ಅಡಿಗರ ನೆನಪಿನಲ್ಲಿ ಪ್ರೀತಿಯ ಬಾಗಿನ

Update: 2019-03-30 18:32 GMT

ಇತ್ತೀಚೆಗೆ ಬೈಂದೂರು ತಾಲೂಕು ರಚನೆಯಾದ ಬೆನ್ನಲ್ಲೇ ತಾಲೂಕಿನ ಕಂಬದ ಕೋಣೆ ಗ್ರಾಮದಲ್ಲಿ ಬೈಂದೂರಿನ ಪ್ರಥಮ ತಾಲೂಕು ಕಸಾಪ ಸಮ್ಮೇಳನ ನಡೆದು ಅಲ್ಲಿ ಒಂದು ಹಬ್ಬದ ವಾತಾವರಣ ಉಂಟು ಮಾಡಿತು. ಜನಾನುರಾಗಿ ಸಮಾಜ ಸೇವಕ, ಶಿಕ್ಷಣವೇತ್ತ ಸಮರ್ಥ ಆಡಳಿತಗಾರ ಇತ್ಯಾದಿ ಅನೇಕ ವಿಶೇಷಣಗಳನ್ನು ಬೆನ್ನಿಗಂಟಿಸಿಕೊಂಡ ಶ್ರೀಯುತ ಜನಾರ್ದನ ಮರವಂತೆಯವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿದ್ದು ಒಂದು ಸೂಕ್ತ ಆಯ್ಕೆ. ತಾಲೂಕಿಗೆ ಸಂಬಂಧಪಟ್ಟಂತೆ ಎಲ್ಲಾ ವಿಚಾರಗಳನ್ನು ಮುನ್ನೆಲೆಗೆ ತಂದ ಅವರ ಅಧ್ಯಕ್ಷ ಭಾಷಣದಲ್ಲಿ ಕೇಂದ್ರೀಕೃತವಾದ ವಿಚಾರ ಮುಖ್ಯವಾಗಿ ಅಡಿಗರ ಜನ್ಮಸ್ಥಳವಾದ ಮೊಗೇರಿ ಗ್ರಾಮದಲ್ಲಿ ಅಡಿಗರಿಗೊಂದು ಶಾಶ್ವತ ಸ್ಮಾರಕ ನಿರ್ಮಿಸುವ ಕುರಿತಾಗಿ ಎಂಬುದು ಎಲ್ಲರ ಗಮನ ಸೆಳೆಯಿತು. ಕುಪ್ಪಳ್ಳಿಯಲ್ಲಿ ಕುವೆಂಪು, ಧಾರವಾಡ ದಲ್ಲಿ ಬೇಂದ್ರೆ, ಕೋಟದಲ್ಲಿ ಶಿವರಾಮ ಕಾರಂತರಿಗೆ ಸ್ಮಾರಕಗಳಿರು ವಂತೆ ಮೊಗೇರಿಯಲ್ಲಿ ಅಡಿಗರಿಗೆ ಇದುವರೆಗೆ ಸ್ಮಾರಕ ನಿರ್ಮಾಣ ವಾಗ ದಿರುವ ಕುರಿತಾದ ವಿಷಾದವೂ ಅವರ ಮಾತುಗಳಲ್ಲಿ ವ್ಯಕ್ತ ವಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಅಡಿಗರ ಸಾಧನೆ ಕಡಿಮೆಯದಲ್ಲ.

