ಪ್ರಜಾಕೀಯ ಪಕ್ಷಕ್ಕೆ ಅಧಿಕಾರ ಬೇಡ, ಕೆಲಸ ಕೊಡಿ: ಉಪೇಂದ್ರ

Update: 2019-03-30 15:33 GMT

ಬೆಂಗಳೂರು, ಮಾ.30: ಚುನಾವಣೆ ಮುಗಿದ ನಂತರದ ಐದು ವರ್ಷಗಳಲೂ ಪ್ರಜೆಗಳ ಧ್ವನಿಗೇ ಶಕ್ತಿಯಿರಬೇಕು. ಈ ನಿಟ್ಟಿನಲ್ಲಿ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಅಧಿಕಾರ ನೀಡದೇ ಕೆಲಸ ನೀಡಿ ಎಂದು ಪಕ್ಷದ ಮುಖ್ಯಸ್ಥ ಉಪೇಂದ್ರ ತಿಳಿಸಿದರು.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಯುಪಿಪಿ ಪಕ್ಷದ 14 ಅಭ್ಯರ್ಥಿಗಳನ್ನು ಪರಿಚಯಿಸುವ ಕಾರ್ಯಕ್ರಮದಲ್ಲಿ ಸಿನಿಮಾ ರೀತಿಯ ಸೆಟ್ ಹಾಕಿ ಅಭ್ಯರ್ಥಿಗಳ ಪರಿಚಯ ಮಾಡುವ ಮೂಲಕ ಅವರು ಮಾತನಾಡಿದರು.

ಇದೊಂದು ಸಂಪೂರ್ಣ ಬದಲಾವಣೆಯ ಪ್ರಯತ್ನ. ಕೇವಲ ಒಂದು ದಿನದ ಪ್ರಜಾಪ್ರಭುತ್ವ ಅಳಿಸಿ, ನಿರಂತರವಾಗಿ ಐದು ವರ್ಷದ ಪ್ರಜಾಪ್ರಭುತ್ವಕ್ಕಾಗಿ ಪಕ್ಷವು ದುಡಿಯಲಿದೆ. ನಾವು ನಾಯಕರೂ ಅಲ್ಲ. ಸೇವಕರೂ ಅಲ್ಲ. ನಿಮ್ಮಿಂದ ಸಂಬಳ ಪಡೆದು ಕೆಲಸ ಮಾಡುವ ಕಾರ್ಮಿಕರು. ಗೆಲ್ಲುವುದಕ್ಕಾಗಿ ಚುನಾವಣಾ ಸಂದರ್ಭದಲ್ಲಿ ಮಾತ್ರ ಬರುವವನು ರಾಜಕಾರಣಿ. ಗೆದ್ದ ನಂತರ ಪ್ರಜೆಗಳ ಸಂಪರ್ಕದಲ್ಲಿ ನಿರಂತರವಾಗಿ ಇರುವವನೇ ಪ್ರಜಾಕಾರಣಿ ಎಂದು ಹೇಳಿದರು.

ಹಣ ಬಲ, ಜನ ಬಲ, ಪಕ್ಷ ಬಲ ಇಲ್ಲದೇ ಚುನಾವಣೆಗೆ ನಿಲ್ಲುವುದಕ್ಕೆ ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ಇವರೆಲ್ಲ ಮುಂದೆ ಬಂದಿದ್ದಾರೆ. ಇವರೆಲ್ಲ ಜನರ ಅಭಿಪ್ರಾಯ ಸಂಗ್ರಹಿಸಿ ಇಲ್ಲಿಗೆ ಬಂದಿದ್ದು, ಯುಪಿಪಿ ಪಕ್ಷದ ಕದ ತಟ್ಟಿದ್ದಾರೆ. ಇವರ ರಿಪೋರ್ಟ್ ಕಾರ್ಡ್‌ಗಳನ್ನು ನೋಡಿ ಪಕ್ಷವು ಅಭ್ಯರ್ಥಿಗಳ ಆಯ್ಕೆ ಮಾಡಿದೆ. ಮಾಧ್ಯಮವೇ ನಮ್ಮ ಪಕ್ಷದ ಪ್ರಚಾರಕ. ಮುಂದಿನ ದಿನಗಳಲ್ಲಿ ಹೆಚ್ಚು ಜನರನ್ನು ಭೇಟಿ ಮಾಡುವ ಮೂಲಕ ಪಕ್ಷದ ಆಶಯಗಳನ್ನು ತಿಳಿಸುತ್ತೇನೆ ಎಂದು ನುಡಿದರು.

