ಕಾವಲುಗಾರನ ಕೊಲೆ ಪ್ರಕರಣ: ಗುಂಡಿಕ್ಕಿ ಆರೋಪಿಯ ಬಂಧನ
ಬೆಂಗಳೂರು, ಮಾ.30: ಬ್ಯಾಂಕಿನ ಎಟಿಎಂ ಕಾವಲುಗಾರನ ಕೊಲೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪಿಸ್ತೂಲಿನಿಂದ ಗುಂಡು ಹಾರಿಸಿ ಇಲ್ಲಿನ ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬನ್ನೇರುಘಟ್ಟ ರಸ್ತೆಯ ಸಿ.ಕೆ.ಪಾಳ್ಯ ನಿವಾಸಿ ರಾಜೇಂದ್ರ(28) ಗುಂಡೇಟಿನಿಂದ ಗಾಯಗೊಂಡಿರುವ ಕೊಲೆ ಆರೋಪಿ ಎಂದು ತಿಳಿದುಬಂದಿದೆ.
ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾ.24ರ ಬೆಳಗಿನ ಜಾವ ಕರ್ನಾಟಕ ಬ್ಯಾಂಕ್ ಎಟಿಎಂ ಕಾವಲುಗಾರ ಲಿಂಗಪ್ಪಎಂಬಾತನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ. ಈತ ಮಾದಕ ವ್ಯಸನಿಯಾಗಿದ್ದು, ಹಣಕ್ಕಾಗಿ ಕೊಲೆಮಾಡಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕೊಲೆ ಮಾಡಿದ ನಂತರ ರಾಜೇಂದ್ರ ಗಾಂಜಾಕ್ಕಾಗಿ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ಈ ಸಂಬಂಧ ಸುಬ್ರಹ್ಮಣ್ಯಪುರ ಉಪವಿಭಾಗದ ಎಸಿಪಿ ಮಹದೇವ ಅವರ ಮಾರ್ಗದರ್ಶನದಲ್ಲಿ ಕುಮಾರಸ್ವಾಮಿ ಲೇಔಟ್ ಠಾಣೆ ಇನ್ಸ್‌ಪೆಕ್ಟರ್ ಹಜರೀಶ್ ಕಿಲ್ಲಾದರ್, ತಲಘಟ್ಟಪುರ ಠಾಣೆಯ ಪಿಎಸ್ಸೈ ಶಿವಕುಮಾರ್, ಕೋಣನಕುಂಟೆ ಠಾಣೆಯ ಪಿಎಸ್ಸೈ ಶ್ರೀನಿವಾಸ್ ಪ್ರಸಾದ್ ಅವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.
ಕೋಣನಕುಂಟೆ ಡಬಲ್ ರಸ್ತೆ ಬಳಿ ಆರೋಪಿ ರಾಜೇಂದ್ರ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು, ಶನಿವಾರ ಮುಂಜಾನೆ 4:30ರ ಸುಮಾರಿಗೆ ಅಲ್ಲಿಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರ ಮೇಲೆ ಕಲ್ಲಿನಿಂದ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿ ರಾಜೇಂದ್ರನನ್ನು ಶರಣಾಗುವಂತೆ ಇನ್ಸ್‌ಪೆಕ್ಟರ್ ಹಜರೀಶ್ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದರು.
ಆದರೂ ಆರೋಪಿ ಪೊಲೀಸರ ಮೇಲೆ ಕಲ್ಲಿನ ದಾಳಿ ಮುಂದುವರೆಸಿದಾಗ ಆತ್ಮರಕ್ಷಣೆಗಾಗಿ ಹಜರೀಶ್ ಹಾರಿಸಿದ ಎರಡು ಗುಂಡುಗಳು ರಾಜೇಂದ್ರನ ಕಾಲುಗಳಿಗೆ ತಗುಲಿ ಕುಸಿದು ಬಿದ್ದ. ತಕ್ಷಣ ಸುತ್ತುವರಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.