ನ್ಯೂಝಿಲ್ಯಾಂಡಿನ ಪ್ರಧಾನಿಯಿಂದ ಕಲಿಯಬೇಕಾದ ಪಾಠ

Update: 2019-03-30 15:06 GMT

ಕೇಸರಿ ಉಗ್ರರನ್ನು ನೇರವಾಗಿ ಹಾಗೆಂದು ಹೆಸರಿಸಲು, ಅವರ ವಿರುದ್ಧ ಕಠಿಣಕ್ರಮ ತೆಗೆದುಕೊಳ್ಳಲು ಹಿಂಜರಿಯುವ ಭಾರತದ ರಾಜಕಾರಣಿಗಳೆಲ್ಲರೂ ನ್ಯೂಝಿಲ್ಯಾಂಡಿನ ಪ್ರಧಾನಿ ಜಸಿಂದ ಆರ್ಡರ್ನ್ ರಿಂದ ಕಲಿಯಬೇಕಾದುದು ಬಹಳಷ್ಟಿದೆ. ಮಾರ್ಚ್ 19ರಂದು ತನ್ನ ದೇಶದ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಆಕೆ ‘‘ನಾನೆಂದೂ ಆತನ ಹೆಸರನ್ನು ಉಚ್ಚರಿಸಲಾರೆ. ಆತ ತನ್ನ ಭಯೋತ್ಪಾದಕ ಕೃತ್ಯದ ಮುಖಾಂತರ ಅರಸಿದ್ದ ಅನೇಕ ವಿಷಯಗಳಲ್ಲಿ ಕುಖ್ಯಾತಿಯೂ ಒಂದು. ಆತ ಓರ್ವ ಭಯೋತ್ಪಾದಕ. ಪಾತಕಿ. ಉಗ್ರಗಾಮಿ’’ ಎಂದು ನೇರ, ದಿಟ್ಟ ವಾಕ್ಯಗಳಲ್ಲಿ ತನ್ನ ಮನಸ್ಸನ್ನು ಬಿಚ್ಚಿಡುವ ಮೂಲಕ ತಾನೋರ್ವ ಮುತ್ಸದ್ದಿ ರಾಜಕಾರಣಿ ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಿದರು. ಮೊ

