ಬಿಎಸ್ಪಿ ಕಾರ್ಯಕರ್ತರ ಸಭೆ: ಸಮಸ್ಯೆ ಬಗೆಹರಿಸುವ ನಾಯಕ ಬೇಕು- ಡಾ.ಸಿ.ಎಸ್.ದ್ವಾರಕಾನಾಥ್
ಬೆಂಗಳೂರು, ಮಾ.30: ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ಅನೇಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ ಮತದಾರರ ಮೇಲಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಡಾ.ಸಿ.ಎಸ್.ದ್ವಾರಕಾನಾಥ್ ಹೇಳಿದರು.
ಶನಿವಾರ ನಗರದ ಯಲಹಂಕ ವಿಧಾನಸಭಾ ಕ್ಷೇತ್ರದ ಗೋಪಾಲ್‌ಪುರ ಗ್ರಾಮದಲ್ಲಿ ಬಿಎಸ್ಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕೆ ಈ ಬಾರಿ ಬಿಎಸ್ಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ತಮ್ಮನ್ನು ಬೆಂಬಲಿಸಬೇಕು ಎಂದರು.
ಈ ಕ್ಷೇತ್ರಕ್ಕೆ ಶಾಶ್ವತ ನೀರಾವರಿ ಸೌಲಭ್ಯ ಸಿಗಬೇಕು. ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರೆಯಬೇಕು. ಈ ನಿಟ್ಟಿನಲ್ಲಿ ಬಿಎಸ್ಪಿ ಕಾರ್ಯಕರ್ತರು ಪ್ರತಿ ಬೂತ್‌ನಲ್ಲೂ ಪಕ್ಷವನ್ನು ಬೇರು ಮಟ್ಟದಲ್ಲಿ ಬಲಿಷ್ಠಗೊಳಿಸಬೇಕು ಎಂದು ತಿಳಿಸಿದರು.
ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಮಾತನಾಡಿ, ಬಿಎಸ್ಪಿ ಕಾರ್ಯಕರ್ತರು ಪಕ್ಷದ ಇತಿಹಾಸ ಮತ್ತು ನಾಯಕರ ಕೊಡುಗೆಗಳನ್ನು ತಿಳಿದು ಕೊಳ್ಳಬೇಕು. ಕಾನ್ಶಿರಾಮ್ ಅವರು ನಾಲ್ಕು ಸಾವಿರ ಮೀಟರ್ ದೂರ ಸೈಕಲ್‌ನಲ್ಲಿ ತೆರಳಿ ಗ್ರಾಮ ಗ್ರಾಮಗಳಲ್ಲಿ ಮತದಾನದ ಮಹತ್ವದ ಅರಿವು ಮೂಡಿಸಿದ್ದರು ಎಂದು ಹೇಳಿದರು.
ಡಾ. ಬಿ.ಆರ್.ಅಂಬೇಡ್ಕರ್ ನಿಮಗೆ ಮತದಾನದ ಹಕ್ಕು ನೀಡಿದ್ದಾರೆ. ಮತದಾನದ ಹಕ್ಕು ಪವಿತ್ರವಾಗಿದೆ. ಮತದಾನದಿಂದ ಇಡೀ ಸಮಾಜದ ಬದಲಾವಣೆ ಸಾಧ್ಯ ಎಂಬುದು ಅವರ ವಾದವಾಗಿತ್ತು ಎಂದು ನುಡಿದರು.
ಸಭೆಯಲ್ಲಿ ಬಿಎಸ್ಪಿ ಮುಖಂಡರಾದ ಈರಣ್ಣ, ಸಂದೀಪ್ ಮಾರಸಂದ್ರ, ಮುನಿಯಪ್ಪ, ಮಹೇಂದ್ರ, ನಟರಾಜ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.