ನನ್ನ ಪಕ್ಷದ ಸಿದ್ಧಾಂತಗಳು ಪ್ರಜೆಗಳ ಪರವಾಗಿದ್ದು, ನನ್ನ ಸ್ನೇಹಿತರು ಹಾಗೂ ವಿವಿಧ ರಾಜಕೀಯ ಪಕ್ಷದವರೇ ಪಕ್ಷದ ಸಿದ್ಧಾಂತಗಳನ್ನು ಒಪ್ಪಿಕೊಂಡಿದ್ದಾರೆ. ಇಂಥ ಸಿದ್ಧಾಂತಗಳಿಗಾಗೇ ಇಷ್ಟೂ ದಿನ ನಾವು ಕಾದಿದ್ದು ಎಂದು ಪ್ರಜೆಗಳು ತಿಳಿಸಿದ್ದಾರೆ. ಅಲ್ಲದೆ, ಚಿತ್ರರಂಗದ ಸ್ಟಾರ್‌ಗಳು ಪಕ್ಷದ ಕೆಲಸವನ್ನು ಒಪ್ಪಿಕೊಂಡು ಬಂದು ಸಹಾಯ ಮಾಡಬಹುದು. ಆದರೆ, ಅವರೆಲ್ಲ ಸಿನೆಮಾ ಸ್ಟಾರ್‌ಗಳಷ್ಟೇ. ಪ್ರಜೆಗಳ ನಿಜವಾದ ಸ್ಟಾರ್‌ಗಳು ಯುಪಿಪಿಯ ಅಭ್ಯರ್ಥಿಗಳು ಎಂದರು.

ಉತ್ತಮ ಪ್ರಜಾಕೀಯ ಪಕ್ಷದ ವಿಚಾರವೇ ಪಕ್ಷದ ಪ್ರಚಾರ. ಹೀಗಾಗಿ, ಜನರು ಇಷ್ಟ ಪಟ್ಟರೇ ಮಾತ್ರ ನಾವು ಪ್ರಜಾ ಕೆಲಸವನ್ನು ಮಾಡುತ್ತೇವೆ. ಅಲ್ಲದೆ, ನಾನು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಿಲ್ಲ, ಈ ಚುನಾವಣೆಗೆ ಅಭ್ಯರ್ಥಿಗಳನ್ನು ತಯಾರು ಮಾಡುವ ಕೆಲಸಗಳಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಯೋಚಿಸ್ತೇನೆ ಎಂದು ತಿಳಿಸಿದರು.

ನಿಮ್ಮ ಸಮಸ್ಯೆಗಳೇನು? ನಿಮ್ಮ ಬೇಡಿಕೆಗಳೇನು? ನೀವೇ ಬರೆದು ಆದೇಶ ನೀಡಿ ಅದನ್ನು ಆಡಳಿತ ವರ್ಗದ ಮುಂದಿಟ್ಟು ಚರ್ಚಿಸಿ ಸಿದ್ಧಪಡಿಸಿದ ಹಲವು ಯೋಜನೆಗಳನ್ನು ನಿಮ್ಮ ಮುಂದಿಡುತ್ತೇವೆ. ಯೋಜನೆಗಳ ನಿರ್ಧಾರವನ್ನೂ ನೀವೇ ಮಾಡಬೇಕು. ನಂತರ ಯೋಜನೆಯ ಸಂಪೂರ್ಣ ಪಾರದರ್ಶಕ ವರದಿಯನ್ನು ನಿಮ್ಮ ಮುಂದೆ ಇಡಲಾಗುತ್ತದೆ ಹಾಗೂ ಅಭ್ಯರ್ಥಿಗಳ ಅರ್ಹತೆ ಹಾಗೂ ಅನರ್ಹತೆಗಳ ತೀರ್ಫುನ್ನೂ ನೀವೇ ನೀಡಿ ಎಂದರು.

ಬೇರೆ ಪಕ್ಷಗಳು ಕೊಟ್ಟ ಭರವಸೆಗಳು ಏನಾಗಿವೆ ಎಂಬುದು ಗೊತ್ತಿದೆ. ಅದನ್ನು ಜನರು ಅರಿತುಕೊಂಡರೆ ಸಾಕು. ದುಂದುವೆಚ್ಚ ಮಾಡಿ ರಾಜಕೀಯ ಮಾಡುವ ಉದ್ದೇಶವಿಲ್ಲ. ಜನರು ಬದಲಾವಣೆ ಬಯಸುತ್ತಿದ್ದಾರೆ. ಕಾರ್ಮಿಕರನ್ನು (ನಮ್ಮನ್ನು) ಗೆಲ್ಲಿಸಿದರೆ ಉತ್ತಮ ಆಡಳಿತ ನೀಡುತ್ತೇವೆ. ಯಾವುದೇ ಸಭೆ, ಸಮಾರಂಭಗಳನ್ನು ಆಯೋಜಿಸುವುದಿಲ್ಲ. ಮಾಧ್ಯಮ, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಕೈಗೊಳ್ಳುತ್ತೇವೆ ಎಂದರು.

ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್ ಪಕ್ಷಗಳ ಪ್ರಣಾಳಿಕೆ ನೋಂದಾಯಿಸಿಕೊಳ್ಳಬೇಕು. ಪ್ರಣಾಳಿಕೆಯಲ್ಲಿನ ಅಂಶಗಳನ್ನು ರಾಜಕೀಯ ಪಕ್ಷಗಳು ಈಡೇರಿಸದೇ ಹೋದರೆ ಸುಪ್ರೀಂ ಕೋರ್ಟ್ ಅಂತಹ ಪಕ್ಷವನ್ನೇ ಅನರ್ಹಗೊಳಿಸಬೇಕು ಅಥವಾ ರಾಜೀನಾಮೆ ಕೊಡುವ ವ್ಯವಸ್ಥೆ ಜಾರಿಯಾಗಬೇಕು.

-ಉಪೇಂದ್ರ, ಉತ್ತಮ ಪ್ರಜಾಕೀಯ ಪಕ್ಷ ಮುಖ್ಯಸ್ಥ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News