ದೇಶದ ಸೇನೆಯನ್ನು ‘ಮೋದಿಯ ಸೇನೆ’ ಎಂದ ಆದಿತ್ಯನಾಥ್!

Update: 2019-04-01 10:22 GMT

ಗಾಝಿಯಾಬಾದ್, ಎ.1: ಭಾರತದ ಸೇನೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ‘ಮೋದಿಯ ಸೇನೆ’ ಎಂದು ಸಂಬೋಧಿಸಿರುವುದು ವಿರೋಧ ಪಕ್ಷಗಳ ಕೆಂಗಣ್ಣಿಗೆ ಕಾರಣವಾಗಿದೆ. ಇದು ಸಶಸ್ತ್ರ ಪಡೆಗಳಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಟೀಕಿಸಿದೆ.

ದೆಹಲಿ ಬಳಿಯ ಗಾಝಿಯಾಬಾದ್‍ನಲ್ಲಿ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ಮಂದಿ ಉಗ್ರರಿಗೆ ಬಿರಿಯಾನಿ ನೀಡಿದರೆ ಮೋದಿಯವರ ಸೇನೆ ಗೋಲಿ ಹಾಗೂ ಗೋಲಾ (ಗುಂಡು ಹಾಗೂ ಬಾಂಬ್) ನೀಡಿತು. ಇದು ಭಿನ್ನತೆ. ಕಾಂಗ್ರೆಸ್ ನ ಮಂದಿ ಮಸೂದ್ ಅಝರ್‍ ನಂತಹ ಉಗ್ರರಿಗೆ ಜೀ ಎಂದು ಸಂಬೋಧಿಸಿದರೆ, ಪ್ರಧಾನಿ ಮೋದಿ ನೇತೃತ್ವದಲ್ಲಿ ಉಗ್ರರ ಶಿಬಿರಗಳ ಮೇಲೆ ದಾಳಿ ಮಾಡುವ ಮೂಲಕ ಅವರ ಬೆನ್ನುಮೂಳೆ ಮುರಿದಿದೆ" ಎಂದು ಹೇಳಿದರು.

"ಕಾಂಗ್ರೆಸ್‍ಗೆ ಅಸಾಧ್ಯವಾದದ್ದು ಮೋದಿಗೆ ಸಾಧ್ಯವಾಯಿತು. ಮೋದಿಯಿಂದಾಗಿ ಅಸಾಧ್ಯವಾದದ್ದು ಸಾಧ್ಯವಾಯಿತು" ಎಂದು ಹೇಳಿದರು.

ಸೇನೆಯನ್ನು ‘ಮೋದಿ ಸೇನೆ’ ಎಂದು ಕರೆದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿಯ ಕ್ರಮ ಆಘಾತಕಾರಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. "ಭಾರತದ ಸೇನೆಯನ್ನು ಮೋದಿ ಸೇನೆ ಎಂದು ಕರೆದಿರುವುದು ಆಘಾತಕಾರಿ. ನಮ್ಮ ಭಾರತೀಯ ಸೇನೆಯನ್ನು ಈ ಮೂಲಕ ಅವಮಾನಿಸಲಾಗಿದೆ" ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಹೇಳಿದ್ದಾರೆ.

ಭಾರತೀಯ ಸೇನೆಯನ್ನು ಮೋದಿ ಸೇನೆ ಎಂದು ಕರೆದಿರುವ ಆದಿತ್ಯನಾಥ್ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಮುಖಂಡ ಪ್ರಿಯಾಂಕ ಚತುರ್ವೇದಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News