು? ಪ್ರಚಾರಕ್ಕೆ ಯಾರನ್ನು ಕರೆತರಬೇಕು? ಇದಕ್ಕೆಲ್ಲ ಯಾರ ಮಾರ್ಗದರ್ಶನ ಎಂಬುದು ಕೂಡ ತೀರ್ಮಾನ ವಾದಂತಿಲ್ಲ. ಎಲ್ಲರೂ ನಾಯಕರಾಗಿರುವ ಕಾರಣ ಸಕ್ರಿಯ ಕಾರ್ಯಕರ್ತರೇ ಕಾಂಗ್ರೆಸ್‌ಗೆ ಇಲ್ಲದಂತಹ ಪರಿಸ್ಥಿತಿ.

ಕಾಂಗ್ರೆಸ್‌ನಲ್ಲಿ ಸಾಮಾನ್ಯವಾಗಿ ಟಿಕೆಟ್ ಪಡೆದ ಅಭ್ಯರ್ಥಿಯೇ ವಿವಿಧ ವಿಷಯಗಳನ್ನು ನಿಭಾಯಿಸಲು ತಂಡ ಕಟ್ಟಿ ಪ್ರಚಾರದ, ಬೂತ್‌ಗಳ ಹೊಣೆ ಹೊತ್ತುಕೊಳ್ಳುತ್ತಾರೆ. ಪಕ್ಷದ ಉಳಿದ ಮುಖಂಡರು ಸಾರ್ವಜನಿಕ ಕಾರ್ಯಕ್ರಮಗಳಿಗೆ, ಪತ್ರಿಕಾಗೋಷ್ಠಿಗಳಿಗೆ ಸೀಮಿತವಾಗಿರುತ್ತಾರೆ. ಆದರೆ ಮಿಥುನ್ ರೈ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರೂ ಅವರ ಜೊತೆ ಅಂತಹ ಸಮರ್ಥ ತಂಡ ಇನ್ನಷ್ಟೇ ರೂಪುಗೊಳ್ಳಬೇಕಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅಲ್ಲಲ್ಲಿ ಅಲ್ಪಸ್ವಲ್ಪ ಪ್ರಚಾರ ನಡೆಯುತ್ತಿರುವುದು ಬಿಟ್ಟರೆ ಮನೆಮನೆ ಪ್ರಚಾರ, ಹಾಲಿ ಸಂಸದರ ವೈಲ್ಯಗಳನ್ನು ಜನರಿಗೆ ತಲುಪಿಸುವುದು, ಯುವ ಮತದಾರರನ್ನು ಸೆಳೆಯುವುದು, ಪ್ರತಿದಿನದ ಪ್ರಚಾರ ನಿರ್ವಹಣೆ, ಬೂತ್ ನಿರ್ವಹಣೆ ಇತ್ಯಾದಿ ಗಳನ್ನು ಸರಿಯಾಗಿ ನಿಭಾಯಿಸಲು ಕಾಂಗ್ರೆಸ್ ಇನ್ನೂ ಸಜ್ಜುಗೊಂಡಂತೆ ಕಾಣುತ್ತಿಲ್ಲ. ಪಕ್ಷದ ಹಿರಿಯ ಮುಖಂಡರೂ ಈ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿ ರಣತಂತ್ರ ಹೆಣೆಯುವ, ಪ್ರಚಾರಕ್ಕೆ ವೇಗ ಕೊಡುವ ಪ್ರಯತ್ನ ಮಾಡುತ್ತಿರುವಂತೆ ಕಂಡು ಬರುತ್ತಿಲ್ಲ. ಈ ಎಲ್ಲ ನ್ಯೂನತೆಗಳನ್ನು ಮುಂದಿನ ಎರಡೇ ವಾರಗಳಲ್ಲಿ ಸರಿಪಡಿಸಿಕೊಂಡು ಬಿಜೆಪಿ ಭದ್ರಕೋಟೆಯನ್ನು ವಶಪಡಿಸಿಕೊಳ್ಳುವ ಬಹುದೊಡ್ಡ ಸವಾಲು ಕಾಂಗ್ರೆಸ್ (ಅಭ್ಯರ್ಥಿಯ) ಮುಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News