ನ್ನೆ ಮಾರ್ಚ್ 15, 2019ರಂದು ನ್ಯೂಝಿಲ್ಯಾಂಡಿನ ಎರಡು ಮಸೀದಿಗಳಲ್ಲಿ ಭಯಾನಕ ಮಾರಣಹೋಮವೊಂದು ನಡೆದು ಹೋಯಿತು. ಶುಕ್ರವಾರದ ಪ್ರಾರ್ಥನೆಗಾಗಿ ಸೇರಿದ್ದ ಜನರ ಮೇಲೆ ಯದ್ವಾತದ್ವಾ ಗುಂಡಿನ ದಾಳಿ ನಡೆಸಿ 50 ಜನರನ್ನು ಬಲಿತೆಗೆದುಕೊಂಡು 50ಕ್ಕೂ ಅಧಿಕ ಮಂದಿಯನ್ನು ಗಾಯಾಳುಗಳಾಗಿಸಿದ ಆ ಬೀಭತ್ಸಕರ ಭಯೋತ್ಪಾದಕ ಕೃತ್ಯ ಮನಸ್ಸಿನಲ್ಲಿನ್ನೂ ಅಚ್ಚೊತ್ತಿದಂತೆ ಉಳಿದಿದೆ. ಹಂತಕನನ್ನು ಕ್ಷಿಪ್ರವಾಗಿ ಬಂಧಿಸಲಾಗಿದ್ದು ಈತನೋರ್ವ ಉಗ್ರ ಬಲಪಂಥೀಯ, ಬಿಳಿಯ ಜನಾಂಗೀಯವಾದಿ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಈ ಉಗ್ರ ಬಲಪಂಥೀಯ, ಬಿಳಿಯ ಜನಾಂಗೀಯವಾದಿಗಳೆಂದರೆ ಯಾರು, ಅವರು ಎಲ್ಲಿನವರು, ಅವರ ಗುರಿಯೇನು ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸುವುದು ಸಹಜ. ವಾಸ್ತವವಾಗಿ ಇವರೆಲ್ಲ ಸಡಿಲ ಕೊಂಡಿಗಳಿಂದ ಜೋಡಿಸಲ್ಪಟ್ಟ, ಹೆಚ್ಚುಕಡಿಮೆ ಸಮಾನ ಉದ್ದೇಶಗಳುಳ್ಳ ವ್ಯಕ್ತಿಗಳು ಮತ್ತು ಗುಂಪುಗಳ ಪಂಗಡವೊಂದರ ಸದಸ್ಯರು. ನಾರ್ವೆಯ ಯುಟೋಯದಲ್ಲಿ ಯುವಜನರ ಶಿಬಿರದ ಮೇಲೆ ಭಯೋತ್ಪಾದಕ ದಾಳಿ ನಡೆಸಿದ ಆ್ಯಂಡರ್ಸ್ ಬ್ರೆವಿಕ್, ಇಟೆಲಿಯ ಪ್ಲಾರೆನ್ಸ್‌ನಲ್ಲಿ ಸೆನೆಗಲ್‌ನ ಮಾರಾಟಗಾರರನ್ನು ಹತ್ಯೆಗೈದ ಗಿಯನ್‌ಲುಕ ಕಸೆರಿ, ಲಂಡನ್‌ನಲ್ಲಿ ಮೊಳೆ ಬಾಂಬ್ ಸ್ಫೋಟಿಸಿದ ಡೇವಿಡ್ ಕೋಪ್‌ಲ್ಯಾಂಡ್, ಅಮೆರಿಕದ ವಿಸ್ಕಾನ್ಸಿನ್‌ನ ಸಿಖ್ ಗುರುದ್ವಾರವೊಂದರಲ್ಲಿ ಗುಂಡಿನ ಮಳೆಗೈದ ಮೈಕಲ್ ಪೇಜ್, ಅಮೆರಿಕದ ಚಾರ್ಲಟ್ಸ್ ವಿಲ್‌ನಲ್ಲಿ ಪ್ರತಿಭಟನಾಕಾರರ ಮೇಲೆ ವೇಗವಾಗಿ ಕಾರು ಚಲಾಯಿಸಿದ ಜೇಮ್ಸ್ ಫೀಲ್ಡ್ಸ್ ಮೊದಲಾದವರು ಇದೇ ಪಂಗಡಕ್ಕೆ ಸೇರಿದವರು ಅಥವಾ ಅದರ ಸಿದ್ಧಾಂತದ ಬಗ್ಗೆ ಸಹಮತ ವುಳ್ಳವರು. ಬಿಳಿಯ ಜನಾಂಗದ (ಆರ್ಯ) ಶ್ರೇಷ್ಠತೆಯನ್ನು ಪ್ರತಿಪಾದಿಸುವ, ಹಿಂಸಾ ಮಾರ್ಗದ ಮೂಲಕ ಅಧಿಕಾರಕ್ಕೇರುವ ಗುರಿಯಿಟ್ಟುಕೊಂಡಿರುವ, ಬಲಪಂಥೀಯ ಬಂಡವಾಳವಾದಿ ಸಿದ್ಧಾಂತವನ್ನು ಅನುಸರಿಸುವ ಈ ಪಂಗಡ ತನ್ನನ್ನು ಪರ್ಯಾಯ ಬಲಪಂಥೀಯ (alt-right) ಎಂದು ಕರೆದುಕೊಳ್ಳುತ್ತದೆ. ನಿಜವಾಗಿ ಮುಸ್ಸೋಲಿನಿ, ಹಿಟ್ಲರ್ ಮುಂತಾದವರು ಈ ಹಿಂದೆ ಅನುಸರಿಸುತ್ತಿದ್ದ ಫ್ಯಾಶಿ, ನಾಝಿ ಸಿದ್ಧಾಂತಗಳ ಆಧುನಿಕ ರೂಪವಿದು. ಈ ಪರ್ಯಾಯ ಬಲಪಂಥೀಯ ಪಂಗಡ ಜಾಗತಿಕ ಮಟ್ಟದಲ್ಲಿ ಸಂಘಟಿತವಾಗಿದ್ದು ಅಂತರ್ಜಾಲದ ತಾಣಗಳಲ್ಲಿ ತುಂಬ ಸಕ್ರಿಯವಾಗಿದೆ. ಇದರ ಸದಸ್ಯ ಗುಂಪುಗಳು ಮತ್ತು ಬೆಂಬಲಿಗರು ವಿಶ್ವದ ನಾನಾ ದೇಶಗಳಲ್ಲಿ ಹಂಚಿಹೋಗಿದ್ದರೂ ಅವರೆಲ್ಲ ಸದಾ ಪರಸ್ಪರ ಸಂಪರ್ಕದಲ್ಲಿ ಇರುತ್ತಾರೆಂದು ತಿಳಿದುಬಂದಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳ ಕಾಲದಲ್ಲಿ ಡೊನಾಲ್ಡ್ ಟ್ರಂಪ್‌ರನ್ನು ಬೆಂಬಲಿಸಿದ್ದ ಇದೇ ಪಂಗಡದ ಹಲವಾರು ಸದಸ್ಯರು ಇಂದು ಟ್ರಂಪ್ ಆಡಳಿತದಲ್ಲಿ ಅಧಿಕಾರಿಗಳಾಗಿದ್ದಾರೆ ಎನ್ನಲಾಗಿದೆ. ಭಾರತದ ಕೆಲವೊಂದು ಗುಂಪುಗಳು ಟ್ರಂಪ್ ವಿಜಯವನ್ನು ಸಂಭ್ರಮಿಸಿದ ವಿದ್ಯಮಾನ ಮೇಲ್ನೋಟಕ್ಕೆ ಅಸಂಬದ್ಧ ಎನಿಸಿದರೂ ಬಹಳ ಭಾವಗರ್ಭಿತವಾಗಿದ್ದು ಒಳಗೊಳಗಿನ ನಂಟಿನ ಸೂಚಕವಾಗಿದೆ.

