'ಡೈರಿ' ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ: ಬಿಎಸ್​ವೈ

Update: 2019-04-01 12:21 GMT

ಬೆಂಗಳೂರು, ಎ.1: ಬಿಜೆಪಿ ವರಿಷ್ಠರು ಹಾಗೂ ನನ್ನ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿರುವ ಆರೋಪ ಸಾಬೀತುಪಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಸವಾಲು ಹಾಕಿದ್ದಾರೆ.

ನೆಲಮಂಗಲದಲ್ಲಿ ನಿನ್ನೆ ನಡೆದ ಪರಿವರ್ತನಾ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದು, ಆದಾಯ ತೆರಿಗೆ ಇಲಾಖೆಯೇ ನಕಲಿ ಡೈರಿ ಎಂದು ಹೇಳಲ್ಪಟ್ಟಿರುವ ಡೈರಿಯನ್ನು ಉಲ್ಲೇಖಿಸಿದ್ದಾರೆ. ಅಲ್ಲದೆ, ಬಿಜೆಪಿ ನಾಯಕರಾದ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿಗೆ ಕಪ್ಪ ನೀಡಿರುವುದಾಗಿ ಅವಹೇಳನ ಮಾಡಿದ್ದಾರೆ. ಈ ಹೇಳಿಕೆಯಿಂದ ಅವರು ರಾಷ್ಟ್ರದ ಮುಂದೆ ನಗೆಪಾಟಲಿಗೆ ಈಡಾಗಿದ್ದಾರೆ. ಈ ರೀತಿಯ ಬೇಜವಾಬ್ದಾರಿ ಹೇಳಿಕೆ ಅವರ ಘನತೆಗೆ ತಕ್ಕುದಲ್ಲ. ರಾಹುಲ್ ತಮ್ಮ ಆರೋಪಕ್ಕೆ ಬದ್ಧರಾಗಿ ನನ್ನ ಮತ್ತು ನಾಯಕರ ಮೇಲೆ ಮಾಡಿದ ಆಪಾದನೆಗಳನ್ನು ಸಾಬೀತು ಪಡಿಸಬೇಕು. ಇಲ್ಲವಾದರೆ ಅವರ ಹುದ್ದೆಗೆ ರಾಜೀನಾಮೆ ನೀಡಬೇಕು. ನನ್ನ ಸವಾಲನ್ನು ಅವರು ಸ್ವೀಕರಿಸಬೇಕು. ನನ್ನ ಮೇಲಿನ ಆರೋಪ ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

1,800 ಕೋಟಿ ರೂ.ಡೈರಿ ಬಗ್ಗೆ ದೇಶದ ಸಂವಿಧಾನ ಬದ್ಧ ಸಂಸ್ಥೆಗಳ ಅಧಿಕಾರಿಗಳು ನಕಲಿ ಎಂದು ಹೇಳಿದ ಮೇಲೆ ರಾಹುಲ್ ಗಾಂಧಿ ಮತ್ತು ಅವರ ಪಕ್ಷದ ನಾಯಕರು ಈ ದೇಶದ ಕಾನೂನು ಮೇಲೆ ನಂಬಿಕೆ ಇಲ್ಲ ಎಂದು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News