ಪ್ರಕಾಶ್ ರಾಜ್ 3 ಗುರುತಿನ ಚೀಟಿ ಹೊಂದಿದ್ದಾರೆ: ಗಿರೀಶ್ ಕುಮಾರ್ ನಾಯ್ಡು ಆರೋಪ

Update: 2019-03-31 12:13 GMT

ಬೆಂಗಳೂರು, ಮಾ.31: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಪ್ರಕಾಶ್ ರಾಜ್, 3 ಗುರುತಿನ ಚೀಟಿ ಹೊಂದಿದ್ದು, ಈ ಸಂಬಂಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತೇನೆ ಎಂದು ಶಾಂತಿನಗರ ನಿವಾಸಿ ಕೆ.ಗಿರೀಶ್ ಕುಮಾರ್ ನಾಯ್ಡು ಹೇಳಿದರು.
ರವಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಕಾಶ್ ರಾಜ್ ಅವರು 3 ಗುರುತಿನ ಚೀಟಿ ಹೊಂದಿರುವ ಸಂಬಂಧ ದೂರು ನೀಡಿದರು ಚುನಾವಣಾಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ತಮಿಳುನಾಡಿನ ವೇಲಚರಿ ವಿಧಾಸಭಾ ಕ್ಷೇತ್ರದಲ್ಲಿ ಎರಡು ಕಡೆ, ತೆಲಂಗಾಣದ ಸಿರಿಲಿಂಗಂಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಕಡೆ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಉಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಶಾಂತಿನಗರದಲ್ಲಿಯೂ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ದೂರಿದರು.

‘ಸೆಕ್ಷನ್ 17,18 ಮತ್ತು 31ರ ಅನ್ವಯ ಕಾನೂನಿನ ಉಲ್ಲಂಘನೆ ಮಾಡಿದ್ದು, ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ, ಕಾನೂನಿನಲ್ಲಿ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಈ ವಿಷಯವನ್ನು ಚುನಾವಣಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಚೆನ್ನೈಗೆ ಹೋಗಿ ದೂರು ದಾಖಲಿಸಿ ಎಂದು ಹೇಳಿದ್ದಾರೆ ಎಂದು ಆರೋಪಿಸಿದರು.

ಪ್ರಕಾಶ್ ರಾಜ್ ಅವರ ನಾಮಪತ್ರವನ್ನು ಅಸಿಂಧುಗೊಳಿಸಬೇಕು. ಇಲ್ಲವಾದರೆ ಈ ಪ್ರಕರಣ ಸಂಬಂಧ ಕೋರ್ಟ್‌ನಲ್ಲಿ ದೂರು ದಾಖಲಿಸಲಾಗುವುದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News