ಮೋದಿ ಆಡಳಿತದಲ್ಲಿ ಸಂವಿಧಾನಕ್ಕೆ ರಕ್ಷಣೆಯಿಲ್ಲ: ಮಾಧ್ಯಮ ಸಂವಾದದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ

Update: 2019-04-01 14:03 GMT

ಬೆಂಗಳೂರು, ಎ.1: ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗುತ್ತಿದೆ, ಸಂವಿಧಾನಕ್ಕೆ ರಕ್ಷಣೆಯಿಲ್ಲದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬೆಂಗಳೂರು ವರದಿಗಾರರ ಕೂಟ ಹಾಗೂ ಪ್ರೆಸ್‌ಕ್ಲಬ್ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಿಜೆಪಿ ನಾಯಕರಿಗೆ ಹಾಗೂ ಅಧಿಕಾರದಲ್ಲಿದ್ದವರಿಗೆ ಸಂವಿಧಾನದ ಬಗ್ಗೆ ಕಿಂಚಿತ್ತೂ ಗೌರವವಿರಲಿಲ್ಲ. ಅಲ್ಲದೆ, ಬಿಜೆಪಿಯನ್ನು ಪ್ರೋತ್ಸಾಹಿಸುವ ಆರೆಸ್ಸೆಸ್ ನಾಯಕರು ಬಹಿರಂಗವಾಗಿ ಸಂವಿಧಾನ ವಿರುದ್ಧವಾಗಿ ಮಾತನಾಡಿದ್ದಾರೆ. ಆರೆಸ್ಸೆಸ್ ಸರಸಂಚಾಲಕ ಹಿಂದೂ ಆಚಾರ-ವಿಚಾರಗಳಿಗೆ ಸಂವಿಧಾನದಲ್ಲಿ ಬೆಲೆಯಿಲ್ಲ, ಅದನ್ನು ಬದಲಿಸಬೇಕು ಎಂದಿದ್ದರು. ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಿಸಲಿಕ್ಕಾಗಿ ಅಧಿಕಾರಕ್ಕೆ ಬಂದಿರುವುದು ಎಂಬ ಹೇಳಿಕೆ ನೀಡಿದ್ದರು ಎಂದು ಅವರು ಹೇಳಿದರು.

ಸಂವಿಧಾನದ ಅಡಿಯಲ್ಲಿ ಆಯ್ಕೆಯಾದ ಸರಕಾರ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ನಾಶ ಮಾಡಲು ಮುಂದಾಗಿದ್ದರು. ಅಲ್ಲದೆ, ಸಾಂವಿಧಾನಿಕ ಸಂಸ್ಥೆಗಳಾದ ಆರ್‌ಬಿಐ, ಸಿಬಿಐ, ಸಿವಿಸಿ ಸೇರಿದಂತೆ ಮತ್ತಿತರೆ ಸಂಸ್ಥೆಗಳನ್ನು ದುರ್ಬಲಗೊಳಿಸಿದರು. ನ್ಯಾಯಾಂಗ ವ್ಯವಸ್ಥೆಯನ್ನೇ ಬುಡಮೇಲು ಮಾಡಿ, ನ್ಯಾಯಾಧೀಶರು ಬೀದಿಗೆ ಬರುವಂತೆ ಮಾಡಿದರು. ಹೀಗಾಗಿ, ನಮ್ಮ ದೇಶದ ಜನರು ಬುದ್ಧಿವಂತರಿದ್ದು, ಪ್ರಜಾಪ್ರಭುತ್ವ ಅಪಾಯದಲ್ಲಿದ್ದಾಗ, ಸಂವಿಧಾನಕ್ಕೆ ಧಕ್ಕೆ ಬಂದಾಗ ಸಿಡಿದೆದ್ದ ಇತಿಹಾಸವಿದೆ. ಈಗಲೂ ಜನರು ಬಿಜೆಪಿ ವಿರುದ್ಧ ಸಿಡಿದೇಳಲಿದ್ದಾರೆ ಎಂದು ಭವಿಷ್ಯ ನುಡಿದರು.

ಮೈತ್ರಿಕೂಟಕ್ಕೆ 20 ಸ್ಥಾನ ಖಚಿತ: ಜೆಡಿಎಸ್-ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ನಡುವಿನ ಭಿನ್ನಾಭಿಪ್ರಾಯಗಳು ಮರೆಯಾಗುತ್ತಿದ್ದು, ಎರಡೂ ಪಕ್ಷಗಳು ಒಟ್ಟಾಗಿ ಕೆಲಸ ಮಾಡುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿಕೂಟ 20 ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಸೀಟು ಹಂಚಿಕೆ ಮಾಡಿಕೊಳ್ಳಲಾಗಿದೆ. ಮೈತ್ರಿ ಧರ್ಮದಂತೆ ಎರಡೂ ಪಕ್ಷಗಳ ನಾಯಕರು ಜಂಟಿಯಾಗಿ ಪ್ರಚಾರ ಮಾಡುತ್ತೇವೆ. ನಾನು ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತುಮಕೂರು, ಮಂಡ್ಯದಲ್ಲಿ ಒಟ್ಟಾಗಿ ಪ್ರಚಾರ ಮಾಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

