ಅಝರ್‌ನನ್ನು ಉಗ್ರ ಪಟ್ಟಿಗೆ ಸೇರಿಸುವಲ್ಲಿ ‘ಧನಾತ್ಮಕ ಪ್ರಗತಿ’: ಚೀನಾ

Update: 2019-04-02 05:47 GMT

ಬೀಜಿಂಗ್, ಎ. 2: ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಜೈಶೆ ಮುಹಮ್ಮದ್ ಮುಖ್ಯಸ್ಥ ಮಸೂದ್ ಅಝರ್‌ನನ್ನು ಸೇರಿಸುವ ವಿಷಯದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಇತ್ಯರ್ಥ ಪಡಿಸುವ ಪ್ರಕ್ರಿಯೆಯಲ್ಲಿ ‘ಧನಾತ್ಮಕ ಪ್ರಗತಿ’ ಸಾಧಿಸಲಾಗಿದೆ ಎಂದು ಚೀನಾ ಸೋಮವಾರ ಹೇಳಿದೆ.

ಅಝರ್‌ನನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸುವುದನ್ನು ನೇರವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತೆಗೆದುಕೊಂಡು ಹೋಗುವ ಮೂಲಕ ಅಮೆರಿಕವು ವಿಷಯವನ್ನು ಗೋಜಲುಗೊಳಿಸಿದೆ ಎಂಬುದಾಗಿ ಚೀನಾ ವಿದೇಶ ಸಚಿವಾಲಯ ಆರೋಪಿಸಿದೆ ಹಾಗೂ ಈ ಕ್ರಮವು ದಕ್ಷಿಣ ಏಶ್ಯದ ಶಾಂತಿಗೆ ವಿರುದ್ಧವಾಗಿದೆ ಎಂದು ಅದು ಹೇಳಿದೆ.

‘‘ಅಝರ್‌ನನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸುವ ನಿರ್ಣಯವನ್ನು ಮಂಡಿಸಿದ ಬಳಿಕ, ಚೀನಾವು ವಿವಿಧ ಪಕ್ಷಗಳೊಂದಿಗೆ ನಿಕಟ ಸಂಪರ್ಕ ಮತ್ತು ಸಮನ್ವಯವನ್ನು ಹೊಂದಿದೆ ಹಾಗೂ ಧನಾತ್ಮಕ ಪ್ರಗತಿಯನ್ನು ಸಾಧಿಸಲಾಗಿದೆ. ಇದು ಅಮೆರಿಕಕ್ಕೆ ಚೆನ್ನಾಗಿ ಗೊತ್ತಿದೆ’’ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಆದಾಗ್ಯೂ, ಆ ‘ಧನಾತ್ಮಕ ಪ್ರಗತಿ’ ಏನು ಎನ್ನುವುದನ್ನು ಅವರು ವಿವರಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News