ಸಿನೆಮಾ ಚಿತ್ರೀಕರಣ ವೇಳೆ ತಾಯಿ-ಮಗಳು ಸಾವು ಪ್ರಕರಣ: ಸಾಹಸ ಸಹಾಯಕ ನಿರ್ದೇಶಕನ ಬಂಧನ
ಬೆಂಗಳೂರು, ಎ.1: ರಣಂ ಸಿನೆಮಾ ಚಿತ್ರೀಕರಣದ ವೇಳೆ ಕಂಪ್ರೆಸ್ಡ್ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ತಾಯಿ, ಮಗಳು ಮೃತಪಟ್ಟ ಪ್ರಕರಣ ಸಂಬಂಧ ಸಾಹಸ ಸಹಾಯಕ ನಿರ್ದೇಶಕ ಸುಭಾಸ್ ಎಂಬಾತನನ್ನು ಇಲ್ಲಿನ ಬಾಗಲೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ದುರಂತ ನಡೆದ ದಿನದಂದು ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೆನ್ನೈಗೆ ಹೋಗಲು ಟಿಕೆಟ್ ಕಾಯ್ದಿರಿಸಿದ್ದರು. ಕೆಲ ಹೊತ್ತಲ್ಲೇ ಈ ವಿಚಾರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದೆವು. ಬಳಿಕ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದುರಂತದ ನಂತರ ಪೊಲೀಸರು ತಮ್ಮನ್ನು ಬೆನ್ನಟ್ಟುತ್ತಿರುವ ವಿಚಾರ ತಿಳಿದುಕೊಂಡಿದ್ದ ಸಾಹಸ ನಿರ್ದೇಶಕ ವಿಜಯನ್, ವಿಮಾನದಲ್ಲಿ ಹೋಗದೆ ತಲೆಮರೆಸಿಕೊಂಡಿದ್ದಾರೆ.
ಇದೇ ಪ್ರಕರಣ ಸಂಬಂಧ ರಣಂ ಸಿನೆಮಾ ನಿರ್ದೇಶಕ ಸಮುದ್ರಂ, ನಿರ್ಮಾಪಕ ಆರ್.ಶ್ರೀನಿವಾಸ್ ಸೇರಿ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ತನಿಖೆ ಮುಂದುವರೆಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಹೇಳಿದರು.
ಆರೋಪಿಗಳ ಪತ್ತೆಗಾಗಿ ಡಿಸಿಪಿ ಕಲಾಕೃಷ್ಣ ಸ್ವಾಮಿ ಅವರ ಮಾರ್ಗದರ್ಶನದಲ್ಲಿ ಮೂರು ವಿಶೇಷ ತಂಡಗಳು ರಚಿಸಿದ್ದು, ಇತರೆ ಆರೋಪಿಗಳು ಚೆನ್ನೈ ಅಥವಾ ಹೈದರಾಬಾದ್‌ಗೆ ರಸ್ತೆ ಮೂಲಕ ತೆರಳಿರುವ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಅದೇ ರೀತಿ, ಸಿನಿಮಾ ತಂಡದವರು ಸಾಹಸ ದೃಶ್ಯ ಚಿತ್ರೀಕರಿಸಿದ ಹಿನ್ನಲೆ ದುರ್ಘಟನೆ ನಡೆದ ಸ್ಥಳದಲ್ಲಿದ್ದ ಸಿನಿಮಾ ತಂಡದ ಎಲ್ಲ ವಾಹನಗಳನ್ನೂ ಜಪ್ತಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.