ಕುಟುಂಬ ರಾಜಕಾರಣವನ್ನು ತಿರಸ್ಕರಿಸಿ, ಜೆಡಿಎಸ್ ಮುಕ್ತ ರಾಜ್ಯವನ್ನಾಗಿ ಪರಿವರ್ತಿಸಿ: ದಸಂಒ ಕರೆ

Update: 2019-03-30 16:41 GMT
ಮಾವಳ್ಳಿ ಶಂಕರ್

ಬೆಂಗಳೂರು, ಮಾ.30: ಕುಟುಂಬ ರಾಜಕೀಯ ಹಿನ್ನೆಲೆಯುಳ್ಳ ಎಚ್.ಡಿ ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳ ಪಕ್ಷವನ್ನು ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರು ತಿರಸ್ಕರಿಸುವ ಮೂಲಕ ಕರ್ನಾಟಕವನ್ನು ಜೆಡಿಎಸ್ ಮುಕ್ತ ರಾಜ್ಯವನ್ನಾಗಿ ಪರಿವರ್ತಿಸಬೇಕೆಂದು ದಲಿತ ಸಂಘಟನೆಗಳ ಒಕ್ಕೂಟ ಕರೆ ನೀಡಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಮಾವಳ್ಳಿ ಶಂಕರ್, ಸ್ವಜಾತಿ ಪ್ರೇಮಿ ಕುಟುಂಬ ರಾಜಕಾರಣದಲ್ಲಿ ಕುಖ್ಯಾತಿ ಪಡೆದಿರುವ ಎಚ್.ಡಿ.ದೇವೇಗೌಡರು ಪ್ರಧಾನ ಮಂತ್ರಿಯಾಗುತ್ತಿದ್ದಂತೆ ಐ.ಎ.ಎಸ್ ನೇಮಕಾತಿಯಲ್ಲಿ ಎಸ್ಸಿ-ಎಸ್ಟಿಗೆ ನೀಡುತ್ತಿದ್ದ ಶೇ.15ರಷ್ಟು ಕೃಪಾಂಕವನ್ನು ರದ್ದುಗೊಳಿಸಿದರು. ಹೀಗೆ ಕಳೆದ 40 ವರ್ಷಗಳಿಂದ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸಿಕೊಂಡು ಬರುತ್ತಿರುವ ಇವರ ಕುಟುಂಬದ ಸದಸ್ಯರಿಗೆ ರಾಜ್ಯದ ಎಸ್ಸಿ-ಎಸ್ಟಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತರು ತಮ್ಮ ಮತಗಳನ್ನು ಜೆಡಿಎಸ್ ಪಕ್ಷಕ್ಕೆ ನಿರಾಕರಣೆ ಮಾಡುವ ಮೂಲಕ ಕರ್ನಾಟಕ ಮುಕ್ತ ಜೆಡಿಎಸ್ ರಾಜ್ಯವನ್ನಾಗಿ ಪರಿವರ್ತಿಸಬೇಕೆಂದು ಮನವಿ ಮಾಡಿದರು.

ಭಡ್ತಿ ಮೀಸಲಾತಿ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದು, ಜೂನ್ 2018 ರಲ್ಲಿ ಗೆಜೆಟ್‌ನಲ್ಲಿ ಪ್ರಕಟಗೊಂಡಿದೆ. ಆದರೆ, ಅನುಷ್ಠಾನ ಮಾಡದೇ ತಡೆಹಿಡಿದಿದ್ದಾರೆ. ಸರಕಾರಿ ಅನುದಾನಿತ ಖಾಸಗಿ ಸಂಸ್ಥೆಗಳ ಹುದ್ದೆಗಳನ್ನು ಪರಿಶಿಷ್ಟರಿಗೆ ತಪ್ಪಿಸಲಾಗುತ್ತಿದೆ. ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಎಸ್ಸಿ-ಎಸ್ಟಿಗಳನ್ನು ಹೊರತಾಗಿ 500 ಜನರಲ್ಲಿ 498 ಜನರನ್ನು ತನ್ನ ಸ್ವಜಾತಿಯವರನ್ನೇ ನೇಮಿಸಿಕೊಂಡು ಅನ್ಯ ಸಮುದಾಯವನ್ನು ವಂಚಿಸಲಾಗುತ್ತಿದೆ. ಅಲ್ಲದೆ, ತನ್ನ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಲೋಕೋಪಯೋಗಿ ಖಾತೆಯನ್ನು ಕುಟುಂಬದ ಆಸ್ತಿಯಂತೆ ಬಳಸಿಕೊಂಡು ಹಣವನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.

ಮೊಮ್ಮಕ್ಕಳನ್ನು ಸೋಲಿಸುವುದೇ ಗುರಿ

ಮಂಡ್ಯ ಲೋಕಸಭಾ ಕ್ಷೇತ್ರದಿಂದ ದೇವೇಗೌಡ ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಹಾಗೂ ಹಾಸನ ಲೋಕಸಭಾ ಕ್ಷೇತ್ರದಿಂದ ಮತ್ತೊಬ್ಬ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು ಅವರನ್ನು ಸೋಲಿಸುವುದೇ ದಲಿತ ಸಂಘಟನೆಗಳ ಗುರಿಯಾಗಿದೆ. ಆದ್ದರಿಂದ ದಲಿತರು, ಅಲ್ಪಸಂಖ್ಯಾಂತರು ಮತ್ತು ಹಿಂದುಳಿದವರು ಯಾವುದೇ ಕಾರಣಕ್ಕೂ ದೇವೇಗೌಡರ ಕುಟುಂಬಕ್ಕೆ ಮತ ನೀಡಬಾರದು.

-ಮಾವಳ್ಳಿ ಶಂಕರ್, ದಲಿತ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News