ಏಕದಿನ: ಆಸೀಸ್ ವಿರುದ್ಧ ಪಾಕ್ ಧೂಳಿಪಟ

Update: 2019-04-02 08:50 GMT

ದುಬೈ, ಎ.1: ಹಾರಿಸ್ ಸೊಹೈಲ್‌ರ ಭರ್ಜರಿ ಶತಕದ ಮಧ್ಯೆಯೂ 5ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಆಸ್ಟ್ರೇಲಿಯ 20 ರನ್‌ಗಳಿಂದ ಮಣಿಸಿದೆ. ಆ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯನ್ನು 5-0ಯಿಂದ ವಶಪಡಿಸಿಕೊಂಡು ಪಾರಮ್ಯ ಸಾಧಿಸಿದೆ.

ಇಲ್ಲಿ ರವಿವಾರ ರಾತ್ರಿ ಮುಕ್ತಾಯವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ 7 ವಿಕೆಟ್ ನಷ್ಟಕ್ಕೆ 327 ರನ್‌ಗಳ ಬೃಹತ್ ಮೊತ್ತ ಜಮೆ ಮಾಡಿತ್ತು. ಸೊಹೈಲ್‌ರ ಶತಕದ (130, 129 ಎಸೆತ) ಸಹಾಯದಿಂದ ಪಾಕಿಸ್ತಾನವು ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 307 ರನ್ ಗಳಿಸಲಷ್ಟೇ ಶಕ್ತವಾಯಿತು. ಪಾಕ್‌ನ ಶಾನ್ ಮಸೂದ್ (50) ಹಾಗೂ ಇಮಾದ್ ವಾಸೀಂ (ಅಜೇಯ 50) ಅರ್ಧಶತಕಗಳ ಕಾಣಿಕೆ ನೀಡಿದರು.

ಆಸ್ಟ್ರೇಲಿಯ ತಂಡದ ಪರ ಬ್ಯಾಟಿಂಗ್‌ನಲ್ಲಿ ಶತಕ ವಂಚಿತ ಉಸ್ಮಾನ್ ಖ್ವಾಜಾ (98), ಗ್ಲೆನ್ ಮ್ಯಾಕ್ಸ್ ವೆಲ್ (70, 33 ಎಸೆತ), ಶಾನ್ ಮಾರ್ಷ್ (61) ಹಾಗೂ ನಾಯಕ ಆ್ಯರೊನ್ ಫಿಂಚ್ (53) ಮಿಂಚು ಹರಿಸಿದರು. ಪಾಕ್‌ನ ಉಸ್ಮಾನ್ ಶಿನ್ವಾರಿ 4 ವಿಕೆಟ್ ಕಿತ್ತರು. ಸರಣಿಯಲ್ಲಿ 2 ಶತಕ ಹಾಗೂ 2 ಅರ್ಧಶತಕ ಬಾರಿಸಿ ಅತ್ಯುತ್ತಮ ಪ್ರದರ್ಶನ ತೋರಿದ ಆಸೀಸ್ ನಾಯಕ ಫಿಂಚ್‌ಗೆ ಸರಣಿ ಶ್ರೇಷ್ಠ ಗೌರವ ಒಲಿಯಿತು. ಗ್ಲೆನ್ ಮ್ಯಾಕ್ಸ್‌ವೆಲ್ ಪಂದ್ಯಶ್ರೇಷ್ಠರಾದರು.

ಭಾರತದ ವಿರುದ್ಧ 3-2ರಿಂದ ಏಕದಿನ ಸರಣಿ ಗೆದ್ದ ಬಳಿಕ ಆಸ್ಟ್ರೇಲಿಯ ತಂಡಕ್ಕೆ ಈ ಜಯ ಸತತ 8 ಪಂದ್ಯಗಳಲ್ಲಿ ಜಯಿಸಿದ ಖುಷಿ ತಂದಿದೆ. ಭಾರತದ ವಿರುದ್ಧದ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳನ್ನು ಸೋತಿದ್ದ ಆಸೀಸ್ ಆ ಬಳಿಕದ ಮೂರು ಪಂದ್ಯಗಳಲ್ಲಿ ಜಯ ಕಂಡಿತ್ತು. ಪಾಕ್ ವಿರುದ್ಧದ ಸರಣಿ ವಿಜಯವು ಕಾಂಗರೂ ಪಡೆಗೆ 2002ರ ಸರಣಿ ಸೋತ ಬಳಿಕ (ಆಸ್ಟ್ರೇಲಿಯದಲ್ಲಿ) ದೊರೆತ ಸತತ 6ನೇ ಸರಣಿ ಜಯವಾಗಿದೆ. ಪಾಕ್ ವಿರುದ್ಧ ಸಾಧಿಸಿದ ನಾಲ್ಕನೇ ವೈಟ್‌ವಾಶ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News