► ಭಯೋತ್ಪಾದನೆ ಮತ್ತು ಪಾಶ್ಚಿಮಾತ್ಯ ಮಾಧ್ಯಮಗಳು

ನ್ಯೂಝಿಲ್ಯಾಂಡಿನ ಮುಖ್ಯವಾಹಿನಿಯ ಮಾಧ್ಯಮಗಳು ಕ್ರೈಸ್ಟ್‌ಚರ್ಚ್ ದುರ್ಘಟನೆಯ ವರದಿಗಾರಿಕೆಯನ್ನು ಬಹಳ ಜವಾಬ್ದಾರಿಯುತವಾಗಿ ನಿರ್ವಹಿಸಿದವು. ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿನ ಕೆಲವು ಮುಖ್ಯವಾಹಿನಿಯ ಮಾಧ್ಯಮಗಳ ನಡೆ ತೀವ್ರ ಖಂಡನೆಗೊಳಗಾಗಿದೆೆ. ಅವುಗಳ ವರದಿಗಾರಿಕೆಯನ್ನು ಟೀಕಿಸಿರುವ ದ ಫೀಡ್, ಉಗ್ರನೊಬ್ಬ ಬಿಳಿಯನಾಗಿರುವ ಸಂದರ್ಭಗಳಲ್ಲಿ ಮಾಧ್ಯಮಗಳ ಕೆಲವು ವರ್ಗಗಳು ಮೊದಲು ಕೊಲೆಗಾರನ ಮಾನವೀಯತೆ ಮೇಲೆ ಕೇಂದ್ರೀಕರಿಸಿ ಆನಂತರ ಬಲಿಪಶುಗಳ ಬಗ್ಗೆ ಹೇಳುವ ಪ್ರವೃತ್ತಿಯನ್ನು ಪ್ರದರ್ಶಿಸುತ್ತವೆ; ಅದೇ ವೇಳೆ ಮುಸ್ಲಿಂ ವ್ಯಕ್ತಿಯೊಬ್ಬ ಭಯೋತ್ಪಾದಕ ಕೃತ್ಯ ನಡೆಸಿದಾಗ ಮೊದಲು ಬಲಿಪಶುಗಳ ಮೇಲೆ ಕೇಂದ್ರೀಕರಿಸುತ್ತವೆ ಎಂದು ಹೇಳಿದೆ. ದ ಫೀಡ್ ಮಾಡಿರುವ ಈ ವಿಮರ್ಶೆ ಕಳೆದ ಕೆಲವು ದಶಕಗಳಿಂದ ಇದೇ ಪ್ರವೃತ್ತಿಯನ್ನು ತೋರಿಸುತ್ತಾ ಬಂದಿರುವ ಭಾರತದ ಹೆಚ್ಚಿನ ಮುಖ್ಯವಾಹಿನಿಯ ಮಾಧ್ಯಮಗಳಿಗೂ ಅನ್ವಯವಾಗುತ್ತದೆ. ಇದನ್ನು ಭಾರತೀಯ ಪತ್ರಿಕಾರಂಗದ ಮಹಾ ದುರಂತವೆಂದು ಕರೆದರೆ ತಪ್ಪಾಗಲಾರದು.

