×
Ad

ಬ್ಯಾಂಕ್ ಆಫ್ ಬರೋಡ ದೇಶದ 2ನೇ ಅತಿದೊಡ್ಡ ಬ್ಯಾಂಕ್: ಬಿರೇಂದ್ರ ಕುಮಾರ್

Update: 2019-04-01 21:37 IST

ಬೆಂಗಳೂರು, ಎ.1: ಬ್ಯಾಂಕ್ ಆಫ್ ಬರೋಡಾ ಜತೆ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ವಿಲೀನಗೊಂಡಿದ್ದು, ಬ್ಯಾಂಕ್ ಆಫ್ ಬರೋಡ ದೇಶದ 2ನೇ ಅತಿದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಬ್ಯಾಂಕ್ ಆಫ್ ಬರೋಡ ಬೆಂಗಳೂರು ವಿಭಾಗದ ಪ್ರಧಾನ ವ್ಯವಸ್ಥಾಪಕ ಬಿರೇಂದ್ರ ಕುಮಾರ್ ತಿಳಿಸಿದರು.

ಸೋಮವಾ ನಗರದ ಬ್ಯಾಂಕ್ ಆಫ್ ಬರೋಡ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.30ರಂದು ಹೊರಡಿಸಿದ ಅಧಿಸೂಚನೆ ಅನ್ವಯ ಬ್ಯಾಂಕ್ ಆಫ್ ಬರೋಡಾ, ವಿಜಯಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ಗಳ ಎಲ್ಲಾ ಶಾಖೆಗಳು ಬ್ಯಾಂಕ್ ಆಫ್ ಬರೋಡಾ ಶಾಖೆಗಳಾಗಿ ಕಾರ್ಯನಿರ್ವಹಿಸಲಿವೆ. ವಿಜಯಬ್ಯಾಂಕ್ ಮತ್ತು ದೇನಾ ಬ್ಯಾಂಕಿನ ಠೇವಣಿದಾರರೂ ಸೇರಿದಂತೆ ಎಲ್ಲ ಗ್ರಾಹಕರನ್ನು ಬ್ಯಾಂಕ್ ಆಫ್ ಬರೋಡಾ ಗ್ರಾಹಕರಾಗಿ ಎ.1ರಿಂದ ಪರಿಗಣಿಸಲಾಗುವುದು ಎಂದು ಹೇಳಿದರು.

ದೇನಾ ಬ್ಯಾಂಕ್ ಮತ್ತು ವಿಜಯಬ್ಯಾಂಕ್‌ನ ಗ್ರಾಹಕರು ತಕ್ಷಣದಿಂದಲೇ ನವೀಕೃತ ವ್ಯವಸ್ಥೆಯ ಮೂಲಕ ಸಾಲ ಸೌಲಭ್ಯ ಪಡೆಯಲಿದ್ದಾರೆ. ವಿದೇಶಿ ಕರೆನ್ಸಿ ನೆರವು ವಿಜಯಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಗ್ರಾಹಕರಿಗೆ ಲಭ್ಯವಾಗಲಿದೆ. ಬ್ಯಾಂಕ್ ಆಫ್ ಬರೋಡಾದ 101 ಅಂತರ್‌ರಾಷ್ಟ್ರೀಯ ಶಾಖೆಗಳ ಸೇವೆಯನ್ನೂ ಪಡೆಯಲಿದ್ದಾರೆ. ವಿಜಯ ಬ್ಯಾಂಕಿನ ಯೋಜನೆಗಳಾದ ಎಸ್‌ಆರ್‌ಟಿಒ ಫಂಡಿಂಗ್, ಪ್ಲಾಂಟೇಷನ್, ಫೈನಾನ್ಸಿಂಗ್ ಸೌಲಭ್ಯ 2 ಬ್ಯಾಂಕ್‌ಗಳ ಗ್ರಾಹಕರಿಗೂ ದೊರೆಯಲಿದೆ ಎಂದರು.

ವಿಲೀನಗೊಂಡ ಸಂಸ್ಥೆಯು ವಿಸ್ತೃತವಾದ ಭೌಗೋಳಿಕ ವ್ಯಾಪ್ತಿ ಹೊಂದಿದ್ದು, 9,500 ಕ್ಕೂ ಅಧಿಕ ಶಾಖೆಗಳು, 13,400ಕ್ಕೂ ಅಧಿಕ ಎಟಿಎಂಗಳು, 85 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಕೆಲಸ ನಿರ್ವಹಿಸಲಿದ್ದಾರೆ. 12 ಕೋಟಿಗೂ ಅಧಿಕ ಗ್ರಾಹಕರಿಗೆ ಸೇವೆ ಒದಗಿಸಲಿದೆ. ಬ್ಯಾಂಕ್ ಒಟ್ಟು 15 ಲಕ್ಷ ಕೋಟಿಗೂ ಅಧಿಕ ವ್ಯವಹಾರ ಹೊಂದಿದ್ದು, 8.75 ಲಕ್ಷ ಕೋಟಿ ರೂ. ಅಧಿಕ ಠೇವಣಿ ಹಾಗೂ 6.25 ಲಕ್ಷ ರೂ. ಅಧಿಕ ಮುಂಗಡ ಹೊಂದಿದೆ ಎಂದು ವಿವರಿಸಿದರು.

ಬ್ಯಾಂಕ್ ಆಫ್ ಬರೋಡಾ ಜೊತೆ ವಿಜಯಬ್ಯಾಂಕ್ ಮತ್ತು ದೇನಾ ಬ್ಯಾಂಕ್ ವಿಲೀನಗೊಂಡಿದ್ದು, ರಾಜ್ಯದಲ್ಲಿ 787 ಶಾಖೆಗಳಿವೆ. ಆಯಾ ಬ್ಯಾಂಕ್‌ನ ಎಟಿಎಂ, ಪಾಸ್‌ಬುಕ್ ಮುಂದುವರಿಯಲಿದ್ದು, ಹಂತ-ಹಂತವಾಗಿ ಬ್ಯಾಂಕ್ ಆಫ್ ಬರೋಡಾ ಎಟಿಎಂ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ವಿಜಯಬ್ಯಾಂಕ್‌ನ ಬೆಂಗಳೂರು ಪ್ರಾದೇಶಿಕ ಮುಖ್ಯಸ್ಥ ಸುದರ್ಶನ್ ಸೇರಿದಂತೆ ದೇನಾ ಬ್ಯಾಂಕ್‌ನ ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News