ಅಡಿಗರು ಜ್ಞಾನಪೀಠ ಪುರಸ್ಕೃತರಲ್ಲ ಎಂಬುದು ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆಯನ್ನು ಅಳೆಯುವ ಮಾನದಂಡವಾಗಲಾರದು.ಕಾವ್ಯ, ಕಾದಂಬರಿ, ಪ್ರಬಂಧ, ವಿಚಾರ ಸಾಹಿತ್ಯ, ಅನುವಾದ ಹೀಗೆ ಅವರ ಸಾಹಿತ್ಯ ಸಾಧನೆಯ ಹರವು ವಿಶಾಲವಾಗಿದೆ. ಸಾಹಿತ್ಯ ವಲಯದಲ್ಲಿ ಪ್ರಮುಖವಾಗಿ ಗುರುತಿಸಲ್ಪಡುವ ಅಡಿಗರು ಸಮಾಜದ ನ್ಯೂನತೆಗಳ ಮೇಲೆ ಕ್ಷಕಿರಣ ಬೀರುವಂಥ ಹೊಸ ಕಾವ್ಯ ಪರಂಪರೆಯನ್ನು ಸೃಷ್ಟಿಸಿ ಒಂದು ವರ್ಗದ ಜನರ ಕಣ್ಣು ತೆರೆಯಿಸಿದ ಕವಿ ಎಂದು ಮುಖ್ಯವಾಗಿ ಗುರುತಿಸಲ್ಪಡುತ್ತಾರೆ. ಭಾವಗೀತೆ ಗಳನ್ನು ಬರೆದಂತೆ ಅಡಿಗರು ನವ್ಯ ಕವಿತೆಗಳನ್ನೂ ಬರೆದರು. ಭಾವ ತರಂಗ, ನಡೆದು ಬಂದ ದಾರಿ, ಚಂಡೆಮದ್ದಳೆ, ಭೂಮಿಗೀತೆ ವರ್ಧಮಾನ, ರಾಮನವಮಿ, ಚಿಂತಾಮಣಿಯಲ್ಲಿ ಕಂಡ ಮುಖ, ಕಟ್ಟುವೆವು ನಾವು ಹೀಗೆ ಇನ್ನೂ ಹಲವು ಕವನ ಸಂಕಲನಗಳನ್ನು ಅವರು ಹೊರ ತಂದರು. ಸಮಾಜವಾದದ ನೆಲೆಯಲ್ಲಿ ಮನುಷ್ಯರ ನಡುವಿನ ಮೇಲು ಕೀಳು ಎಂಬಂಥ ಅಡ್ಡಗೋಡೆಗಳನ್ನು ಕೆಡವದೆ ಸಮಾನತೆಯನ್ನು ಸಾರುವ ಇವರ ‘ಕಟ್ಟುವೆವು ನಾವು’ ಕವಿತೆ ಹಕ್ಕಿಗಾಗಿ ಹೋರಾಟ ನಡೆಸುವವರ ನಾಲಗೆಗಳಲ್ಲಿ ಇನ್ನೂ ಹರಿದಾಡುತ್ತಿದೆ. ಮಣ್ಣಿನ ವಾಸನೆ, ಕನ್ನಡದ ಅಭಿಮಾನ, ವಿಚಾರ ಪಥ, ನಮ್ಮ ಶಿಕ್ಷಣ ಕ್ಷೇತ್ರ ಪ್ರಬಂಧಗಳು ಇವರ ವೈಚಾರಿಕ ಹಾಗೂ ವಿಮರ್ಶಾತ್ಮಕ ಲೇಖನಗಳ ಸಂಗ್ರಹಗಳಾದರೆ ಹುಲ್ಲಿನ ದಳಗಳು, ಸುವರ್ಣ ಕಿರೀಟ, ಭೂಗರ್ಭ ಯಾತ್ರೆ, ರೈತರ ಹುಡುಗಿ ಮುಂತಾದವುಗಳು ಇವರ ಅನುವಾದಿತ ಕೃತಿಗಳು. ಆಕಾಶದೀಪ ಮತ್ತು ಅನಾಥೆ ಇವರ ಸ್ವತಂತ್ರ ಕಾದಂಬರಿಗಳು.

ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಅಡಿಗರು ಸ್ವಲ್ಪ ಸಮಯ ಬೆಂಗಳೂರಿನ ಅಠಾರಾ ಕಚೇರಿಯಲ್ಲಿ ಗುಮಾಸ್ತರಾಗಿದ್ದರು. ಆನಂತರ ಎಂ.ಎ. ಮಾಡಿ ಕುಮಟಾದ ಕೆನರಾ ಕಾಲೇಜು, ಮೈಸೂರಿನ ಸೈಂಟ್ ಫಿಲೊಮಿನಾ ಕಾಲೇಜು, ಸಾಗರದ ಲಾಲ ಬಹುದ್ದೂರ್ ಕಾಲೇಜು ನಂತರ ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಇಲ್ಲಿಯೇ ನಿವೃತ್ತಿ ಪಡೆದರು. ಸಿಮ್ಲಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್ ಎಂಬ ಸಂಸ್ಥೆಯಲ್ಲಿ ಕೆಲ ಕಾಲ ರೀಸರ್ಚ್ ಫೆಲೋ ಆಗಿ ದುಡಿದು ನಂತರ ಬೆಂಗಳೂರು ಸೇರಿದ ಅವರು ಜೀವಿತದ ಕೊನೆಗಾಲದವರೆಗೂ ಅಲ್ಲೇ ಕಳೆದರು. ಇವರ ವರ್ಧಮಾನ ಕೃತಿಗೆ 1973ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಹಾಗೂ 1974ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳು ದೊರಕಿವೆ. ಆನಂತರ ಇವರಿಗೆ ಕುಮಾರ್ ಆಶಾನ್ ಹಾಗೂ ಕಬೀರ ಸಮ್ಮಾನ ಪ್ರಶಸ್ತಿಗಳು ಸಂದಿವೆ. ಕಬೀರ ಸಮ್ಮಾನ ಪಡೆದ ಮೊದಲ ಕನ್ನಡಿಗ ಇವರು ಎಂಬ ಹೆಮ್ಮೆ ನಮ್ಮೆಲ್ಲರದು. 1995ರಲ್ಲಿ ಮರಣೋತ್ತರ ಪಂಪ ಪ್ರಶಸ್ತಿಯೂ ಇವರಿಗೆ ದಕ್ಕಿತು. 1979ರಲ್ಲಿ ಧರ್ಮಸ್ಥಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಅವರದಾಯಿತು. ಇಂಥ ಧೀಮಂತ ಸಾಹಿತ್ಯ ಸಾಧಕನ ಹೆಸರಲ್ಲಿ ಒಂದು ಸೂಕ್ತ ಸ್ಮಾರಕ ಇನ್ನೂ ನಿರ್ಮಾಣವಾಗದಿರುವುದು ಕನ್ನಡಿಗರ ಕರ್ತವ್ಯ ಲೋಪವೆಂದೇ ಹೇಳಬೇಕು. ಕಾರಂತರ ಸ್ಮಾರಕದ ಹಿಂದೆ ಅಲ್ಲಿನ ಗ್ರಾಮ ಪಂಚಾಯತ್ ಹಾಗೂ ಕಾರಂತರ ಅಭಿಮಾನಿ ಶಾಸಕ ಕೋಟ ಶ್ರೀನಿವಾಸ ಪೂಜಾರಿ ಗಟ್ಟಿಯಾಗಿ ನಿಂತರು. ಹಾಗೆಯೇ ಅಡಿಗರ ಸ್ಮಾರಕ ನಿರ್ಮಾಣದ ಹಿಂದೆ ಕೆಲವು ಸ್ಥಳೀಯ ಸಮಾನ ಮನಸ್ಕರ ಜತೆ ಗ್ರಾಮ ಪಂಚಾಯತ್ ಹಾಗೂ ಮಾಜಿ ಶಾಸಕ ಕೆ.ಗೋಪಾಲ ಭಂಡಾರಿ ಹಾಗೂ ಪ್ರಸಕ್ತ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಇವರೆಲ್ಲ ಇದ್ದಾರೆ ಎಂಬುದು ಸ್ಮಾರಕ ನಿರ್ಮಾಣದ ಮೊದಲ ಹೆಜ್ಜೆ ಇಟ್ಟಂತಾಗಿದೆ. ಇವರೆಲ್ಲ ಮುಂದೆ ಬಂದರೆ ಸ್ಮಾರಕ ನಿರ್ಮಾಣ ಸದ್ಯವೇ ಆಗುತ್ತದೆ ಎಂಬ ಆಶಾವಾದ ಎಲ್ಲರದು.

