×
Ad

ಪ್ರಜಾಪ್ರಭುತ್ವ ಉಳಿಸಬೇಕಾದ ದುರಂತದ ಅಂಚಿನಲ್ಲಿದ್ದೇವೆ: ಪ್ರಶಾಂತ್ ಭೂಷಣ್

Update: 2019-03-30 22:19 IST

ಬೆಂಗಳೂರು, ಮಾ.30: ದೇಶವು ಒಂದು ಫ್ಯಾಶಿಸ್ಟ್ ರಾಜ್ಯವಾಗಿ ಬದಲಾಗುವ ಅಪಾಯವಿದ್ದು, ಪ್ರಜಾಪ್ರಭುತ್ವ ಮತ್ತು ಬಹುತ್ವವನ್ನು ಉಳಿಸಬೇಕಾದ ದುರಂತದ ಅಂಚಿನಲ್ಲಿ ನಾವಿದ್ದೇವೆ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ, ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಎಚ್ಚರಿಕೆ ನೀಡಿದರು.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುತ್ವವನ್ನು ದ್ವೇಷಿಸುವ ಸರಕಾರ ತೊಲಗಬೇಕು. ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಮತ್ತು ನೀತಿಯನ್ನು ಸುಧಾರಿಸುವ ಕಡೆಗೆ ಹೆಚ್ಚಿನ ಗಮನಹರಿಸಬೇಕು ಹಾಗೂ ಪ್ರಜಾಪ್ರಭುತ್ವವನ್ನು ಪುನರ್ ಪಡೆದುಕೊಳ್ಳಲು ಪ್ರಜೆಗಳು ಒಗ್ಗೂಡಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಚುನಾವಣೆ ನಡೆಯಬೇಕಾದರೆ ಹೆಚ್ಚು ಹಣವನ್ನು ಖರ್ಚು ಮಾಡಲೇಬೇಕು ಎಂಬ ಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೆ, ಯಾವುದೇ ರಾಜಕೀಯ ಪಕ್ಷಗಳು ಇದಕ್ಕೆ ಹೊರತಾಗಿಲ್ಲ. ಈ ಬಾರಿಯ ಚುನಾವಣೆಯಲ್ಲಿ 1 ಲಕ್ಷ ಕೋಟಿ ರೂ.ಖರ್ಚಾಗಲಿದೆ ಎಂದು ಅಂದಾಜಿಸಲಾಗಿದ್ದು, ಶೇ.90ರಷ್ಟು ಹಣವನ್ನು ಬಿಜೆಪಿಯೇ ಖರ್ಚು ಮಾಡುವ ಸಾಧ್ಯತೆಯಿದೆ ಎಂದು ಅವರು ಆರೋಪಿಸಿದರು.

ಉತ್ತಮ ಅಭ್ಯರ್ಥಿಗಳಿಗೆ ಜನ ಮತದಾನ ಮಾಡಲು ಹಿಂದೇಟು ಹಾಕುತ್ತಿರುವ ಕಾರಣಕ್ಕಾಗಿ ದೇಶದಲ್ಲಿ ಒಳ್ಳೆಯ ಅಭ್ಯರ್ಥಿಗಳು ಚುನಾವಣೆಗೆ ನಿಲ್ಲಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿಯೂ ಪ್ರಕಾಶ್ ರಾಜ್ ಸ್ವತಂತ್ರ ಅಭ್ಯರ್ಥಿಯಾಗಿ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇಂತಹ ಪ್ರಜಾಧ್ವನಿಯ ಪ್ರತಿನಿಧಿಗಳನ್ನು ನಾವು ಆಯ್ಕೆ ಮಾಡಬೇಕು ಎಂದು ಪ್ರಶಾಂತ್ ಭೂಷಣ್ ಕರೆ ನೀಡಿದರು.

ದೇಶದ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ ಪ್ರಾಚೀನ ಕಾಲದಲ್ಲೇ ಗಣೇಶನಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಮಹಾಭಾರತದ ಕರ್ಣ ಪ್ರಣಾಳ ಶಿಶುವಾಗಿದ್ದ ಎಂಬ ಅವೈಜ್ಞಾನಿಕವಾದ ವಿಚಾರಗಳನ್ನು ಜನರಿಗೆ ತಿಳಿಸುತ್ತಾ ಜನರನ್ನು ಮೌಢ್ಯರನ್ನಾಗಿ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಶೇ.42ರಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದು, ಕಳೆದ 20 ವರ್ಷದಲ್ಲಿ ಮೂರು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ, ದೇಶದ ಶೇ.65ರಷ್ಟು ಸಂಪತ್ತು ಕೇವಲ ‘ಒಂಭತ್ತು ಅತೀ ಶ್ರೀಮಂತ’ ವ್ಯಕ್ತಿಗಳ ಬಳಿಯಿದೆ ಅವರು ವಿಷಾದ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತ ಪ್ರೊ.ಬಾಬು ಮ್ಯಾಥ್ಯು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್, ಸ್ವರಾಜ್, ಸ್ವರಾಜ್ ಅಭಿಯಾನ ಕರ್ನಾಟಕದ ಅಧ್ಯಕ್ಷ ಪ್ರೊ.ಯತಿರಾಜ್, ಕಾರ್ಯದರ್ಶಿ ಮನೋಹರ್ ಇಲಾವರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಸ್ವರಾಜ್ ಪಕ್ಷದ ಪ್ರಣಾಳಿಕೆ

* ಸಾರ್ವಜನಿಕ ಜವಾಬ್ದಾರಿ ಮತ್ತು ಪಾಲ್ಗೊಳ್ಳುವಿಕೆ.

* ನ್ಯಾಯಾಂಗ ಸುಧಾರಣೆ.

* ಚುನಾವಣಾ ಸುಧಾರಣೆ.

* ಮಾಧ್ಯಮ ಸುಧಾರಣೆ.

* ಸಾಮಾಜಿಕ ಭದ್ರತೆ.

* ಆರೋಗ್ಯ ಸುಧಾರಣೆ.

* ಶಿಕ್ಷಣದ ಹೊಸ ಆಲೋಚನೆ.

* ವ್ಯವಸಾಯದಲ್ಲಿ ಆದಾಯ.

* ಪರಿಸರ ಕಾಳಜಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News