ಪ್ರವಾಹದಲ್ಲಿ ಮುಳುಗಿದ ಗಾಝಾದ ಡೇರೆ: ಶಿಶು ಮೃತ್ಯು
ಸಾವಿರಾರು ಮಂದಿ ಸ್ಥಳಾಂತರ: ವರದಿ
Photo Credit ; aljazeera.com
ಗಾಝಾ, ಡಿ.11: ಗಾಝಾ ಪಟ್ಟಿಯಾದ್ಯಂತ ಗುರುವಾರ ಸುರಿದ ಧಾರಾಕಾರ ಮಳೆ ಮತ್ತು ಪ್ರವಾಹದಿಂದ ಸ್ಥಳಾಂತರಗೊಂಡವರು ಆಶ್ರಯ ಪಡೆದಿದ್ದ ಡೇರೆಗಳು ಜಲಾವೃತಗೊಂಡಿದ್ದು ಹೆಣ್ಣು ಮಗುವೊಂದು ಸಾವನ್ನಪ್ಪಿರುವುದಾಗಿ ಸ್ಥಳೀಯ ವೈದ್ಯಾಧಿಕಾರಿಗಳು ಹೇಳಿದ್ದಾರೆ.
ದಕ್ಷಿಣ ಗಾಝಾದ ಖಾನ್ ಯೂನಿಸ್ ನಗರದಲ್ಲಿ ಸ್ಥಳಾಂತರಗೊಂಡವರಿಗಾಗಿ ನಿರ್ಮಿಸಲಾಗಿದ್ದ ಡೇರೆಗಳು ನೀರಿನಲ್ಲಿ ಮುಳುಗಿದ್ದು 8 ತಿಂಗಳ ಹೆಣ್ಣು ಮಗು ಸಾವನ್ನಪ್ಪಿದೆ. ಇಂಧನ ಕೊರತೆ ಮತ್ತು ಉಪಕರಣಗಳಿಗೆ ಹಾನಿಯಾಗಿರುವ ಕಾರಣ ಚಂಡಮಾರುತವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಪುರಸಭೆ ಮತ್ತು ನಾಗರಿಕ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಯುದ್ಧದ ಸಂದರ್ಭ ಇಸ್ರೇಲ್ ನ ದಾಳಿಯಿಂದಾಗಿ ಬುಲ್ಡೋಝರ್ ಗಳು, ನೀರನ್ನು ತೆರವುಗೊಳಿಸುವ ಪಂಪ್ ಗಳು ಮತ್ತಿತರ ನೂರಾರು ಸಾಧನಗಳು ನಾಶಗೊಂಡಿವೆ. ಗಾಝಾದ್ಯಂತ ಬಹುತೇಕ ಡೇರೆಗಳು, ತಾತ್ಕಾಲಿಕ ಆಶ್ರಯ ಕೇಂದ್ರಗಳು ಪ್ರವಾಹದಲ್ಲಿ ಮುಳುಗಿದ್ದು ತುರ್ತು ಸಹಾಯ ಕೋರಿದ 2,500ಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿರುವುದಾಗಿ ನಾಗರಿಕ ರಕ್ಷಣಾ ಸೇವೆ ಹೇಳಿದೆ.
ಜಲಾವೃತಗೊಂಡಿರುವ ಡೇರೆಗಳಿಂದ ಪಾತ್ರೆ ಮತ್ತಿತರ ಸಾಮಾನುಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುವುದಾಗಿ ವರದಿಯಾಗಿದೆ.
ಸುಮಾರು 8,50,000 ಮಂದಿಗೆ ಆಶ್ರಯ ಕಲ್ಪಿಸಿರುವ 761 ತಾತ್ಕಾಲಿಕ ಆಶ್ರಯ ತಾಣಗಳು ಪ್ರವಾಹದ ಅಪಾಯದ ಅಂಚಿನಲ್ಲಿದ್ದು ಸಾವಿರಾರು ಜನರು ಸ್ಥಳಾಂತರಗೊಂಡಿರುವುದಾಗಿ ವಿಶ್ವಸಂಸ್ಥೆಯ ವರದಿ ಹೇಳಿದೆ.