ಈ ಲೇಖನವನ್ನು ಮುಗಿಸುವ ಮುನ್ನ ಅಡಿಗರ ಕುರಿತಾದ ನನ್ನ ಎರಡು ವೈಯಕ್ತಿಕ ನೆನಪುಗಳನ್ನು ಇಲ್ಲಿ ದಾಖಲಿಸಬೇಕು. ಹೈಸ್ಕೂಲು ಶಿಕ್ಷಣ ಮುಗಿಸಿ ಉದ್ಯೋಗದ ನೆಪದಲ್ಲಿ ನಾನು ಬೆಂಗಳೂರು ಸೇರಿದ ಪ್ರಾರಂಭದ ದಿನಗಳು. ಆಗ ಒಂದು ದಿನ ನನ್ನ ಸ್ನೇಹಿತೆ ಜಯನಗರದಲ್ಲಿನ ಡಾ. ಸಾವಿತ್ರಿಯ ಮನೆಗೆ ಹೋಗಿದ್ದೆ. ಆಗ ಅವರ ಮನೆಯ ವರಾಂಡದಲ್ಲಿ ಆಕೆಯ ಅಣ್ಣ ಹೆಸರಾಂತ ವಕೀಲ ಸ್ಥಳೀಯ ರಾಜಕೀಯ ನೇತಾರ ಕೃಷ್ಣಯ್ಯನವರು ಒಂದಿಷ್ಟು ಮಂದಿ ಸ್ನೇಹಿತರ ಜತೆ ಸೇರಿ ಚರ್ಚೆಯಲ್ಲಿ ತೊಡಗಿದ್ದರು. ಚರ್ಚೆಯ ವಿಚಾರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಡಿಗರು ಸ್ಪರ್ಧಿಸುವ ಕುರಿತಾಗಿ ಇತ್ತು. ಕೃಷ್ಣಯ್ಯನವರು ನನ್ನನ್ನು ಕರಾವಳಿಯವಳೆಂದು ಹೇಳಿ ಅಡಿಗರಿಗೆ ಪರಿಚಯಿಸಿದಾಗ ಅಡಿಗರು ಖುಷಿ ಪಟ್ಟಿದ್ದರು. ಮುಂದೆ ಅಡಿಗರು ಸ್ಪರ್ಧಿಸಿದಾಗ ನಾವೆಲ್ಲ ಮನೆ ಮನೆಗೆ ಮತಯಾಚನೆಗೆ ಹೋಗಿದ್ದೆವು. ಆದರೆ ಅಡಿಗರು ಸೋತರು. ಇದು ನಮಗೆಲ್ಲ ತುಂಬಾ ನಿರಾಸೆಯುಂಟು ಮಾಡಿದ ವಿಚಾರ. ಈ ಘಟನೆಯ ನಂತರ ಅಡಿಗರೊಡನೆ ನಾನು ಮುಖಾಮುಖಿಯಾದದ್ದು 1982ರಲ್ಲಿ. ಬೆಂಗಳೂರಿನ ಅಂಚೆ ಮತ್ತು ತಂತಿ ಇಲಾಖೆಯವರು ಸೇರಿ ಸ್ವಲ್ಪ ಅದ್ದೂರಿ ಎನಿಸುವ ಸಾಹಿತ್ಯ ಸಮಾವೇಶದ ಸಂದರ್ಭ ಅದು.

ಪೂರ್ತಿ ಒಂದು ದಿನ ನಡೆದ ಆ ಸಮ್ಮೇಳನದ ಅಧ್ಯಕ್ಷತೆ ಅಡಿಗರದ್ದಾದರೆ ಅದರ ಮುಖ್ಯ ಅತಿಥಿಗಳಾಗಿ ಅಂತರ್‌ರಾಷ್ಟ್ರೀಯ ಮಟ್ಟದ ಚಿತ್ರಕಲಾವಿದರಾದ ಫ್ರೆಡರಿಕ್ ರೋರಿಚ್ ಹಾಗೂ ಅವರ ಪತ್ನಿ ದೇವಿಕಾ ರಾಣಿ ರೋರಿಚ್ ದಂಪತಿ. ನಾನಾಗಲೇ ಲೇಖಕಿ ಹಾಗೂ ಕಾದಂಬರಿಕಾರ್ತಿಯಾಗಿ ಗುರುತಿಸಿ ಕೊಂಡಿದ್ದೆ.ಹಾಗಾಗಿ ಏಳೆಂಟು ಸಮ್ಮಾನಿತರ ಪಟ್ಟಿಯಲ್ಲಿ ನಾನೂ ಇದ್ದೇ. ಅನಿರೀಕ್ಷಿತವಾಗಿ ರೋರಿಚ್ ದಂಪತಿಗಳು ಕಾರ್ಯಕ್ರಮದಲ್ಲಿ ಗೈರು ಹಾಜರಾದ ಕಾರಣ ಎಲ್ಲರನ್ನೂ ಸಮ್ಮಾನಿಸುವ ಕೆಲಸ ಅಡಿಗರದ್ದೇ. ಕಾರ್ಯಕ್ರಮ ಮುಗಿದೊಡನೆ ಅಡಿಗರೊಡನೆ ಚಹಾ ಕೂಟದಲ್ಲಿ ಸಮ್ಮಾನಿತರಿಗೆ ಭಾಗವಹಿಸುವ ಅವಕಾಶ. ಆಗ ಅಡಿಗರೇ ಚುನಾವಣೆ ಸಂದರ್ಭ ಜಯನಗರದ ಹೈಕೋರ್ಟ್ ವಕೀಲರಾದ ಕೃಷ್ಣಯ್ಯನವರಲ್ಲಿ ನಾವು ಪರಸ್ಪರ ಭೇಟಿಯಾದ ಸಂದರ್ಭವನ್ನು ನೆನಪಿಸಿಕೊಂಡದ್ದು ನನ್ನ ಮನಸ್ಸಿನಲ್ಲಿ ಇನ್ನೂ ಅಚ್ಚೊತ್ತಿದಂತಿದೆ.

