ಸಿದ್ದರಾಮಯ್ಯರ ಮಾನಸಿಕತೆ ಅರ್ಥವಾಗುತ್ತಿಲ್ಲ: ಸದಾನಂದಗೌಡ
ಬೆಂಗಳೂರು, ಮಾ.30: ನಮ್ಮ ಪಕ್ಷದ ಬೆಳವಣಿಗೆಯನ್ನು ತಡೆಯಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗುವುದಿಲ್ಲ. ತಮ್ಮ ಘನತೆಗೆ ತಕ್ಕಂತೆ ಮಾತನಾಡುವುದನ್ನು ಅವರು ಕಲಿಯಬೇಕು. ಅವರ ಮಾನಸಿಕತೆಯೇ ನನಗೆ ಅರ್ಥವಾಗುತ್ತಿಲ್ಲ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ತಿರುಗೇಟು ನೀಡಿದರು.
ಬಿಜೆಪಿ ಬೆಳೆಯಲು ಬಿಡಬಾರದು ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಶನಿವಾರ ಬೆಳಗ್ಗೆ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಆರ್.ಟಿ.ನಗರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ವೇಳೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ನಮ್ಮ ಪಕ್ಷದ ಬೆಳವಣಿಗೆಯನ್ನು ತಡೆ ಹಿಡಿಯಲು ಸಿದ್ದರಾಮಯ್ಯ ಯಾರು? ಇತ್ತೀಚೆಗೆ ಯಾಕೋ ಅವರ ಹೇಳಿಕೆಗಳು ಸರಿಯಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ನಡೆದ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಜಯಗಳಿಸಿತ್ತು. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಸದಾನಂದಗೌಡ ಟೀಕಿಸಿದರು.
ಕ್ಷೇತ್ರದ ಅಭಿವೃದ್ಧಿಗೆ ಶ್ರಮ: ನಾನು ಕೇಂದ್ರ ಸಚಿವನಾಗಿ ಕ್ಷೇತ್ರದ ಅಭಿವೃದ್ಧಿಗೆ ಹಲವು ಕಾರ್ಯಗಳನ್ನು ಕೈಗೊಂಡಿದ್ದೇನೆ. ಕಳೆದ ಐದು ವರ್ಷದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನತೆ ಗುರುತಿಸಿದ್ದಾರೆ. ಎಲ್ಲಡೆಯೂ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಪುನರಾಯ್ಕೆಯಾಗುತ್ತೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಪ್ರಧಾನಿಯಾಗಿ ಕಳೆದ ಐದು ವರ್ಷದಲ್ಲಿ ಹಲವು ಜನಪರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಇನ್ನೂ ಸಾಧಿಸುವುದು ಸಾಕಷ್ಟಿದ್ದು ಅವರನ್ನು ಪುನಃ ಪ್ರಧಾನಿಯನ್ನಾಗಿ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಸದಾನಂದಗೌಡ ಮನವಿ ಮಾಡಿದರು.
ಮೊದಲೆಲ್ಲಾ ಚುನಾವಣೆಗಳು ಭರವಸೆ, ಪ್ರಣಾಳಿಕೆ ಆಧಾರದಲ್ಲಿ ನಡೆಯುತ್ತಿದ್ದವು. ಆದರೆ, ಈಗ ಮೌಲ್ಯಮಾಪನ ಮಾಡುವ ಕಾಲ ಬಂದಿದೆ. ಸ್ವತಂತ್ರ ಭಾರತದಲ್ಲಿ ಮೋದಿ ಅದ್ಭುತ ಆಡಳಿತ ನೀಡಿದ್ದಾರೆ. ವಿಶ್ವವೇ ಅವರ ನಾಯಕತ್ವವನ್ನು ಮೆಚ್ಚಿದೆ ಎಂದು ಸದಾನಂದಗೌಡ ಸಂತಸ ವ್ಯಕ್ತಪಡಿಸಿದರು.
ಕೇಂದ್ರ ಸಚಿವನಾಗಿ ರಾಜ್ಯದ ಹಲವು ಕಾರ್ಯಗಳನ್ನು ಮಾಡಿಕೊಟ್ಟಿದ್ದೇನೆ. ರಾಜ್ಯಕ್ಕೆ ಅನುದಾನ ಕೊಡಿಸುವಲ್ಲಿ ಶ್ರಮಿಸಿದ್ದೇನೆ. ಇದೆಲ್ಲವನ್ನೂ ಮತದಾರರು ಗಮನಿಸಿದ್ದು ಕಳೆದ ಬಾರಿಗಿಂತಲೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಿ.ಜೆ.ಪುಟ್ಟಸ್ವಾಮಿ, ಲೇಹರ್ ಸಿಂಗ್, ವೈ.ಎ. ನಾರಾಯಣಸ್ವಾಮಿ, ಗಣೇಶ್‌ರಾವ್ ಮಾನೆ, ಇಂದಿರಾ ಸುಭಾಷ್, ಆನಂದ್, ರವೀಂದ್ರಕುಮಾರ್, ಹರೀಶ್, ಸುರೇಶ್ ರೆಡ್ಡಿ, ಉಮೇಶ್, ರವಿಕುಮಾರ್, ನಾರಾಯಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.