ಲೋಕಸಭಾ ಚುನಾವಣೆ: 'ಯುವ ಅಜೆಂಡಾ-2019’ ಪ್ರಣಾಳಿಕೆ ಬಿಡುಗಡೆ

Update: 2019-04-01 17:06 GMT

ಬೆಂಗಳೂರು, ಎ.1: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉದ್ಯೋಗಕ್ಕಾಗಿ ಯುವಜನರು ಹಾಗೂ ಗುತ್ತಿಗೆ ನೌಕರರ ಒಕ್ಕೂಟದ ವತಿಯಿಂದ ‘ಯುವ ಅಜೆಂಡಾ-2019’ ಎಂಬ ಹೆಸರಿನಲ್ಲಿ ರಾಜಕೀಯ ಪಕ್ಷಗಳ ಮುಂದೆ ಯುವಜನರ ಪ್ರಣಾಳಿಕೆ ಮುಂದಿಟ್ಟಿದ್ದಾರೆ.

ಗುತ್ತಿಗೆ ಕಾರ್ಮಿಕರು ಮತ್ತು ನೌಕರರಿಗೆ ಉದ್ಯೋಗ ಭದ್ರತೆ ಮತ್ತು ಸಮಾನ ವೇತನ, ತಾರತಮ್ಯವಿಲ್ಲದ ಉದ್ಯೋಗ ನೀತಿ ಜಾರಿಗೊಳಿಸಬೇಕು ಸೇರಿದಂತೆ ಹಲವು ಹಕ್ಕೊತ್ತಾಯಗಳನ್ನು ರಾಜಕೀಯ ಪಕ್ಷಗಳ ಮುಂದಿಟ್ಟಿದ್ದು, ಯುವಕರಿಗೆ ಉದ್ಯೋಗ ಸೃಷ್ಟಿಸುವ ಮತ್ತು ಗುತ್ತಿಗೆ ನೌಕರರಿಗೆ ಖಾಯಂ ಉದ್ಯೋಗ ಭರವಸೆ ನೀಡುವ ಅಭ್ಯರ್ಥಿಗಳಿಗೆ ನಾವು ಮತ ನೀಡಲಿದ್ದೇವೆ ಎಂದು ಘೋಷಿಸಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಭರವಸೆ ನೀಡುವುದು, ರಾಜಕೀಯ ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಮಾಡುವುದು ಸಹಜ. ಆದರೆ, ರಾಜ್ಯದ ವಿವಿಧ ಜಿಲ್ಲೆಗಳಿಂದ 30 ಸಾವಿರಕ್ಕೂ ಹೆಚ್ಚು ಯುವಕರು ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಪ್ರಣಾಳಿಕೆಯನ್ನು ಅಭ್ಯರ್ಥಿಗಳಿಗೆ ನೀಡಿದ್ದೇವೆ. ಅಲ್ಲದೆ, ಅದನ್ನು ಒಪ್ಪುವವರನ್ನು ಆಯ್ಕೆ ಮಾಡಲು ಸಿದ್ಧರಿದ್ದು, ಆಯ್ಕೆಯಾದ ನಂತರ ಅಭ್ಯರ್ಥಿಗಳು ನೀಡಿದ ಭರವಸೆ ಈಡೇರಿಸದಿದ್ದಲ್ಲಿ ಪ್ರಶ್ನಿಸಲು ಸಿದ್ಧರಾಗಿದ್ದೇವೆ ಎಂದು ಒಕ್ಕೂಟದ ಸಂಚಾಲಕ ಮುತ್ತುರಾಜ್ ಹೇಳಿದ್ದಾರೆ.

ನಿರುದ್ಯೋಗ ಸಮಸ್ಯೆಗೆ ಕಡಿವಾಣ ಹಾಕುವ ಮತ್ತು ಯುವಜನರು ಉದ್ಯೋಗ ಮಾಡಲು ಪೂರಕ ವಾತಾವರಣವನ್ನು ಸೃಷ್ಟಿಸುವ ಸಮರ್ಥ ನಾಯಕರಿಗೆ ಮತ ನೀಡಲು ಮುಂದಾಗಿದ್ದೇವೆ. ರಾಜ್ಯದ 21 ಜಿಲ್ಲೆಗಳಲ್ಲಿನ ಯುವಜನರು ಈ ಆಂದೋಲನದಲ್ಲಿ ಪಾಲ್ಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಯುವಕರನ್ನು ಕೇವಲ ಮತಬ್ಯಾಂಕ್‌ಗೆ ಬಳಸಿಕೊಳ್ಳಲಾಗುತ್ತಿದ್ದು, ಅವರ ಭವಿಷ್ಯದ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ಹೀಗಾಗಿ, ಒಕ್ಕೂಟದ ಸದಸ್ಯರು ಮನೆ ಮನೆಗೆ ತೆರಳಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಕೇವಲ ಉದ್ಯೋಗ ಸೃಷ್ಟಿಯಲ್ಲ, ಉದ್ಯೋಗದಲ್ಲಿ ಭದ್ರತೆ ಮತ್ತು ಆದಾಯ ಖಾತರಿಯನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ 7.3ರಷ್ಟಿದ್ದು, ರಾಜ್ಯದಲ್ಲಿ ಶೇ 1.5 ರಷ್ಟು ನಿರುದ್ಯೋಗಿಗಳಿದ್ದಾರೆ. ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದ್ದು, ರಾಜಕೀಯ ಪಕ್ಷದ ನಾಯಕರು ಈ ಸಮಸ್ಯೆಗಳನ್ನು ಪರಿಹರಿಸುವುದರ ಬಗ್ಗೆ ಮಾತನಾಡುತ್ತಿಲ್ಲ. ಹೀಗಾಗಿ ನಾವೇ ಅವರ ಮುಂದೆ ಪ್ರಣಾಳಿಕೆಯನ್ನು ಇಟ್ಟಿದ್ದೇವೆ ಎಂದು ಒಕ್ಕೂಟದ ಮತ್ತೊಬ್ಬ ಸಂಚಾಲಕ ಸರೋವರ್ ಬೆಂಕಿಕೆರೆ ಅಭಿಪ್ರಾಯಪಟ್ಟಿದ್ದಾರೆ.

ಆಯ್ದ ಜಿಲ್ಲೆಗಳಲ್ಲಿ ರಾಜಕೀಯ ಅಭ್ಯರ್ಥಿಗಳ ಮುಖಾಮುಖೀ ಸಂವಾದವನ್ನು ನಡೆಸಲು ಉದ್ದೇಶಿಸಲಾಗಿದೆ. ಯಾರು ಉದ್ಯೋಗಕ್ಕಾಗಿ ಯುವಜನರು ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡುವವರಿಗೆ ಮತ ಚಲಾಯಿಸಬೇಕು ಎಂದು ನಿರ್ಣಯಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News