×
Ad

ಆತ್ಮೀಯ ದೂರವಾಣಿ ಕರೆ; ಟ್ರಂಪ್ ಜತೆ ವ್ಯಾಪಾರ, ರಕ್ಷಣೆ ಬಗ್ಗೆ ಚರ್ಚಿಸಿದ ಮೋದಿ

Update: 2025-12-12 07:54 IST

x.com/PTI_News

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಗುರುವಾರ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರದ ವೇಗ ಕಾಯ್ದುಕೊಳ್ಳುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ದೂರವಾಣಿ ಮೂಲಕ ಚರ್ಚಿಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ. ಅಮೆರಿಕದ ವ್ಯಾಪಾರ ನೀತಿಯಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧ ಕೆಲ ತಿಂಗಳುಗಳಿಂದ ಹದಗೆಟ್ಟಿರುವ ಹಿನ್ನೆಲೆಯಲ್ಲಿ ವ್ಯಾಪಾರ ಒಪ್ಪಂದಕ್ಕೆ ಬರುವ ನಿಟ್ಟಿನಲ್ಲೂ ಚರ್ಚೆ ನಡೆದಿದೆ ಎನ್ನಲಾಗಿದೆ.

ಕಳೆದ ಅಕ್ಟೋಬರ್‌ನಲ್ಲಿ ಅಮೆರಿಕದ ಉಪ ವ್ಯಾಪಾರ ಪ್ರತಿನಿಧಿ ರಿಕ್ ಸ್ವಿಡ್ಜರ್ ಭಾರತಕ್ಕೆ ಎರಡು ದಿನಗಳ ಭೇಟಿ ನೀಡಿ ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಜತೆ ಚರ್ಚಿಸಿದ ಬಳಿಕ ಇದೇ ಮೊದಲ ಬಾರಿಗೆ ಉಭಯ ದೇಶಗಳ ಮುಖಂಡರು ದೂರವಾಣಿ ಸಂಭಾಷಣೆ ನಡೆಸಿದರು.

"ಡೊನಾಲ್ಡ್ ಟ್ರಂಪ್ ಅವರ ಜತೆ ಆತ್ಮೀಯ ಸಂಭಾಷಣೆ ನಡೆಯಿತು. ನಮ್ಮ ದ್ವಿಪಕ್ಷೀಯ ಸಂಬಂಧಗಳ ಪ್ರಗತಿಯನ್ನು ಪರಾಮರ್ಶಿಸಿದ್ದು, ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದೇವೆ. ಜಾಗತಿಕ ಶಾಂತಿ, ಸಮೃದ್ಧಿ ಮತ್ತು ಭದ್ರತೆಗಾಗಿ ಭಾರತ ಹಾಗೂ ಅಮೆರಿಕ ಜತೆಯಾಗಿ ಶ್ರಮಿಸಲಿವೆ" ಎಂದು ಮೋದಿ ಫೋನ್ ಸಂಭಾಷಣೆ ಬಳಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ.

ದ್ವಿಪಕ್ಷೀಯ ವ್ಯಾಪಾರವನ್ನು ವಿಸ್ತರಿಸುವ ಮಹತ್ವದ ಬಗ್ಗೆ ಉಭಯ ದೇಶಗಳ ಮುಖಂಡರು ಒಲವು ತೋರಿದರು ಎನ್ನಲಾಗಿದೆ. ಪ್ರಮುಖ ತಂತ್ರಜ್ಞಾನಗಳು, ವಿದ್ಯುತ್, ರಕ್ಷಣೆ, ಭದ್ರತೆ ಮತ್ತಿತರ ಮಹತ್ವದ ವಿಷಯಗಳ ಬಗ್ಗೆಯೂ ಉಭಯ ಮುಖಂಡರು ಚರ್ಚಿಸಿದರು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News