► ಭಯೋತ್ಪಾದನೆ ಮತ್ತು ಭಾರತೀಯ ಮಾಧ್ಯಮಗಳು

ನ್ಯೂಝಿಲ್ಯಾಂಡಿನ ಭಯೋತ್ಪಾದಕ ದಾಳಿ ಕುರಿತಂತೆ ಭಾರತೀಯ ಮಾಧ್ಯಮಗಳಲ್ಲಿ ಎರಡು ಬಗೆಯ ವರ್ಣನೆಗಳಿರುವುದನ್ನು ನೋಡಬಹುದು. ಕೆಲವು ಮಾಧ್ಯಮಗಳು ಹಂತಕನನ್ನು ಓರ್ವ ಉಗ್ರ ಬಲಪಂಥೀಯ, ಬಿಳಿಯ ಜನಾಂಗೀಯವಾದಿ ಎಂದು ಬಣ್ಣಿಸಿದರೆ ಇನ್ನು ಕೆಲವು ಉಗ್ರ ಬಲಪಂಥೀಯ ಎಂಬ ಪದವನ್ನು ಕೈಬಿಟ್ಟಿರುವುದನ್ನು ಗಮನಿಸಬಹುದು. ಅವೇಕೆ ಈ ಉಗ್ರ ಬಲ ಪಂಥೀಯ ಎಂಬ ಪದಪುಂಜವನ್ನು ಬಳಸಲು ಹಿಂದೇಟು ಹಾಕುತ್ತಿವೆೆ? ಉತ್ತರ ಬಹು ಸರಳ: ಆರ್ಯಶ್ರೇಷ್ಠತೆಯನ್ನು ಪ್ರತಿಪಾದಿಸುವ ನಮ್ಮದೇ ನೆಲದ ಹಿಂದುತ್ವವಾದಿಗಳು ಇದೇ ಉಗ್ರ ಬಲಪಂಥೀಯವಾದಿ ವರ್ಗಕ್ಕೆ ಸೇರಿದವರು! ಬಿಳಿಯ ಜನಾಂಗೀಯವಾದಿಗಳು ತಮ್ಮನ್ನು ಈ ಕಂದು ಜನಾಂಗೀಯವಾದಿಗಳಿಗಿಂತ ಹೆಚ್ಚು ಶ್ರೇಷ್ಠರೆಂದು ಪರಿಗಣಿಸುತ್ತಿರುವುದೊಂದು ಬೇರೆ ವಿಷಯ! ಈಗ ನಮ್ಮ ಮುಖ್ಯ ವಾಹಿನಿಯ ಮಾಧ್ಯಮ ಗಳ ವಿಷಯಕ್ಕೆ ಮರಳೋಣ. ಹಿಂದುತ್ವವಾದಿ ಗುಂಪುಗಳು ನಡೆಸಿದಂತಹ ಬಾಬರಿ ಮಸೀದಿ ಧ್ವಂಸ; ಮಾಲೇಗಾಂವ್, ಮಕ್ಕಾ ಮಸೀದಿ, ಅಜ್ಮೀರ್ ದರ್ಗಾ, ಸಂಜೋತಾ ಎಕ್ಸ್ ಪ್ರೆಸ್ ಮುಂತಾದ ಸ್ಫೋಟಕೃತ್ಯಗಳು; ಗೋರಕ್ಷಕ, ಸಂಸ್ಕೃತಿರಕ್ಷಕ, ಧರ್ಮರಕ್ಷಕ ಪಡೆಗಳಿಂದ ಹಲ್ಲೆ, ಹತ್ಯೆ ಇತ್ಯಾದಿ ಘಟನೆಗಳ ಸಂದರ್ಭದಲ್ಲಿ ನಮ್ಮ ಮುಖ್ಯವಾಹಿನಿಯ ಮಾಧ್ಯಮಗಳು ಯಾವುದೇ ಹಿಂಜರಿಕೆಯಿಲ್ಲದೆ ಅದನ್ನೊಂದು ಭಯೋತ್ಪಾದಕ ಕೃತ್ಯವೆಂದು ಕರೆದು ದಿಟ್ಟತನ ಪ್ರದರ್ಶಿಸಿದ ನಿದರ್ಶನಗಳು ಎಷ್ಟಿವೆ? ಅತ್ಯಂತ ವಿಷಾದನೀಯ ಸಂಗತಿಯೆಂದರೆ ಇವರ ಶಬ್ದಕೋಶದಲ್ಲಿ ಉಗ್ರ ಅಂದರೆ ಕೇವಲ ‘ಮುಸ್ಲಿಂ ಧರ್ಮೀಯ ಉಗ್ರ’ ಎಂದಾಗಿದೆ ಮತ್ತು ಹಿಂದುತ್ವವಾದಿ ಉಗ್ರರ ಭಯೋತ್ಪಾದಕ ಕೃತ್ಯಗಳು ಭಯೋತ್ಪಾದನೆಯಲ್ಲ, ಧರ್ಮ ಸಂರಕ್ಷಣೆ ಎಂದಾಗಿದೆ. ಒಟ್ಟಾರೆಯಾಗಿ ನೋಡಿದರೆ, ನಮ್ಮ ಬಹುತೇಕ ಮಾಧ್ಯಮಗಳು ನಮ್ಮಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಭಯೋತ್ಪಾದಕ ಕೃತ್ಯಗಳನ್ನು ನಿಷ್ಪಕ್ಷಪಾತವಾಗಿ, ನಿರ್ಭೀತವಾಗಿ ವರದಿ ಮಾಡುವಲ್ಲಿ ವಿಫಲವಾಗಿವೆ. ಅಂತಹ ಮಾಧ್ಯಮಗಳು ತಮ್ಮ ಪತ್ರಿಕಾಧರ್ಮವನ್ನು ಸಂಪೂರ್ಣವಾಗಿ ಮರೆತಿವೆ ಎಂದೇ ಬಹಳ ವಿಷಾದ ದಿಂದ ಹೇಳಬೇಕಾಗುತ್ತದೆ. ಈ ನೈತಿಕ ಅಧಃಪತನ ಕೇವಲ ಪತ್ರಿಕಾರಂಗದಲ್ಲಿ ಮಾತ್ರವಲ್ಲದೆ ರಾಜಕೀಯ ರಂಗದಲ್ಲೂ ವ್ಯಾಪಕವಾಗಿ ಕಂಡುಬರುತ್ತಿದೆ.