ದೇವೇಗೌಡರ ಜತೆಗೆ ಪ್ರಚಾರದ ಸಂಬಂಧ ಪ್ರವಾಸ ಕಾರ್ಯಕ್ರಮದ ಪಟ್ಟಿ ಸಿದ್ಧವಾಗುತ್ತಿದೆ. ಹಳೇ ಮೈಸೂರು ಭಾಗದಲ್ಲಿ ಎರಡೂ ಪಕ್ಷಗಳ ನಡುವೆ ಮೊದಲಿನಿಂದಲೂ ಪೈಪೋಟಿ ಮಾಡುತ್ತಾ ಬಂದಿದ್ದೇವೆ. ಆದರೆ, ಇದೀಗ ಮೈತ್ರಿ ಆಗಿದ್ದರಿಂದ ಸ್ಥಳೀಯವಾಗಿ ಕೆಲವು ಭಿನ್ನಾಭಿಪ್ರಾಯಗಳಿವೆ. ಎರಡೂ ಪಕ್ಷಗಳು ಒಟ್ಟಿಗೆ ಕೆಲಸ ಮಾಡಿದರೆ ಎಲ್ಲ ಸರಿ ಹೋಗಿ ನಾವು ಕನಿಷ್ಠ 20 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲ್ಲ: ದೇಶದ ಎಲ್ಲ ಕಡೆ ಮೋದಿ ವಿರೋಧಿ ಅಲೆಯಿದೆ. ಎಲ್ಲಿಯೂ ಮೋದಿ, ಬಿಜೆಪಿ ಪರವಾದ ಅಲೆ ಕಂಡು ಬರುತ್ತಿಲ್ಲ. ಹೀಗಾಗಿ, ಮೋದಿ ಪ್ರಧಾನಿಯಾಗುವುದು ಸಾಧ್ಯವೇ ಇಲ್ಲ ಎಂದು ಘೋಷಿಸಿದ ಸಿದ್ದರಾಮಯ್ಯ, ಎಲ್ಲ ಕಡೆ ಚೌಕಿದಾರ್ ಎಂದು ಕರೆದುಕೊಳ್ಳುವ ಮೋದಿ ಜನರ ಸಮಸ್ಯೆಗಳನ್ನು ಮಾತನಾಡುತ್ತಿಲ್ಲ. ಮೋದಿಯದ್ದು ಕೇವಲ ಮಾತನಾಡುವುದು ಬಿಟ್ಟರೆ ಸಾಧನೆ ಏನೂ ಇಲ್ಲ. 2014 ರಲ್ಲಿ ಅಧಿಕಾರಕ್ಕೆ ಬಣ್ಣ ಬಣ್ಣದ ಮಾತುಗಳನ್ನಾಡಿದರು. ಐದು ವರ್ಷದಲ್ಲಿ ಏನೂ ಸಾಧನೆ ಮಾಡಲಿಲ್ಲ ಎಂದು ವ್ಯಂಗ್ಯವಾಡಿದರು.

ಐಟಿ ದಾಳಿಗೆ ವಿರೋಧವಿಲ್ಲ: ಚುನಾವಣೆ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ಕಾಂಗ್ರೆಸ್-ಜೆಡಿಎಸ್ ನಾಯಕರ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದನ್ನು ನಾವು ಖಂಡಿಸುತ್ತೇವೆ. ಅಕ್ರಮವಾಗಿ ಹಣ ಸಂಪಾದನೆ ಮಾಡಿರುವ, ತೆರಿಗೆ ಕಟ್ಟದಿರುವ ಯಾರ ಮೇಲಾದರೂ ದಾಳಿ ಮಾಡಿದರೂ ನಮ್ಮ ವಿರೋಧವಿಲ್ಲ. ಉದ್ದೇಶಪೂರ್ವಕವಾಗಿ, ರಾಜಕೀಯ ಪ್ರೇರಿತವಾಗಿ ಐಟಿ ದಾಳಿ ಮಾಡುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಜನರ ಸಮಸ್ಯೆಗಳು ಚುನಾವಣಾ ವಿಷಯವಾಗಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಐದು ವರ್ಷಗಳ ಆಡಳಿತದಲ್ಲಿ ಮಾಡಿರುವ ಜನಪರ ಯೋಜನೆಗಳ ಕುರಿತು, ಜನರ ಸಮಸ್ಯೆಗಳ ಕುರಿತು ಎಲ್ಲಿಯೂ ಪ್ರಸ್ತಾಪ ಮಾಡುತ್ತಿಲ್ಲ. ರೈತರ ಆತ್ಮಹತ್ಯೆ, ಬೆಲೆಯೇರಿಕೆ, ಉದ್ಯೋಗ, ಶಿಕ್ಷಣ, ಆರೋಗ್ಯದ ವಿಷಯಗಳ ಬಗ್ಗೆ ಮಾತನಾಡುತ್ತಿಲ್ಲ. 15 ಕೋಟಿ ಖಾತೆಗೆ ಹಣ, ರೈತರ ಆದಾಯ ದುಪ್ಪಟ್ಟು, ಸ್ವಾಮಿನಾಥನ್ ಆಯೋಗದ ವರದಿ ಜಾರಿ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೇರಿದಂತೆ ಜನರ ಕಷ್ಟಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ಅವರು ಟೀಕಿಸಿದರು.

