ಬೆಂಗಳೂರು ಉತ್ತರ ಕ್ಷೇತ್ರ: ಸದಾನಂದಗೌಡ ಬಿರುಸಿನ ಪ್ರಚಾರ
ಬೆಂಗಳೂರು,ಎ.1: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಸೋಮವಾರ ಬೆಳಗ್ಗೆ ಮಹಾಲಕ್ಷ್ಮೀ ಲೇಔಟ್ ವಿಧಾನ ಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಬೆಳಿಗ್ಗೆ ನಂದಿನಿ ಬಡಾವಣೆಯಲ್ಲಿರುವ ಸರ್ಕ್ಯುಲರ್ ಪಾರ್ಕ್‍ನಲ್ಲಿ ಸಂಚರಿಸಿ ವಾಯುವಿಹಾರಕ್ಕೆ ಆಗಮಿಸಿದ ನಾಗರಿಕರ ಬಳಿ ಮತ ಯಾಚಿಸಿದರು.
ನಂತರ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಮತದಾರರನ್ನು ಭೇಟಿ ಮಾಡಿ ಕೇಂದ್ರ ಸರಕಾರದ ಸಾಧನೆಗಳು, ಕ್ಷೇತ್ರದಲ್ಲಿ ಕಳೆದ ಐದು ವರ್ಷದಲ್ಲಿ ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿ ಈ ಬಾರಿಯೂ ತಮಗೆ ಮತ ನೀಡಿ ಪುನರಾಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ತರಾಕಾರಿ ಮಾರುಕಟ್ಟೆ ಸಂಘದ ಪದಾಧಿಕಾರಿಗಳು ಮುಖಂಡ ಗೋವಿಂದಪ್ಪ ಅವರ ನೇತೃತ್ವದಲ್ಲಿ ಮತಯಾಚನೆಗೆ ಸಾಥ್ ನೀಡಿದರು. ಇದೇ ಸಂದರ್ಭದಲ್ಲಿ ವ್ಯಾಪಾರಿಗಳು, ಮಾರುಕಟ್ಟೆ ಸಂಘದವರು ಸದಾನಂದಗೌಡ ಅವರನ್ನು ಸನ್ಮಾನಿಸಿದರು.
ಮುಖಂಡರಾದ ನರೇಂದ್ರ ಬಾಬು, ಹರೀಶ್, ಶಂಕರಪ್ಪ, ರಾಜಣ್ಣ, ಪ್ರಸನ್ನ, ಎಂ.ಶ್ರೀನಿವಾಸ್, ರಾಜೇಂದ್ರ ಕುಮಾರ್, ಶಿವಾನಂದಮೂರ್ತಿ, ಗಂಗಹನುಮಯ್ಯ, ವೆಂಕಟೇಶ್ ಮೂರ್ತಿ, ಜಯಸಿಂಹ, ನಾಗೇಂದ್ರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಂತರ ನಂದಿನಿ ಬಡಾವಣೆಯ ಕಂಠೀರವ ಟೆಂಟ್‍ನಿಂದ ಮಾರಪ್ಪನ ಪಾಳ್ಯ ಸರ್ವೀಸ್ ರಸ್ತೆ ಮೂಲಕ ರಾಮಕೃಷ್ಣ ನಗರಕ್ಕೆ ತೆರೆದ ಜೀಪ್‍ನಲ್ಲಿ ಸಂಚರಿಸಿದ ಸದಾನಂದಗೌಡರು ಮತ ಯಾಚಿಸಿದರು.
ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಸದಾನಂದಗೌಡರು, ಬಾಲಾಕೋಟ್ ದಾಳಿಗೆ ನಿಮಗೆ ಪ್ರೇರಣೆಯೇನು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾನುವಾರ ನಡೆದ 'ನಾನೂ ಚೌಕಿದಾರ' ಕಾರ್ಯಕ್ರಮದಲ್ಲಿ ರಾಜಸ್ತಾನದ ಯುವಕನೊಬ್ಬ ಪ್ರಶ್ನಿಸಿದ. ಇದಕ್ಕೆ ಮೋದಿಯವರು ಸ್ಥಿರ ಸರಕಾರವೇ ಕಾರಣ ಎಂದು ಹೇಳಿದ್ದನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.
ಮಿಲಿಟರಿ ಮೇಲೆ ನಂಬಿಕೆಯಿರಲಿಲ್ಲ
ಕೇಂದ್ರದಲ್ಲಿ ಈ ಹಿಂದೆ ಆಡಳಿತ ನಡೆಸಿದ ಸರಕಾರಗಳಿಗೆ ಮಿಲಿಟರಿಯ ಮೇಲೆ ನಂಬಿಕೆಯಿರಲಿಲ್ಲ. ಆದರೆ ಮೋದಿಯವರು ಮಿಲಿಟರಿಗೆ ಸ್ವಾತಂತ್ರ್ಯ ನೀಡಿ ಪ್ರೋತ್ಸಾಹ ನೀಡಿದ್ದರಿಂದ ಪಾಕಿಸ್ತಾನದ ನೆಲಕ್ಕೇ ನುಗ್ಗಿ ದಾಳಿ ಮಾಡಲಾಯಿತು ಎಂದು ಹೇಳಿದರು.
ಪುಲ್ವಾಮಾ ದಾಳಿಯ ನಂತರ ದೇಶದ 130 ಕೋಟಿ ಜನತೆ ಸರಕಾರದ ಬೆನ್ನಿಗೆ ನಿಂತರು. ಪ್ರಾಣತ್ಯಾಗ ಮಾಡಲು ಯೋಧರು ಸಿದ್ಧರಿದ್ದರು. ಈ ಅಂಶಗಳೇ ಮೋದಿಯವರಿಗೆ ಉಗ್ರರನ್ನು ಮಟ್ಟ ಹಾಕಲು ಪ್ರೇರಣೆ ನೀಡಿದವು ಎಂದು ವಿವರಿಸಿದರು.
ಎಲ್ಲರೂ ತಪ್ಪದೇ ಮತ ಚಲಾಯಿಸಬೇಕು. ಸರಣಿ ರಜೆಗಳಿವೆ ಎಂದು ಪ್ರವಾಸಕ್ಕೆ ಅಥವಾ ಹುಟ್ಟೂರಿಗೆ ತೆರಳಬೇಡಿ. ಮತದಾನ ಮಾಡಿದ ನಂತರ ನಿಮ್ಮ ಕಾರ್ಯಕ್ರಮಗಳನ್ನು ಹಾಕಿಕೊಳ್ಳಿ. ದೇಶದಲ್ಲಿ ಮತ್ತೊಮ್ಮೆ ಮೋದಿ ಎಂಬ ಘೋಷಣೆ ಎಲ್ಲೆಡೆ ಮೊಳಗುತ್ತಿದ್ದು ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡೋಣ. ನನ್ನನ್ನು ಪುನಃ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.