► ಭಯೋತ್ಪಾದನೆ ಮತ್ತು ಭಾರತದ ರಾಜಕೀಯ ವಲಯ

ಭಾರತದಲ್ಲಿ ಉಗ್ರಗಾಮಿ ಮುಸ್ಲಿಂ ಗುಂಪುಗಳು ಭಯೋತ್ಪಾದಕ ಕೃತ್ಯಗಳನ್ನು ಎಸಗಿದಾಗ ತಕ್ಷಣದ ಪ್ರತಿಕ್ರಿಯೆಯೆಂದರೆ ಯುಎಪಿಎ ಕಾಯ್ದೆಯಡಿ ಡಝನ್‌ಗಟ್ಟಲೆ ಮುಸ್ಲಿಮರನ್ನು ಬಂಧಿಸಿ ವರ್ಷಗಟ್ಟಲೆ ಜೈಲುಗಳಲ್ಲಿ ಕೊಳೆಸುವುದು. ಇವರಲ್ಲಿ ಹೆಚ್ಚಿನವರು ಹಲವಾರು ವರ್ಷಗಳ ನಂತರ ಖುಲಾಸೆಗೊಳ್ಳುತ್ತಿರುವುದನ್ನು ನಾವೆಲ್ಲರೂ ಕಂಡೇ ಇದ್ದೇವೆ. ಅದೇ ವೇಳೆ ಹಿಂದುತ್ವವಾದಿ ಉಗ್ರರ ವಿರುದ್ಧ ದಾಖಲಾಗುವ ಪ್ರಕರಣಗಳಲ್ಲಿ ಹೆಚ್ಚಿನವು ಒಂದೋ ಹಳ್ಳಹಿಡಿಯುತ್ತಿವೆ, ಇಲ್ಲಾ ಸಾಕ್ಷ್ಯಾಧಾರಗಳ ಕೊರತೆ ಅಥವಾ ಪ್ರಾಸಿಕ್ಯೂಷನ್ ವೈಫಲ್ಯ ಅಥವಾ ತಿರುಗಿಬೀಳುವ ಸಾಕ್ಷಿಗಳಿಂದಾಗಿ ವಜಾಗೊಂಡು, ತಪ್ಪಿತಸ್ಥರು ಮತ್ತು ರೂವಾರಿಗಳು ನಿರಪರಾಧಿಗಳೆಂದಾಗಿ ರಾಜಾರೋಷಾಗಿ ಹೊರಬರುತ್ತಾರೆ. ಭಾರತದ ರಾಜಕಾರಣದಲ್ಲಿ ಭಯಂಕರ ಬಿರುಗಾಳಿ ಎಬ್ಬಿಸಿ ಕೇಸರಿ ಪಾಳಯದ ಆರೋಹಣಕ್ಕೆ ನಾಂದಿ ಹಾಡಿದ ಬಾಬರಿ ಮಸೀದಿ ಧ್ವಂಸ ನಡೆದು 26 ವರ್ಷಗಳು ಕಳೆದರೂ ಅದರ ರೂವಾರಿಗಳು, ಪ್ರಚೋದಕರು ಮತ್ತು ಕಾಲಾಳುಪಡೆಗಳಿಗೆ ಶಿಕ್ಷೆಯಾಗುವ ಲಕ್ಷಣಗಳಿನ್ನೂ ಗೋಚರಿಸುತ್ತಿಲ್ಲ. ಈ ವಿರುದ್ಧ ಬಗೆಯ ಪ್ರತಿಕ್ರಿಯೆಗಳು, ಪ್ರಕ್ರಿಯೆಗಳು ರವಾನಿಸುತ್ತಿರುವ ಸಂದೇಶ ಏನು? ಆ ಪಕ್ಷ, ಈ ಪಕ್ಷ ಎನ್ನದೆ ನಮ್ಮೆಲ್ಲಾ ನೇತಾರರು ಮತ್ತು ರಾಜಕಾರಣಿಗಳ ಪೈಕಿ ಎಷ್ಟು ಮಂದಿ ಹಿಂದುತ್ವವಾದಿ ಉಗ್ರರ ಅನೈತಿಕ ಪೊಲೀಸ್‌ಗಿರಿ; ಗೋಹತ್ಯೆ, ಅನ್ಯಜಾತೀಯರು