ಹಿಂದೆಯೂ ಸರ್ಜಿಕಲ್ ದಾಳಿ ನಡೆದಿದೆ: ಪ್ರಧಾನಿ ಮೋದಿ ಪುಲ್ವಾಮಾದಲ್ಲಿ ಸೈನಿಕರ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿಯ ನಂತರ ಪಾಕಿಸ್ತಾನದ ಬಾಲಾಕೋಟ್ ಮೇಲೆ ನಡೆಸಿದ ಸರ್ಜಿಕಲ್ ದಾಳಿಯನ್ನು ತಮ್ಮ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, 1971 ರಲ್ಲಿಯೇ ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಬಾಂಗ್ಲಾದೇಶದ ವಿರುದ್ಧ ಸರ್ಜಿಕಲ್ ದಾಳಿ ನಡೆದಿತ್ತು. ಅಲ್ಲದೆ, ಪಾಕಿಸ್ತಾನದ ವಿರುದ್ಧ ಎರಡು ಬಾರಿ ದಾಳಿ ಮಾಡಲಾಗಿತ್ತು. ಅದನ್ನು ಅವರು ಪ್ರಚಾರಕ್ಕೆ ಬಳಸಿಕೊಳ್ಳಲಿಲ್ಲ ಎಂದು ಹೇಳಿದರು.

ಸಮ್ಮಿಶ್ರ ಸರಕಾರ ಸುಭದ್ರ: ಲೋಕಸಭೆ ಚುನಾವಣೆ ನಂತರವು ಸಮ್ಮಿಶ್ರ ಸರಕಾರ ಸುಭದ್ರವಾಗಿರಲಿದೆ. ಯಡಿಯೂರಪ್ಪಗೆ ಪ್ರತಿದಿನವೂ ವಿಧಾನಸೌಧದ ಮೂರನೇ ಮಹಡಿಯ ಮುಖ್ಯಮಂತ್ರಿ ಕುರ್ಚಿ ಕನಸಿಗೆ ಬರುತ್ತದೆ. ಆದರೆ ಅದು ಈಡೇರುವುದಿಲ್ಲ. ಕಾಂಗ್ರೆಸ್ ಅನ್ನು ಬಿಟ್ಟು ಯಾವ ಶಾಸಕರು ಹೋಗುವುದಿಲ್ಲ. ನಮ್ಮ ಪಕ್ಷದ ಶಾಸಕರಾಗಿದ್ದ ಉಮೇಶ್ ಜಾಧವ್‌ಗೆ ಭಾರೀ ಆಸೆ ತೋರಿಸಿ ಕರೆದುಕೊಂಡು ಹೋಗಿ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಸ್ಪರ್ಧೆಗಿಳಿಸಿದ್ದಾರೆ ಎಂದು ಅವರು ತಿಳಿಸಿದರು.

ಎಸ್‌ಐಟಿ ರಚನೆ

ಆಪರೇಷನ್ ಕಮಲ ಕುರಿತಂತೆ ಯಡಿಯೂರಪ್ಪ ಆಡಿಯೋ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ನಡೆಸುವಂತೆ ಸ್ಪೀಕರ್ ರಮೇಶ್‌ ಕುಮಾರ್ ಸಲಹೆ ನೀಡಿದರು. ನಾನು ಅದನ್ನು ಒಪ್ಪಿದ್ದೇನೆ. ಮುಖ್ಯಮಂತ್ರಿಯೂ ಒಪ್ಪಿದ್ದಾರೆ. ಶೀಘ್ರವೇ ಎಸ್‌ಐಟಿ ರಚನೆಯಾಗಲಿದೆ. ನಾನು ಆ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಕೇರಳ ಕಾಂಗ್ರೆಸ್ ಸಮಿತಿ ಅಲ್ಲಿನ ವಯನಾಡ್‌ನಲ್ಲಿ ಸ್ಪರ್ಧೆ ಮಾಡುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ಗಾಂಧಿಯನ್ನು ಮನವಿ ಮಾಡಿದ್ದರು. ಕರ್ನಾಟಕದಿಂದಲೂ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡಿದ್ದೆವು. ಅಂತಿಮವಾಗಿ ಹೈಕಮಾಂಡ್ ಕೇರಳವನ್ನು ಆಯ್ಕೆ ಮಾಡಿದೆ. ಅಲ್ಲಿ ಕಮ್ಯುನಿಸ್ಟ್ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದೆ.

-ಸಿದ್ದರಾಮಯ್ಯ, ಮಾಜಿ ಸಿಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News