ಕೊನೆಯದಾಗಿ ಹೇಳಬೇಕೆಂದರೆ ಗೋಪಾಲಕೃಷ್ಣ ಅಡಿಗರು ಅವರ ಕಾಲದ ಒಬ್ಬ ಪ್ರಶ್ನಾತೀತ ಕವಿಯಾಗಿದ್ದರು. ಕನ್ನಡ ಕಾವ್ಯಲೋಕ ಇಂದೂ ಕೂಡ ಅವರ ಪ್ರಭಾವದಿಂದ ದೂರ ಉಳಿದಿಲ್ಲ. ಅಡಿಗರಂತೆ ಸತ್ತು ಮರು ಹುಟ್ಟು ಪಡೆದ ಕನ್ನಡ ಕವಿ ಇನ್ನೊಬ್ಬನಿಲ್ಲ ಎಂದು ಒಂದೊಮ್ಮೆ ಡಾ.ಯು.ಆರ್. ಅನಂತಮೂರ್ತಿ ಅವರು ಹೇಳಿದ ಮಾತೇ ಇದಕ್ಕೆ ಸಾಕ್ಷಿ. ಪಿ.ಲಂಕೇಶ್ ಕೂಡ ಇವರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಅಡಿಗರು ಸ್ಥಾಪಿಸಿದ ಸಾಕ್ಷಿ ಪತ್ರಿಕೆ ಅನೇಕ ಯುವ ಲೇಖಕರನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿದೆ.ಇಷ್ಟೆಲ್ಲ ಸಾಧನೆಗಳನ್ನು ತಮ್ಮ ಬತ್ತಳಿಕೆಯಲ್ಲಿರಿಸಿಕೊಂಡಿದ್ದ ಅಡಿಗರನ್ನು ನಮ್ಮ ವರೆಂದು ಹೆಮ್ಮೆಪಡುವ ಅವಕಾಶ ನಮ್ಮೆಲ್ಲರಿಗೆ ದಕ್ಕುವುದು ಅವರ ಸ್ಮಾರಕ ನಿರ್ಮಾಣವಾದಾಗ ಮಾತ್ರ. ಕಳೆದ ಫೆಬ್ರವರಿ 18ರಂದು ಅಡಿಗರು ಹುಟ್ಟಿ ನೂರು ವರ್ಷ ಕಳೆಯಿತು. ಈ ನೆಪದಲ್ಲಿ ಸೂಕ್ತ ಸ್ಮಾರಕ ನಿರ್ಮಿಸಲು ಇದು ಸಕಾಲವಲ್ಲವೇ.

ಗೋಪಾಲಕೃಷ್ಣ ಅಡಿಗರು ಅವರ ಕಾಲದ ಒಬ್ಬ ಪ್ರಶ್ನಾತೀತ ಕವಿಯಾಗಿದ್ದರು. ಕನ್ನಡ ಕಾವ್ಯಲೋಕ ಇಂದೂ ಕೂಡ ಅವರ ಪ್ರಭಾವದಿಂದ ದೂರ ಉಳಿದಿಲ್ಲ. ಅಡಿಗರಂತೆ ಸತ್ತು ಮರು ಹುಟ್ಟು ಪಡೆದ ಕನ್ನಡ ಕವಿ ಇನ್ನೊಬ್ಬನಿಲ್ಲ ಎಂದು ಒಂದೊಮ್ಮೆ ಡಾ.ಯು.ಆರ್. ಅನಂತಮೂರ್ತಿ ಅವರು ಹೇಳಿದ ಮಾತೇ ಇದಕ್ಕೆ ಸಾಕ್ಷಿ. ಪಿ.ಲಂಕೇಶ್ ಕೂಡ ಇವರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಅಡಿಗರು ಸ್ಥಾಪಿಸಿದ ಸಾಕ್ಷಿ ಪತ್ರಿಕೆ ಅನೇಕ ಯುವ ಲೇಖಕರನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿದೆ.

Writer - ಕೆ.ಶಾರದಾ ಭಟ್ ಉಡುಪಿ

contributor

Editor - ಕೆ.ಶಾರದಾ ಭಟ್ ಉಡುಪಿ

contributor

Similar News