ಮತ್ತು ಅನ್ಯಧರ್ಮೀಯರ ಮೇಲೆ ನಡೆಸಿದ ಹಲ್ಲೆ, ದೌರ್ಜನ್ಯ, ಗುಂಪುಹತ್ಯೆಗಳೇ ಮೊದಲಾದ ಅಪರಾಧಗಳನ್ನು ಭಯೋತ್ಪಾದಕ ಕೃತ್ಯಗಳೆಂದು ಕರೆಯುವ ಧೈರ್ಯ ಮಾಡಿದ್ದಾರೆ? ಪ್ರಸಕ್ತವಾಗಿ ಭಾರತದ ಪ್ರಧಾನಿಯ ಸ್ಥಾನವನ್ನು ಅಲಂಕರಿಸಿರುವ ನರೇಂದ್ರ ಮೋದಿಯವರು ಕಳೆದೈದು ವರ್ಷಗಳ ಅವಧಿಯಲ್ಲಿ ತಾರಕಕ್ಕೇರಿರುವ ಇಂತಹ ಭಯೋತ್ಪಾದಕ ಕೃತ್ಯಗಳನ್ನು ಎಂದಾದರೂ ಕಟುವಾಗಿ ಖಂಡಿಸಿದ ನಿದರ್ಶನಗಳಿವೆಯೇ? ಬಲಿಪಶುಗಳಿಗೆ ಸಂತಾಪ ವ್ಯಕ್ತಪಡಿಸದ, ತಪ್ಪಿತಸ್ಥರ ವಿರುದ್ಧ ಶೀಘ್ರವಾಗಿ ಕಠಿಣ ಕ್ರಮ ಕೈಗೊಳ್ಳದ, ಒಂದು ವಿಧದಲ್ಲಿ ಮರಳಿನಲ್ಲಿ ತಲೆ ತೂರಿಸುವ ಉಷ್ಟ್ರಪಕ್ಷಿಯ ಹಾಗಿರುವ ವರ್ತನೆಯನ್ನು ತೋರಿಸುವ ಇಂತಹ ರಾಜಕಾರಣಿಗಳಿಗೆ ತಮ್ಮ ಮಾನವೀಯ ಕರ್ತವ್ಯದ ಬಗ್ಗೆ, ದೇಶದ ಸಂವಿಧಾನದ ಬಗ್ಗೆ ಸ್ವಲ್ಪಾದರೂ ಗೌರವ ಇದೆಯೇ? ಕೇಸರಿ ಉಗ್ರರನ್ನು ನೇರವಾಗಿ ಹಾಗೆಂದು ಹೆಸರಿಸಲು, ಅವರ ವಿರುದ್ಧ ಕಠಿಣಕ್ರಮ ತೆಗೆದುಕೊಳ್ಳಲು ಹಿಂಜರಿಯುವ ಭಾರತದ ರಾಜಕಾರಣಿಗಳೆಲ್ಲರೂ ನ್ಯೂಝಿಲ್ಯಾಂಡಿನ ಪ್ರಧಾನಿ ಜಸಿಂದ ಆರ್ಡರ್ನ್‌ರಿಂದ ಕಲಿಯಬೇಕಾದುದು ಬಹಳಷ್ಟಿದೆ. ಮಾರ್ಚ್ 19ರಂದು ತನ್ನ ದೇಶದ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಆಕೆ ‘‘ನಾನೆಂದೂ ಆತನ ಹೆಸರನ್ನು ಉಚ್ಚರಿಸಲಾರೆ...... ಆತ ತನ್ನ ಭಯೋತ್ಪಾದಕ ಕೃತ್ಯದ ಮುಖಾಂತರ ಅರಸಿದ್ದ ಅನೇಕ ವಿಷಯಗಳಲ್ಲಿ ಕುಖ್ಯಾತಿ ಯೂ ಒಂದು. ಆತ ಓರ್ವ ಭಯೋತ್ಪಾದಕ. ಪಾತಕಿ. ಉಗ್ರಗಾಮಿ........ ’’ ಎಂದು ನೇರ, ದಿಟ್ಟ ವಾಕ್ಯಗಳಲ್ಲಿ ತನ್ನ ಮನಸ್ಸನ್ನು ಬಿಚ್ಚಿಡುವ ಮೂಲಕ ತಾನೋರ್ವ ಮುತ್ಸದ್ದಿ ರಾಜಕಾರಣಿ ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಿದರು. ಭಾರತ ಆರ್ಥಿಕ ಪ್ರಗತಿಯನ್ನೇನೋ ಸಾಧಿಸಬಹುದು. ಆದರೆ ಅದರ ಜೊತೆಜೊತೆಗೆ ಅದು ತನ್ನ ಧಾರ್ಮಿಕ, ಭಾಷಿಕ ಅಲ್ಪಸಂಖ್ಯಾತರು, ಜಾತೀಯತೆಯ ಬಲಿಪಶುಗಳು, ವಲಸೆಗಾರರು ಮುಂತಾದ ಸಮುದಾಯಗಳ ಅಭಿವೃದ್ಧಿಯನ್ನೂ ಸಾಧಿಸಲು ವಿಫಲವಾದರೆ ಎಲ್ಲ ಬಣ್ಣವನ್ನೂ ಮಸಿ ನುಂಗಿದಂತೆ. ಎಲ್ಲಿಯ ತನಕ ನಮ್ಮ ರಾಜಕಾರಣಿಗಳು ಮತ್ತು ಮಾಧ್ಯಮಗಳು ಕಂಡದ್ದನ್ನು ಕಂಡ ಹಾಗೆ ಹೇಳುವ ಜಾಯಮಾನವನ್ನು ಬೆಳೆಸಿಕೊಳ್ಳುವುದಿಲ್ಲವೋ ಅಲ್ಲಿಯ ತನಕ ನಮ್ಮ ದೇಶ ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹಿಂದುಳಿದ ರಾಷ್ಟ್ರವಾಗಿಯೇ ಉಳಿಯಲಿದೆ. ಎಲ್ಲಿಯ ತನಕ ನಾವು ಮಾನವೀಯತೆಯ ಗುಣಗಳಿಗೆ ಬೆಲೆ ನೀಡುವುದಿಲ್ಲವೋ, ವಿಶ್ವಭ್ರಾತೃತ್ವದಲ್ಲಿ ನಂಬಿಕೆ ಇರಿಸುವುದಿಲ್ಲವೋ ಅಲ್ಲಿಯ ತನಕ ನಾವೊಂದು ಆಧುನಿಕ, ಪ್ರಗತಿಪರ, ಪ್ರಬುದ್ಧ ಜನತಂತ್ರ ಆಗಲಾರೆವು.

ನ್ಯೂಝಿಲ್ಯಾಂಡಿನ ಲಾಂಛನದಲ್ಲಿ ನಮಾಝ್ ಮಾಡುವ ಚಿತ್ರ ಬಿಡಿಸುವ ಮೂಲಕ ಭಯೋತ್ಪಾದನಾ ಕೃತ್ಯದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿದ ಕಲಾವಿದ.

Writer - ಸುರೇಶ್ ಭಟ್ ಬಾಕ್ರಬೈಲು

contributor

Editor - ಸುರೇಶ್ ಭಟ್ ಬಾಕ್ರಬೈಲು

contributor

Similar News